ಸರ್ಕಾರಕ್ಕಿಂತ ಸಮಾಜಕ್ಕೆ ಹೆಚ್ಚು ಶಕ್ತಿ: ಮೋದಿ

KannadaprabhaNewsNetwork |  
Published : May 11, 2026, 02:00 AM IST
ಮೋದಿ ಕಾರ್ಯಕ್ರಮ | Kannada Prabha

ಸಾರಾಂಶ

‘ರಾಜಕೀಯ ಹಾಗೂ ಸರ್ಕಾರಕ್ಕಿಂತಲೂ ಸಮಾಜಕ್ಕೆ ಹೆಚ್ಚು ಶಕ್ತಿ ಇದೆ. ಸಾರ್ವಜನಿಕ ಸಹಭಾಗಿತ್ವದ ಶಕ್ತಿಗೆ ಸ್ವಚ್ಛ ಭಾರತ್‌ ಅಭಿಯಾನವೇ ಸಾಕ್ಷಿ. ಇದೇ ರೀತಿ ನಮ್ಮ ಭೂಮಿ ತಾಯಿಯನ್ನು ರಾಸಾಯನಿಕಗಳಿಂದ ಉಳಿಸಿಕೊಳ್ಳಬೇಕಿದೆ. ಪರಿಸರ ರಕ್ಷಣೆಯೂ ಕೂಡ ಆರ್ಟ್‌ ಆಫ್‌ ಲಿವಿಂಗ್‌ (ಜೀವನದ ಕಲೆ) ಎಂಬುದನ್ನು ಅರಿಯಬೇಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

‘ರಾಜಕೀಯ ಹಾಗೂ ಸರ್ಕಾರಕ್ಕಿಂತಲೂ ಸಮಾಜಕ್ಕೆ ಹೆಚ್ಚು ಶಕ್ತಿ ಇದೆ. ಸಾರ್ವಜನಿಕ ಸಹಭಾಗಿತ್ವದ ಶಕ್ತಿಗೆ ಸ್ವಚ್ಛ ಭಾರತ್‌ ಅಭಿಯಾನವೇ ಸಾಕ್ಷಿ. ಇದೇ ರೀತಿ ನಮ್ಮ ಭೂಮಿ ತಾಯಿಯನ್ನು ರಾಸಾಯನಿಕಗಳಿಂದ ಉಳಿಸಿಕೊಳ್ಳಬೇಕಿದೆ. ಪರಿಸರ ರಕ್ಷಣೆಯೂ ಕೂಡ ಆರ್ಟ್‌ ಆಫ್‌ ಲಿವಿಂಗ್‌ (ಜೀವನದ ಕಲೆ) ಎಂಬುದನ್ನು ಅರಿಯಬೇಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಗರದ ಕನಕಪುರ ರಸ್ತೆಯಲ್ಲಿ ಆರ್ಟ್‌ ಆಫ್‌ ಲಿವಿಂಗ್ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಭವ್ಯ ಧ್ಯಾನ ಮಂದಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಆರ್ಟ್‌ ಆಫ್‌ ಲಿವಿಂಗ್‌ನ 45 ವಾರ್ಷಿಕೋತ್ಸವ ಹಾಗೂ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ ಹಾಗೂ ಆಧ್ಯಾತ್ಮಿಕ ಗುರು ರವಿಶಂಕರ್‌ ಗುರೂಜಿ ಅವರಿಗೆ 70 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಶುಭ ಹಾರೈಸಿದರು.

ಈ ವೇಳೆ ಆಧ್ಯಾತ್ಮ, ರಾಷ್ಟ್ರನಿರ್ಮಾಣದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ, ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತು ಸುದೀರ್ಘವಾಗಿ ಮಾತನಾಡಿದರು.

ಯಾವುದೇ ಅಭಿಯಾನ ಯಶಸ್ವಿಯಾಗಲು ಸಮಾಜದ ಸಹಭಾಗಿತ್ವ ಅತ್ಯಗತ್ಯ. ಸಮಾಜಕ್ಕೆ ರಾಜಕೀಯ, ಸರ್ಕಾರಕ್ಕಿಂತಲೂ ಹೆಚ್ಚು ಶಕ್ತಿಯಿದೆ. ಇದಕ್ಕೆ ಸ್ವಚ್ಛ ಭಾರತ್ ಅಭಿಯಾನವೇ ಸಾಕ್ಷಿ. ಇದು ಸರ್ಕಾರದ ಕಾರ್ಯಕ್ರಮಕ್ಕಿಂತಲೂ ಜನರ ಅಭಿಯಾನವಾಗಿ ಯಶಸ್ವಿಯಾಯಿತು ಎಂದು ಹೇಳಿದರು.

