ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡಿಗರ ನಾಡಗುಡಿ, ಅಭಿವೃದ್ಧಿಯ ಶಕ್ತಿ ಕೇಂದ್ರ, ವಿಧಾನಸೌಧ ಇಂದು ವ್ಯಾಪಾರಿ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಅಲ್ಲಿ ರಾಜಕಾರಣಿಗಳನ್ನು ಕೊಳ್ಳಲೂಬಹುದು, ಮಾರಲೂಬಹುದು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಕಠಿಣವಾಗಿ ಹೇಳಿದರು.

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ರಾಜಕೀಯ ಪರಿಚಾರಕ, ಧೀಮಂತ ಪತ್ರಕರ್ತ ಪಿ.ಎನ್.ಜವರಪ್ಪಗೌಡ ಪತ್ರಿಕಾ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಇಡೀ ವಿಧಾನಸೌಧವೇ ದುಡ್ಡಿನ ಹಿಂದೆ ಓಡುತ್ತಿದೆ. ವಿಧಾನಸೌಧದಲ್ಲಿರುವ ಶೇ.೮೦ರಷ್ಟು ರಾಜಕಾರಣಿಗಳು ರಿಯಲ್ ಎಸ್ಟೇಟ್ ಏಜೆಂಟರಾಗಿದ್ದಾರೆ. ಸರ್ಕಾರವೇ ರಿಯಲ್ ಎಸ್ಟೇಟ್ ಉದ್ಯಮಿಯಂತೆ ವರ್ತಿಸುತ್ತಿದೆ. ಇಡೀ ಸಮಾಜ, ಸರ್ಕಾರ, ವ್ಯವಸ್ಥೆಯೇ ಹಾಳಾಗಿದೆ. ಹೀಗಿದ್ದರೂ ಜನರು ಯಾವುದನ್ನೂ ಪ್ರಶ್ನೆ ಮಾಡುತ್ತಿಲ್ಲ. ಅದಕ್ಕಾಗಿ ಸರ್ಕಾರ ನಾವು ಮಾಡಿದ್ದೆಲ್ಲವನ್ನೂ ಸರಿ ಎನ್ನುತ್ತಿದೆ ಎಂದು ಹೇಳಿದರು.

ಇಂದಿನ ರಾಜಕಾರಣಿಗಳು ಜನಪ್ರತಿನಿಧಿಯಾಗಿಯೂ ಉಳಿದಿಲ್ಲ, ಸೇವಕರಾಗಿಯೂ ಉಳಿದಿಲ್ಲ. ಇನ್ನು ಪರಿಚಾರಕರಂತೂ ಇಲ್ಲವೇ ಇಲ್ಲ. ಕಳ್ಳರಿಂದ ರಾಜಕೀಯ ರಂಗ ತುಂಬಿಹೋಗಿದೆ. ಯಾವುದೋ ಗ್ಯಾರಂಟಿಗಳನ್ನು ಕೊಡುವ ಬದಲು ಅಕ್ಷರ, ಆರೋಗ್ಯವನ್ನು ಉಚಿತವಾಗಿ ಜನರಿಗೆ ನೀಡಿದ್ದರೆ ಅವರ ಬದುಕು ಎಷ್ಟೋ ಸುಧಾರಣೆಯಾಗುತ್ತಿತ್ತು. ಅಂತಹ ಆಲೋಚನೆಗಳಿಲ್ಲದ ಸರ್ಕಾರ ಜನಪರವಾಗಿ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.


ಇಂದಿನ ಯುವಕರು ಮತ್ತು ಮಕ್ಕಳಿಗೆ ಮಂಡ್ಯದ ಇತಿಹಾಸವನ್ನು ತಿಳಿಸಿಕೊಡಬೇಕು. ಕೆ.ವಿ.ಶಂಕರಗೌಡರು, ಪಿ.ಎನ್.ಜವರಪ್ಪಗೌಡರಂತಹವರನ್ನು ಪರಿಚಯಿಸಬೇಕು. ಪಿ.ಎನ್.ಜವರಪ್ಪಗೌಡರು ಜನಸಂಪರ್ಕದಲ್ಲಿದ್ದುಕೊಂಡು ಎಲ್ಲರನ್ನೂ ಒಗ್ಗೂಡಿಸಿ ಅಭಿವೃದ್ಧಿಗೆ ಶ್ರಮಿಸಿದವರು. ಅಂತಹ ರಾಜಕಾರಣಿಗಳನ್ನು ಇಂದು ದುರ್ಬೀನು ಹಾಕಿ ಹುಡುಕಬೇಕಿದೆ. ಅಂತಹವರ ಹಾದಿಯಲ್ಲಿ ನಡೆಯುವ, ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಆಸಕ್ತಿಯೂ ಯಾರಲ್ಲೂ ಇಲ್ಲ. ಸ್ವಾರ್ಥ ಹೆಚ್ಚಾಗಿ ಎಲ್ಲವನ್ನೂ ಹಾಳುಗೆಡವುತ್ತಿದೆ ಎಂದು ವಿಷಾದಿಸಿದರು.

