ಮೋದಿ ಸಾಗುವ ಮಾರ್ಗದಲ್ಲಿ ಜಿಲೆಟಿನ್‌ ಕಡ್ಡಿ ಪತ್ತೆ

KannadaprabhaNewsNetwork |  
Published : May 11, 2026, 02:00 AM IST
Kaggalipura `5 | Kannada Prabha

ಸಾರಾಂಶ

ಪ್ರಧಾನಿ ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಭಾನುವಾರ ಬೆಳಗ್ಗೆ ಎರಡು ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು/ರಾಮನಗರ:

ಪ್ರಧಾನಿ ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಭಾನುವಾರ ಬೆಳಗ್ಗೆ ಎರಡು ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕನಕಪುರ ರಸ್ತೆಯಲ್ಲಿರುವ ಆರ್ಟ್‌ ಆಫ್‌ ಲಿವಿಂಗ್‌ನ ಧ್ಯಾನಮಂದಿರ ಉದ್ಘಾಟನೆಗೆ ಪ್ರಧಾನಿ ಮೋದಿ ತೆರಳುವ ಒಂದೂವರೆ ಗಂಟೆಗೆ ಮೊದಲು ಈ ಜೆಲೆಟಿನ್‌ ಕಡ್ಡಿಗಳು ಪತ್ತೆಯಾಗಿದೆ. ಕಗ್ಗಲಿಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ತಾತಗುಣಿ ಬಳಿಯ ಒಡೆಯರಹಳ್ಳಿ ಗೇಟ್‌ ಬಳಿ ಬೆಳಗ್ಗೆ 10.30ರ ಸುಮಾರಿಗೆ ಎರಡು ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿದ್ದು, ಇದು ತೀವ್ರ ಆತಂಕಕ್ಕೆ ಕಾರಣವಾಗಿತ್ತು.

ಘಟನೆ ಹಿನ್ನೆಲೆಯಲ್ಲಿ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ, ಪ್ರಕರಣದ ಕುರಿತು ತನಿಖೆಗೆ ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ತನಿಖಾ ತಂಡಗಳನ್ನೂ ರಚಿಸಲಾಗಿದೆ.

ಅನುಮಾನಾಸ್ಪದ ಪ್ಯಾಕೆಟ್‌ನಲ್ಲಿ ಪತ್ತೆ:

ನೈಸ್ ರಸ್ತೆ ಜಂಕ್ಷನ್‌ನಿಂದ ಸುಮಾರು ಒಂದು ಕಿಲೋಮೀಟರ್ ಹಾಗೂ ರಸ್ತೆಯಿಂದ ಸುಮಾರು 50 ಮೀಟರ್‌ ದೂರದಲ್ಲಿರುವ ಕಾಂಪೌಂಡ್ ಬಳಿ ಅನುಮಾನಾಸ್ಪದ ಪ್ಯಾಕೆಟ್ ಒಂದನ್ನು ಕರ್ತವ್ಯ ನಿರತ ಕಾನ್‌ಸ್ಟೆಬಲ್‌ ಗಮನಿಸಿದ್ದಾರೆ. ಆ ಪ್ಯಾಕೆಟ್ ಪರಿಶೀಲಿಸಿದಾಗ ಅದರಲ್ಲಿ ಎರಡು ಜಿಲೆಟಿನ್ ಕಡ್ಡಿಗಳು ಕಂಡುಬಂದಿದೆ. ತಕ್ಷಣ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆ್ಯಂಟಿ ಸಬೊಟೇಜ್ ಚೆಕ್ (ಎಎಸ್‌ಸಿ) ತಂಡ, ಬಾಂಬ್‌ ನಿಷ್ಕ್ರಿಯ ದಳ, ಎಫ್‌ಎಸ್‌ಎಲ್‌ ತಂಡ ಸ್ಥಳಕ್ಕೆ ದೌಡಾಯಿಸಿ ತೀವ್ರ ತಪಾಸಣೆ ನಡೆಸಿ ಜಿಲೆಟಿನ್ ಕಡ್ಡಿಗಳನ್ನು ತೆರವುಗೊಳಿಸಿ ಯಾವುದೇ ಅನಾಹುತವಾಗದಂತೆ ಕ್ರಮ ಕೈಗೊಂಡರು. ಯಾವುದೇ ಅಪಾಯವಿಲ್ಲ ಎಂದು ಖಚಿತವಾದ ನಂತರ ಪ್ರಧಾನಿಗಳು ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಘಟನೆ ಸಂಬಂಧ ಬೆಂಗಳೂರು ನಗರ ಪೊಲೀಸರು ಮತ್ತು ರಾಮನಗರ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.