ಇದೀಗ ನಮ್ಮ ಭೂಮಿ ತಾಯಿಯನ್ನು ರಾಸಾಯನಿಕಗಳಿಂದ ರಕ್ಷಿಸಬೇಕಿದೆ. ಭೂಮಿಯ ಸ್ವಾಭಾವಿಕ ಗುಣ ಉಳಿಸಲು ರಾಸಾಯನಿಕ ಗೊಬ್ಬರ ತ್ಯಜಿಸಿ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಬೇಕಿದೆ. ಗ್ರಾಮೀಣ ರೈತರನ್ನು ನೈಸರ್ಗಿಕ ಕೃಷಿಪದ್ಧತಿಗಳತ್ತ ನಡೆಸುವ ಅಗತ್ಯವಿದೆ. ಭೂಮಿಯನ್ನು ರಾಸಾಯನಿಕ ಗೊಬ್ಬರಗಳಿಂದ ಉಳಿಸುವ ಸುಸ್ಥಿರ ಕೃಷಿಯೂ ಸಹ ಜೀವನದ ಕಲೆ (ಆರ್ಟ್‌ ಆಫ್‌ ಲಿವಿಂಗ್‌). ಪರಿಸರ ಸಂರಕ್ಷಣೆ ಜತೆಗೆ ಇದೊಂದು ಆಧ್ಯಾತ್ಮಿಕ ಅಭ್ಯಾಸ ಎಂದು ಮೋದಿ ಬಣ್ಣಿಸಿದರು.ನೀರುಳಿಸುವುದೂ ಆರ್ಟ್‌ ಆಫ್‌ ಲಿವಿಂಗ್‌:

ತಾಯಿಯ ಹೆಸರಿನಲ್ಲಿ ಒಂದು ಗಿಡ (ಏಕ್‌ ಪೇಡ್‌ ಮಾ ಕೆ ನಾಮ್‌) ಅಭಿಯಾನ ಯಶಸ್ವಿಯಾಗಲು ಸಮಾಜದ ಪಾತ್ರ ದೊಡ್ಡದು. ಜತೆಗೆ ನೀರಿನ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕಿದೆ. ಪ್ರತಿ ಹನಿ, ಹೆಚ್ಚು ಬೆಳೆ (ಪರ್‌ ಡ್ರಾಪ್‌, ಮೋರ್‌ ಕ್ರಾಪ್‌) ಉಪಕ್ರಮದ ಮೂಲಕ ಕೃಷಿಯಲ್ಲಿ ನೀರು ನಿರ್ವಹಣೆಗೆ ಒತ್ತು ನೀಡುವ ಅಗತ್ಯವಿದೆ, ಮಿಷನ್‌ ಲೈಫ್‌ಗೆ ಒತ್ತು ಸಿಗಬೇಕಿದೆ. ಮುಂಗಾರು ಋತು ಹತ್ತಿರವಿರುವ ಈ ಸಮಯ ಇದಕ್ಕೆಲ್ಲ ಸೂಕ್ತ. ನೀರಿನ ಪ್ರತಿಯೊಂದು ಹನಿ ಉಳಿಸುವುದು ಕೂಡ ಆರ್ಟ್‌ ಆಫ್‌ ಲಿವಿಂಗ್‌ ಎಂದು ಮೋದಿ ತಿಳಿಸಿದರು.

ಪ್ರತಿಯೊಂದು ಪ್ರಮುಖ ಕಾರ್ಯಕ್ಕೂ ಸಮಾಜದ ಶಕ್ತಿ ಜಾಗೃತಗೊಳಿಸುವುದು ಬಹಳ ಅವಶ್ಯಕ. ಇದು ರಾಷ್ಟ್ರದ ದೊಡ್ಡ ಸವಾಲುಗಳಿಗೆ ಸಾಮೂಹಿಕ ಪರಿಹಾರಗಳನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ. ಆರ್ಟ್ ಆಫ್ ಲಿವಿಂಗ್ ತನ್ನ ಎಲ್ಲಾ ಉಪಕ್ರಮಗಳಲ್ಲಿ ಸಮಾಜದ ಶಕ್ತಿಯನ್ನು ನಿರಂತರವಾಗಿ ಬಳಸಿಕೊಳ್ಳುತ್ತಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.ಭಾರತಕ್ಕೆ ಬದಲಾವಣೆಯ ನೇತೃತ್ವ:

