ಸಮಾಜ ಕಟ್ಟುವಲ್ಲಿ ಹಾಗೂ ರಾಷ್ಟ್ರದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಸಂಸದ ಕೆ. ರಾಜಶೇಖರ್ ಬಸವರಾಜ ಹಿಟ್ನಾಳ ಹೇಳಿದರು.
ಕೊಪ್ಪಳ: ಸಮಾಜ ಕಟ್ಟುವಲ್ಲಿ ಹಾಗೂ ರಾಷ್ಟ್ರದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಸಂಸದ ಕೆ. ರಾಜಶೇಖರ್ ಬಸವರಾಜ ಹಿಟ್ನಾಳ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜರುಗಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ಸಮಾಜದಲ್ಲಿ ಖಾಸಗಿ ಶಾಲೆಗಳ ಅಂಕಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದರೂ, ದೇಶದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದ ಹೆಚ್ಚಿನ ಸಾಧಕರು ಸರ್ಕಾರಿ ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿದವರಾಗಿದ್ದಾರೆ. ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಲ್ಲಿ ಕೇವಲ ಶಿಕ್ಷಣವಲ್ಲದೆ, ಜೀವನ ಎದುರಿಸುವ ಧೈರ್ಯ ಮತ್ತು ಸ್ವತಂತ್ರವಾಗಿ ಕಲಿಯುವ ಶಕ್ತಿಯನ್ನು ತುಂಬುತ್ತವೆ. ಶಿಕ್ಷಕರಿಗೆ ಕಲಿಕಾ ಚಟುವಟಿಕೆಗಳಿಗಿಂತ ಜನಗಣತಿ, ಸಮೀಕ್ಷೆ ಸೇರಿದಂತೆ ಇತರೆ ಬೋಧನೇತರ ಕೆಲಸಗಳ ಹೊರೆ ಹೆಚ್ಚಾಗುತ್ತಿದೆ. ಈ ಕೆಲಸಗಳನ್ನು ಬೇರೆ ಏಜೆನ್ಸಿಗಳಿಗೆ ವಹಿಸುವ ಬಗ್ಗೆ ಚರ್ಚೆಗಳು ನಡೆದರೂ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಶಿಕ್ಷಕರ ಮೇಲೆಯೇ ಸರ್ಕಾರಕ್ಕೆ ಹೆಚ್ಚಿನ ನಂಬಿಕೆ ಇದೆ. ಆದರೂ ಶಿಕ್ಷಕರಿಗೆ ಆಧುನಿಕ ಬೋಧನಾ ಕೌಶಲ್ಯ ಮತ್ತು ಅಗತ್ಯ ಉಪಕರಣಗಳನ್ನು ಒದಗಿಸಿ ಕಲಿಕಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದರು.
ಜಿಲ್ಲಾ ಕೇಂದ್ರದಲ್ಲಿ ಶಿಕ್ಷಕರ ದೀರ್ಘಕಾಲದ ಬೇಡಿಕೆಯಾಗಿದ್ದ ಗುರುಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಸೂಕ್ತ ಸಿಎಎಸ್ ಸೈಟ್ ಗುರುತಿಸಿ, ಶಾಸಕರ ಅನುದಾನ ಹಾಗೂ ಸರ್ಕಾರಿ ಅನುದಾನದಡಿ ಸುಮಾರು 1 ಕೋಟಿಯಿಂದ ₹1.5 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತ ಗುರುಭವನ ನಿರ್ಮಾಣ ಮಾಡಲು ಈಗಾಗಲೇ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.ವಿಧಾನಪರಿಷತ್ ಸದಸ್ಯೆ ಹೇಮಲತ್ ನಾಯಕ ಮಾತನಾಡಿ, ಒಂದು ಕಡೆ ಕನ್ನಡ ಶಾಲೆಯಲ್ಲಿ ಕಲಿಯುವ ಆಸಕ್ತಿ ಹೆಚ್ಚಾಗುತ್ತಿದ್ದರೂ ಮತ್ತೊಂದೆಡೆ ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿವೆ. ಪೋಷಕರಲ್ಲಿ ಇಂಗ್ಲಿಷ್ ಮಾಧ್ಯಮದ ಮೇಲಿನ ವ್ಯಾಮೋಹ ಹೆಚ್ಚಾಗಿರುವುದರಿಂದ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಅಗತ್ಯ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಶಿವಾನಂದ, ಶಿಕ್ಷಕ ವೃತ್ತಿಯು ಎಲ್ಲ ವೃತ್ತಿಗಳ ಜನನಿಯಾಗಿದ್ದು, ದೇಶದ ರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ಮಿಲಿಟರಿ ಆಫೀಸರ್ ಸೇರಿದಂತೆ ಯಾರೇ ಆಗಿರಲಿ, ಅವರನ್ನು ರೂಪಿಸುವ ಶಕ್ತಿ ಶಿಕ್ಷಕರ ಕೈಯಲ್ಲಿದೆ. ಅದರಲ್ಲಿಯೂ ಪ್ರಾಥಮಿಕ ಶಾಲಾ ಶಿಕ್ಷಕರ ವೃತ್ತಿ ಅತ್ಯಂತ ಅದ್ಭುತ ಹಾಗೂ ಶಕ್ತಿಯುತವಾದದ್ದು ಎಂದರು.ಸನ್ಮಾನ: ಈ ವೇಳೆ ಜಿಲ್ಲಾ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ. ರೆಡ್ಡಿ ಶ್ರೀನಿವಾಸ, ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ, ಶಾಲಾ ಶಿಕ್ಷಣ ಇಲಾಖೆ ಹಾಗೂ ಡಯಟ್ ಉಪನಿರ್ದೇಶಕ ಅನಂತಕುಮಾರ ಎ.ಎಸ್., ಸೇರಿಂದತೆ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬೋಧಕೇತರ ನೌಕರರ ಸಂಘ, ರಾಜ್ಯ ಶಿಕ್ಷಣಾಧಿಕಾರಿಗಳ ಸಂಘ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬೋಧಕೇತರ ನೌಕರರ ಸಂಘ ಹಾಗೂ ಕೊಪ್ಪಳ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಂಘಗಳ ಸರ್ವ ಪದಾಧಿಕಾರಿಗಳು ಮತ್ತು ಜಿಲ್ಲೆಯ ಸಮಸ್ತ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ನೌಕರ ವೃಂದ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಇದ್ದರು.