ಹೈ ಅಲರ್ಟ್‌:

ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದ ನಂತರ ಕನಕಪುರ ರಸ್ತೆಯಲ್ಲಿರುವ ಆರ್ಟ್‌ ಆಫ್‌ ಲಿವಿಂಗ್‌ನ ಧ್ಯಾನಮಂದಿರ ಉದ್ಘಾಟನೆಗೆ ಪ್ರಧಾನಿ ತೆರಳಬೇಕಿತ್ತು. ಆದರೆ ಅದಕ್ಕೂ ಮುನ್ನ ಜಿಲೆಟಿನ್‌ ಕಡ್ಡಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಹೈ ಅಲರ್ಟ್‌ ಘೋಷಿಸಿದರು. ಎಚ್‌ಎಎಲ್‌ ಏರ್‌ಪೋರ್ಟ್‌ನಿಂದ ಕನಕಪುರ ರಸ್ತೆಯಲ್ಲಿರುವ ಆರ್ಟ್‌ ಆಫ್‌ ಲಿವಿಂಗ್‌ವರೆಗೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಯಾವುದೇ ಅನಾಹುತ ಸಂಭವಿಸದ ಹಿನ್ನೆಲೆಯಲ್ಲಿ ಪೊಲೀಸರು ನಿಟ್ಟುಸಿರು ಬಿಟ್ಟರು.

ಅಪರಿಚಿತನ ಕರೆಯಿಂದ ಎಚ್ಚೆತ್ತ ಪೊಲೀಸರು:

ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ತುರ್ತು ಸಹಾಯವಾಣಿ 112ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಆರ್ಟ್ ಆಫ್ ಲಿವಿಂಗ್ ಬಳಿ ಸ್ಫೋಟ ನಡೆಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ತಕ್ಷಣ ಅಲರ್ಟ್ ಆದ ಸಹಾಯವಾಣಿಯವರು ಬೆಂಗಳೂರು, ರಾಮನಗರ ಭಾಗದ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಬೆಂಗಳೂರು ಪೊಲೀಸರು ತಕ್ಷಣ ಎಚ್‌ಎಎಲ್‌ ಬಳಿ ತೀವ್ರ ಶೋಧ ನಡೆಸಿದ್ದಾರೆ. ಈ ಮಧ್ಯೆ, ರಾಮನಗರ ಪೊಲೀಸರು ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದ ಸುತ್ತಮುತ್ತ ತೀವ್ರ ತಪಾಸಣೆ ನಡೆಸಿದಾಗ ಆಶ್ರಮದ ಹೊರಗಿನ ರಸ್ತೆಯ 50 ಮೀಟರ್‌ ದೂರದಲ್ಲಿ ಕಸದ ಬಳಿ 5 ಇಂಚಿನ ಎರಡು ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿದೆ. ಘಟನೆಯಿಂದಾಗಿ ಪ್ರಧಾನಿ ಭೇಟಿ ತುಸು ವಿಳಂಬವಾಯಿತು ಎನ್ನಲಾಗಿದೆ.