ವೈಜ್ಞಾನಿಕ ಪ್ರಗತಿ ಮತ್ತು ನಾವೀನ್ಯತೆಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಕ್ಷಿಪ್ರ ಬದಲಾವಣೆಗಳಾಗುತ್ತಿವೆ. ಒಂದು ಆವಿಷ್ಕಾರ ಆರ್ಥಿಕತೆ ಮೇಲೆ ಪರಿಣಾಮ ಬೀರುವಂತಾಗಿದೆ. ಭಾರತವು ಈ ಬದಲಾವಣೆಗಳಲ್ಲಿ ಕೇವಲ ಭಾಗವಹಿಸುತ್ತಿಲ್ಲ, ಬದಲಾಗಿ ಹಲವು ಕ್ಷೇತ್ರಗಳಲ್ಲಿ ನೇತೃತ್ವ ವಹಿಸಿದೆ. ಡಿಜಿಟಲ್ ಪಾವತಿಗಳು, ಮೂಲಸೌಕರ್ಯ ವಿಸ್ತರಣೆ ಮತ್ತು ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆ ಸೇರಿ ಹಲವು ವಲಯಗಳಲ್ಲಿ ನಾಯಕನ ಸ್ಥಾನ ಪೋಷಿಸುತ್ತಿದೆ. ಭಾರತದ ಯುವಕರು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಮೋದಿ ಹೇಳಿದರು.

ಆಧ್ಯಾತ್ಮ ಪರಂಪರೆ ಜಗತ್ತನ್ನು ಪ್ರಭಾವಿಸುತ್ತಿದೆ:

ಆಧ್ಯಾತ್ಮ ಹಾಗೂ ಯೋಗದ ಬಗ್ಗೆ ಮಾತನಾಡಿದ ಮೋದಿ ಅವರು, ಮಾನಸಿಕವಾಗಿ ಶಾಂತ, ಸಾಮಾಜಿಕವಾಗಿ ಜವಾಬ್ದಾರಿಯುತ ಮತ್ತು ಸಮಾಜದ ಬಗ್ಗೆ ಸಂವೇದನಾಶೀಲರಾಗಿರುವ ಯುವಕರಿಂದಲೇ ವಿಕಸಿತ ಭಾರತ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಯೋಗ, ಧ್ಯಾನ ಮತ್ತು ಜ್ಞಾನವನ್ನು ವಿಶ್ವಾದ್ಯಂತ ಪಸರಿಸುತ್ತಿರುವ ಆರ್ಟ್‌ ಆಫ್‌ ಲಿವಿಂಗ್‌ ಯುವಕರನ್ನು ಪ್ರಭಾವಿಸಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ರವಿಶಂಕರ್‌ ಗುರೂಜಿ ಅವರು ತಮ್ಮ ಭಾಷಣದ ವೇಳೆ ನೀವು ನಮ್ಮವರು ಹೀಗಾಗಿ ಧನ್ಯವಾದ ಹೇಳುವುದಿಲ್ಲ ಎಂದು ಹೇಳಿದ ಮಾತಿಗೆ ಸ್ಪಂದಿಸಿದ ಮೋದಿ ಅವರು, ‘ಗುರುದೇವ್‌ ಅವರು ನನ್ನ ಹೊಗಳಿದಂತೆ ಇರಲಿಲ್ಲ. ನನ್ನ ಕೆಲಸಗಳನ್ನು ನೆನಪಿಸುವಂತಿತ್ತು. ಇನ್ನು ನನಗೆ ಧನ್ಯವಾದ ಹೇಳಲ್ಲ ಎಂದಿದ್ದಾರೆ. ನಾನು ನಿಮ್ಮವ, ನಿಮ್ಮಿಂದ ಬಂದವ, ನಿಮಗಾಗಿ ಬಂದವ, ನಾನು ಎಲ್ಲಿದ್ದೇನೋ ಅದೂ ಕೂಡ ನಿಮ್ಮಿಂದಲೇ ಇದ್ದೇನೆ. ನಿಮಗಾಗಿಯೇ ಇದ್ದೇನೆ’ ಎಂದಾಗ ಸಭಿಕರಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಇದೇ ವೇಳೆ ರವಿಶಂಕರ್‌ ಗುರೂಜಿ ಅವರ ಶತಾಬ್ದಿ ಕಾರ್ಯಕ್ರಮಕ್ಕೂ ಒಂದು ಬಾರಿ ಬರುತ್ತೇನೆ ಎಂದು ಮೋದಿ ಹೇಳಿದರು.