ಅಭಿವೃದ್ಧಿ ಎನ್ನುವುದು ರಾಜಕಾರಣಿಗಳ ಸ್ವಾರ್ಥಕ್ಕೆ ನುಚ್ಚುನೂರಾಗಿದೆ. ರೈತ- ದಲಿತ ಸಂಘಟನೆಗಳು ಒಡೆದು ಹಾಳಾಗಿವೆ. ಸರ್ಕಾರದ ವೈಫಲ್ಯಗಳು ವ್ಯವಸ್ಥೆಯನ್ನು ಎಲ್ಲಿಗೋ ತೆಗೆದುಕೊಂಡು ಹೋಗುತ್ತಿದೆ. ಇದೆಲ್ಲವನ್ನೂ ಸರಿಪಡಿಸುವವರು ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ ಎಂದು ಹೇಳಿದರು.

ಹೆಣ್ಣು ಮಕ್ಕಳಿಗೆ ಕಲಿಸಿದ ಅಕ್ಷರ ಗಂಡನನ್ನು ಕೊಲ್ಲುತ್ತಿದೆ. ಪುರುಷರೇ ರಕ್ಷಣೆಗೆ ಮೊರೆ ಇಡುವ ಕಾಲ ಎದುರಾಗಿದೆ. ಹೀಗಾಗಿ ವ್ಯವಸ್ಥೆ ಸರಿಹೋಗಬೇಕಾದರೆ ಜನರು ಎಚ್ಚೆತ್ತುಕೊಳ್ಳಬೇಕಿದೆ. ರಾಜಕಾರಣಿಗಳು, ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಜನರೇ ತಕ್ಕ ಪಾಠ ಕಲಿಸಬೇಕು. ರಾಜಕಾರಣಿಗಳು ಹೇಗಿರಬೇಕು ಎನ್ನುವುದಕ್ಕೆ ಅನೇಕ ಮಾದರಿಗಳು ನಮ್ಮ ಕಣ್ಣಮುಂದಿವೆ. ಅವರನ್ನು ಅನುಸರಿಸಿದರೆ ರಾಜಕಾರಣವನ್ನು ಶುದ್ಧಗೊಳಿಸಬಹುದು ಎಂದು ನುಡಿದರು.

ಭಾರತ ಸ್ವಾತಂತ್ರ್ಯಗೊಂಡು ಮೊದಲ ಚುನಾವಣೆ ನಡೆಸುವ ಸಮಯದಲ್ಲಿ ಜವಾಹರಲಾಲ್ ನೆಹರು ಬಳಿ ಬಂದ ಟಾಟಾ-ಬಿರ್ಲಾ ಸಂಸತ್ತಿನ ಚುನಾವಣೆಯಲ್ಲಿ ನಮಗೂ ಸೀಟುಗಳನ್ನು ಮೀಸಲಿಡಬೇಕೆಂಬ ಪ್ರಸ್ತಾಪ ಮುಂದಿಟ್ಟಾಗ, ನೆಹರು ಅವರು ಭಾರತ ಈಗಷ್ಟೇ ಸ್ವಾತಂತ್ರ್ಯ ಕಂಡಿದೆ. ರಸ್ತೆಗಳು, ಸೇತುವೆಗಳು, ಸಂಪರ್ಕಗಳು, ಆಸ್ಪತ್ರೆ, ಶಿಕ್ಷಣ ಹೀಗೆ ಅನೇಕ ಕ್ಷೇತ್ರಗಳು ಅಭಿವೃದ್ಧಿಯಾಗಬೇಕಿದೆ. ಮೊದಲು ಅವುಗಳಿಗೆ ಆದ್ಯತೆ ನೀಡಿ. ಏಕೆಂದರೆ, ರಾಜಕೀಯ ಅಧಿಕಾರ ಮತ್ತು ಹಣದ ಶಕ್ತಿ ಒಂದೇ ಕಡೆ ಕೇಂದ್ರೀಕೃತವಾಗಬಾರದು ಎಂದಿದ್ದರು. ಆದರೆ, ಇಂದು ಅದಕ್ಕೆ ಪೂರಕವಾಗಿಯೇ ನಡೆಯುತ್ತಿರುವುದು ವಿಪರ್ಯಾಸ ಎಂದರು.

ಕಾರ್ಯಕ್ರಮದಲ್ಲಿ ಕನ್ನಡಪ್ರಭ ಉಪಸಂಪಾದಕರಾಗಿದ್ದ ಕಾಡೇನಹಳ್ಳಿ ವೀರಣ್ಣಗೌಡ ಅವರಿಗೆ ಡಾ.ಪಿ.ಎನ್.ಜವರಪ್ಪಗೌಡ ಪತ್ರಿಕಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಹಿರಿಯ ಪತ್ರಕರ್ತ ಪಿ.ಜೆ.ಚೈತನ್ಯಕುಮಾರ್ ಅವರು ಉಪಸ್ಥಿತರಿದ್ದರು.