ಬೆದರಿಕೆ ಹಾಕಿದವ ವಶಕ್ಕೆ:

ತುರ್ತು ಸಹಾಯವಾಣಿಗೆ ಬೆದರಿಕೆ ಕರೆ ಮಾಡಿದ್ದ ಶಂಕೆ ಮೇರೆಗೆ ಕೋರಮಂಗಲ ಠಾಣೆ ಪೊಲೀಸರು ಲೋಹಿತ್‌ (40) ಎಂಬಾತನನ್ನು ಕೋರಮಂಗಲದ ಕೆಎಚ್‌ಬಿ ಕಾಲೊನಿಯಲ್ಲಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಈತ ಹಿಂದೆಯೂ ಗಣ್ಯರು ನಗರಕ್ಕೆ ಬಂದಾಗಲೆಲ್ಲ ಇದೇ ರೀತಿ ಹುಸಿ ಬಾಂಬ್ ಕರೆಗಳನ್ನು ಮಾಡುತ್ತಿದ್ದ ಎಂಬ ವಿಷಯ ಬಯಲಾಗಿದೆ. ಈ ಹಿಂದೆ ಈತನನ್ನು ವಶಕ್ಕೆ ಪಡೆದಿದ್ದಾಗ ಆತನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬ ಕಾರಣಕ್ಕೆ ಪೊಲೀಸರು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದರು. ಆರೋಪಿ ರೋಹಿತ್‌ ಪದವೀಧರನಾಗಿದ್ದು, ಈತನ ತಂದೆ ತಾಯಿ ಸರ್ಕಾರಿ ನೌಕರಿಯಲ್ಲಿದ್ದಾರೆ. ಕೌಟುಂಬಿಕ ವಿಚಾರಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ. ಪ್ರಧಾನಿಗಳು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಕರೆ ಮಾಡಿ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ರಹಸ್ಯ ಸ್ಥಳದಲ್ಲಿರಿಸಿ ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್‌ ಸುಜಿತಾ ಅವರು ವಿಚಾರಣೆ ನಡೆಸುತ್ತಿದ್ದಾರೆ.ಕಲ್ಲು ಕ್ವಾರಿಗೆ ಬಳಸುವ ಜಿಲೆಟಿನ್‌!:

ಪತ್ತೆಯಾದ ಜಿಲೆಟಿನ್ ಕಡ್ಡಿಗಳು ಕಲ್ಲು ಕ್ವಾರಿ ಸ್ಫೋಟಿಸಲು ಬಳಸುವಂತಹ ಸ್ಫೋಟಕ ಎಂಬ ಅನುಮಾನದ ಮೇರೆಗೆ ಪೊಲೀಸರು ತಾತಗುಣಿ ಸುತ್ತಮುತ್ತಲಿನ ಕಾರ್ಮಿಕರನ್ನು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.

ತನಿಖೆಗಾಗಿ ನಾಲ್ಕು ತಂಡಗಳ ರಚನೆ:

ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆಯಾದ ಪ್ರಕರಣದ ತನಿಖೆಗಾಗಿ ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚನೆ ಮಾಡಿ ಬೆಂಗಳೂರು ದಕ್ಷಿಣ ಜಿಲ್ಲೆ ಎಸ್ಪಿ ಶ್ರೀನಿವಾಸ್‌ ಗೌಡ ಆದೇಶಿಸಿದ್ದಾರೆ. ಘಟನೆ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದ ತನಿಖೆಗಾಗಿ 50 ಪೊಲೀಸರನ್ನೊಳಗೊಂಡ 4 ತಂಡಗಳನ್ನು ರಚಿಸಲಾಗಿದೆ. ಜಿಲೆಟಿನ್ ಕಡ್ಡಿ ಹೇಗೆ ಬಂತು? ಯಾರು ತಂದು ಹಾಕಿದ್ದಾರೆ? ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಅಲ್ಲದೆ, ಸುತ್ತಮುತ್ತಲಿನ ಕಲ್ಲು ಕ್ವಾರಿಗಳು, ಗೋದಾಮುಗಳಲ್ಲಿಯೂ ಪರಿಶೀಲನೆ ನಡೆಸಿದ್ದಾರೆ.

