ದೇಶದ ಪ್ರಗತಿಗೆ ಗುಣಮಟ್ಟದ ಶಿಕ್ಷಣ ಅವಶ್ಯಕ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.

ಕೊಪ್ಪಳ: ದೇಶದ ಪ್ರಗತಿಗೆ ಗುಣಮಟ್ಟದ ಶಿಕ್ಷಣ ಅವಶ್ಯಕ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಖಾಸಗಿ ಶಾಲೆಗಳ ಒಕ್ಕೂಟದ ತಾಲೂಕು ಘಟಕದಿಂದ ಜರುಗಿದ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಕರು ಮಕ್ಕಳ ಬುದ್ಧಿಮಟ್ಟಕ್ಕೆ ಅನುಗುಣವಾಗಿ ಬೋಧನೆ ಮಾಡಬೇಕು. ದೇಶದ ಪ್ರಗತಿಗೆ ಗುಣಮಟ್ಟದ ಶಿಕ್ಷಣ ಪ್ರಮುಖ ಕಾರಣವಾಗಿದ್ದು, ಖಾಸಗಿ ಶಾಲೆಗಳ ಶಿಕ್ಷಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಸರಕಾರ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಉತ್ತಮವಾಗಿ ಕಾರ್ಯನಿರ್ವಹಿಸಿದ ಶಿಕ್ಷಕರನ್ನು ಸರಕಾರ ಪ್ರಶಸ್ತಿಗೆ ಆಯ್ಕೆ ಮಾಡುತ್ತಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಖಾಸಗಿ ಶಾಲೆಗಳ ಶಿಕ್ಷಕರನ್ನು ಪರಿಗಣಿಸಲಾಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ಶಿಕ್ಷಕರು ಮಕ್ಕಳ ಆಸಕ್ತಿ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋಧನೆ ಮಾಡಬೇಕು. ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ನೆರವು ನೀಡಬೇಕು. ಶಿಕ್ಷಣ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ ಎಂದರು.

ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಮಾತನಾಡಿ, ಸರಕಾರದ ಮಟ್ಟದಲ್ಲಿ ಖಾಸಗಿ ಹಾಗೂ ಸರಕಾರಿ ಶಾಲೆಗಳ ನಡುವೆ ತಾರತಮ್ಯವಿದೆ. ಖಾಸಗಿ ಶಾಲೆಗಳು ಉತ್ತಮ ಫಲಿತಾಂಶ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರೂ ಅವುಗಳಿಗೆ ಸರಕಾರದಿಂದ ಸೂಕ್ತ ನೆರವು ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉದ್ಯಮಿ ಶ್ರೀನಿವಾಸ ಗುಪ್ತಾ ಮಾತನಾಡಿ, ಕುಟುಂಬದ ಒಂದು ಮಗು ಉತ್ತಮ ಶಿಕ್ಷಣ ಪಡೆದರೆ ಇಡೀ ಕುಟುಂಬದ ಬೆಳವಣಿಗೆಗೆ ಕಾರಣವಾಗುತ್ತದೆ. ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಗುರುವಿನ ಸ್ಥಾನ ಪವಿತ್ರವಾದದ್ದು ಎಂದರು.

ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಪ್ರಲ್ಹಾದ ಅಗಳಿ ಮಾತನಾಡಿ, ಖಾಸಗಿ ಶಾಲೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ನವೀಕರಣ ಸೇರಿದಂತೆ ವಿವಿಧ ಕಾರಣಗಳ ನೆಪದಲ್ಲಿ ಶೋಷಣೆ ನಡೆಯುತ್ತಿದೆ. ಶಿಕ್ಷಣ ಸಂಸ್ಥೆ ಆರಂಭಿಸಿ ನಡೆಸಲು ಹಲವು ನಿರ್ಬಂಧಗಳಿದ್ದರೂ ಅವುಗಳ ನಡುವೆ ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಅಧೀನದ ಪ್ರತಿ ಖಾಸಗಿ ಶಾಲೆಯಿಂದ ತಲಾ ಒಬ್ಬ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಒಕ್ಕೂಟದ ಅಧ್ಯಕ್ಷ ಗಿರೀಶ ಕಣವಿ, ಪ್ರಧಾನ ಕಾರ್ಯದರ್ಶಿ ನಿತೇಶ ಪುಲಸ್ಕರ, ಕಾರ್ಯಕಾರಿ ಮಂಡಳಿ ಸದಸ್ಯರಾದ ಹುಲಗಪ್ಪ ಕಟ್ಟಿಮನಿ, ಶಿವಕುಮಾರ ಕುಕನೂರು, ಶಿಕ್ಷಣ ಸಂಸ್ಥೆಗಳ ಮುಖಂಡರಾದ ಶಾರದಾಬಾಯಿ ಪುಲಸ್ಕರ, ಬಸವರಾಜ ಬಳ್ಳೊಳ್ಳಿ, ಕೃಷ್ಣಪ್ಪ ಕಬ್ಬೇರ, ಡಾ. ಶ್ರೀನಿವಾಸ ಹ್ಯಾಟಿ, ಸಂತೋಷ ದೇಶಪಾಂಡೆ, ಜಾನ್ ಫಿಲಿಪ್ಸ್, ಕವಿತಾ ಹಿಟ್ನಾಳ, ಕವಿತಾ ಮಾಟೂರು, ಎಸ್.ಎ. ನಿಂಗೋಜಿ ಸೇರಿದಂತೆ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.