ರವಿಶಂಕರ್‌ ಗುರೂಜಿ ಬಿತ್ತಿದ ಬೀಜ ವೃಕ್ಷವಾಗಿದೆ:

ಸುಮಾರು 45 ವರ್ಷಗಳ ಹಿಂದೆ ರವಿಶಂಕರ್‌ ಗುರೂಜಿ ಅವರು ಬಿತ್ತಿದ ಆರ್ಟ್‌ ಆಫ್‌ ಲಿವಿಂಗ್ ಎಂಬ ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ. ವೃಕ್ಷಾರೋಪಣ, ಗ್ರಾಮೀಣ ಸ್ಮಾರ್ಟ್ ವಿಲೇಜ್ ಕೇಂದ್ರ, ಮಹಿಳಾ ಮತ್ತು ಬುಡಕಟ್ಟು ಸಬಲೀಕರಣ, ಕೈದಿಗಳಿಗಾಗಿ ಹಮ್ಮಿಕೊಳ್ಳುವ ಮಾನಸಿಕ ಆರೋಗ್ಯ, ಶಿಕ್ಷಣ ಹಾಗೂ ಆಧ್ಯಾತ್ಮಕಕ್ಕೆ ನೀಡುತ್ತಿರುವ ಒತ್ತು ಶ್ಲಾಘನೀಯ. ವಿಶ್ವಾದ್ಯಂತ ಸಾವಿರಾರು ಕೇಂದ್ರಗಳಲ್ಲಿ ಕೋಟ್ಯಂತರ ಜನರಿಗೆ ಸಂಸ್ಥೆ ಬೆಳಕಾಗಿದೆ ಎಂದು ನರೇಂದ್ರ ಮೋದಿ ಶ್ಲಾಘಿಸಿದರು.

ಬೆಂಗಳೂರಿನದ್ದು ವಿಶಿಷ್ಟ ವಾತಾವರಣ:

ಬೆಂಗಳೂರು ನಗರವನ್ನು ಕೊಂಡಾಡಿದ ನರೇಂದ್ರ ಮೋದಿ ಅವರು, ಬೆಂಗಳೂರಿನದ್ದು ವಿಶಿಷ್ಟ ವಾತಾವರಣ. ಈ ನಗರ ಆರ್ಥಿಕತೆ, ತಂತ್ರಜ್ಞಾನ, ಸ್ಟಾರ್ಟ್‌ಅಪ್‌ ಮಾತ್ರವಲ್ಲ ಭಾರತದ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪ್ರಜ್ಞೆಗೂ ಜಾಗತಿಕ ಗುರುತು. ಆಧ್ಯಾತ್ಮಿಕತೆ ಮತ್ತು ಆಧ್ಯಾತ್ಮಿಕ ಪ್ರಜ್ಞೆಗೆ ಈ ನಗರ ಹೊಸ ಮೆರುಗು ನೀಡಿದೆ ಎಂದು ಹೇಳಿದರು.

ನಾವೆಲ್ಲಾ ಕಮಲದ ಆಶ್ರಯದಲ್ಲಿದ್ದೇವೆ:

ಕಮಲದ ಆಕಾರದಲ್ಲಿದ್ದ ಸಭಾಂಗಣದ ಒಳಗೆ ಮಾತನಾಡಿದ ನರೇಂದ್ರ ಮೋದಿ, ‘ಸೇವಾ ಭಾವದಿಂದ ಕೆಲಸ ಮಾಡಿದರೆ ಪ್ರತಿ ಕೆಲಸವೂ ಯಶಸ್ವಿಯಾಗುತ್ತದೆ. ಉಳಿದದ್ದು ಆಗಲಿ, ಹೋಗಲಿ ನಾವು ಎಲ್ಲರೂ ಕಮಲದ ಆಶ್ರಯದಲ್ಲಿದ್ದೇವೆ. ನಮ್ಮ ಜತೆ ಗುರುದೇವ್‌ ಅವರ ಆಶೀರ್ವಾದ ಇದೆ. ಕಮಲದ ಆಶ್ರಯದಲ್ಲಿ ದೇಶವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯೋಣ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ತಂತ್ರಜ್ಞಾನ ಕ್ಷೇತ್ರಕ್ಕೆ ಇಂಜಿನಿಯರ್, ವಿಜ್ಞಾನಿಗಳ ಕೊಡುಗೆ ಅಪಾರ: ಡಾ.ನೀರಜ್ ಕುಮಾರ್
ಮದರಸಗಳ ಆಧುನೀಕರಣಕ್ಕೆ ಕ್ರಮ ವಹಿಸಿ: ಡಿಸಿ