ಪ್ರಧಾನಿ ಸಾಗುವ ದಾರಿ ಉದ್ದಕ್ಕೂ 7 ಹಂತದ ಭದ್ರತೆ ಕಲ್ಪಿಸಲಾಗಿರುತ್ತದೆ. ಅಲ್ಲದೆ ಒಂದು ವಾರ ಮುಂಚಿತವಾಗಿ ಬಂದು ತೀವ್ರ ಪರಿಶೀಲನೆ ನಡೆಸುತ್ತಾರೆ. ಈ ಮಧ್ಯೆ ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿದ್ದು, ಪೊಲೀಸರ ತಲೆ ಬಿಸಿ ಹೆಚ್ಚಾಗುವಂತೆ ಮಾಡಿತ್ತು.

-ಕೋಟ್‌-

ತಾತಗುಣಿ ಸಮೀಪದ ಆಶ್ರಮದ ಹೊರಗಡೆ ಎರಡು ಜಿಲೆಟಿನ್ ಕಡ್ಡಿಗಳು ಸಿಕ್ಕಿದೆ. ಭಾನುವಾರ ಬೆಳಗ್ಗೆ ಕೋರಮಂಗಲ ಪೊಲೀಸರಿಗೆ ವ್ಯಕ್ತಿ ಓರ್ವ ಬೆದರಿಕೆ ಕರೆ ಮಾಡಿದ್ದ. ಆತನಿಗೂ ಈ ಜಿಲೆಟಿನ್‌ ಕಡ್ಡಿಗೂ ಸಂಬಂಧ ಇದೆಯೇ, ಇಲ್ವೇ ಅಂತ ತನಿಖೆ ಮಾಡಲಾಗುತ್ತಿದೆ. ಜೆಲೆಟಿನ್ ಕಡ್ಡಿಗಳು ಯಾರು ಇಟ್ಟಿದ್ದಾರೆ ಎಂಬುದು ಪತ್ತೆಯಾಗಿಲ್ಲ. ಅವರಿಗಾಗಿ ಹುಡುಕಾಟ ನಡೆಸಲಾಗಿದೆ.

-ಗಿರೀಶ್, ಕೇಂದ್ರ ವಲಯ ಡಿಐಜಿಪ್ರಧಾನಿಗಳು ಬರುವ ಎರಡು ಗಂಟೆ ಮುಂಚಿತವಾಗಿ ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಆಗಿಲ್ಲ. ಕಂಟ್ರೋಲ್ ರೂಂಗೆ ಬಂದಿರುವ ಕರೆಗೂ, ಈ ಘಟನೆಗೂ ಮೇಲ್ನೋಟಕ್ಕೆ ಸಂಬಂಧವಿಲ್ಲ ಅಂತ ಗೊತ್ತಾಗಿದೆ. ನಮ್ಮ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿ ಇನ್ನೂ ಯಾರು ಪತ್ತೆಯಾಗಿಲ್ಲ. ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ವಿಶೇಷ ತಂಡ ರಚನೆ ಮಾಡಿ ತನಿಖೆ ಕೂಡ ನಡೆಸುತ್ತಿದ್ದೇವೆ.

-ಶ್ರೀನಿವಾಸ್‌ ಗೌಡ, ಬೆಂಗಳೂರು ದಕ್ಷಿಣ ಜಿಲ್ಲೆ ಎಸ್ಪಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ತಂತ್ರಜ್ಞಾನ ಕ್ಷೇತ್ರಕ್ಕೆ ಇಂಜಿನಿಯರ್, ವಿಜ್ಞಾನಿಗಳ ಕೊಡುಗೆ ಅಪಾರ: ಡಾ.ನೀರಜ್ ಕುಮಾರ್
ಮದರಸಗಳ ಆಧುನೀಕರಣಕ್ಕೆ ಕ್ರಮ ವಹಿಸಿ: ಡಿಸಿ