ಕನ್ನಡಪ್ರಭ ವಾರ್ತೆ ಕುಶಾಲನಗರ
ಜಯಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ಪುರಸಭೆಯ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ಕುಶಾಲನಗರ ಒಳಚರಂಡಿ ಯೋಜನೆಯ ಬಗ್ಗೆ ಸಂಬಂಧಿಸಿದ ಮಂಡಳಿ ಅಧಿಕಾರಿ ಪ್ರಸನ್ನ ಕುಮಾರ್ ಅವರಿಂದ ಮಾಹಿತಿ ಬಯಸಿದರು.
ಯೋಜನೆ ಬಹುತೇಕ ಪೂರ್ಣಗೊಂಡಿದ್ದು ಮನೆಮನೆಗಳಿಂದ ಹೊರಸೂಸುವ ತ್ಯಾಜ್ಯಗಳನ್ನು ಸಂಪರ್ಕಿಸುವ ಪೈಪುಗಳ ಜೋಡಣೆ ಕಾಮಗಾರಿ ಬಾಕಿ ಇರುವುದಾಗಿ ತಿಳಿಸಿದ ಕರ್ನಾಟಕ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್ ತಿಳಿಸಿದರು.ಈ ಬಗ್ಗೆ ಮನೆಯಿಂದ ಸಂಪರ್ಕ ಕಲ್ಪಿಸುವ ಕಾಮಗಾರಿ ಹಾಗೂ ನಿರ್ವಹಣೆಯ ಬಗ್ಗೆ ಸಭೆಯಲ್ಲಿ ಸದಸ್ಯರಾದ ಡಿ ಕೆ ತಿಮ್ಮಪ್ಪ ಜಯವರ್ಧನ್ ಮತ್ತು ಆನಂದ್ ಕುಮಾರ್ , ಪ್ರಮೋದ್ ಮುತ್ತಪ್ಪ ಅವರು ಅಧಿಕಾರಿಯಿಂದ ಸಮಗ್ರ ಮಾಹಿತಿಯನ್ನು ಸಭೆಗೆ ಒದಗಿಸುವಂತೆ ಆಗ್ರಹಿಸಿದರು.
ಸಂಬಂಧಿಸಿದ ಮಂಡಳಿ ಅಧಿಕಾರಿಗಳಿಂದ ಇಚ್ಚಾ ಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕಾಮಗಾರಿ ನೆನೆಗುದಿಗೆ ಬೀಳಲು ಕಾರಣ ಎಂದು ಸದಸ್ಯರು ಆರೋಪಿಸಿದರು.
ತಕ್ಷಣ ಒಳಚರಂಡಿ ಯೋಜನೆ ಕಾಮಗಾರಿ ಪೂರ್ಣಗೊಂಡು ಅನುಷ್ಠಾನಗೊಳ್ಳದಿದ್ದಲ್ಲಿ ಪುರಸಭೆಗೆ ದಂಡ ತೆರುವ ಪರಿಸ್ಥಿತಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಇರುವ ಕೆರೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸುವುದು ಕೆರೆ ಮತ್ತು ನದಿಗೆ ನೀರು ಹರಿಯುವ ತೋಡುಗಳ ಒತ್ತುವರಿಯನ್ನು ತೆರೆವುಗೊಳಿಸುವುದು, ಕುಶಾಲನಗರ ತಾವರೆಕೆರೆ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು. ಕೆರೆ ಆವರಣದಲ್ಲಿ ಅಕ್ರಮವಾಗಿ ತುಂಬಲಾಗಿರುವ ಮಣ್ಣನ್ನು ತಕ್ಷಣ ತೆರವುಗೊಳಿಸುವಂತೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಕಳೆದ ಮಳೆಗಾಲದಲ್ಲಿ ಕೆರೆ ಕೋಡಿ ಒಡೆದಿರುವ ರೊಂಡ ಕೆರೆ ಕಾಮಗಾರಿ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸದಸ್ಯರಾದ ಎಂ ಪ್ರಕಾಶ್ ಸಭೆಯ ಗಮನಕ್ಕೆ ತಂದರು.
ಕುಶಾಲನಗರದಲ್ಲಿ ಕೇಂದ್ರ ಗ್ರಂಥಾಲಯಕ್ಕೆ ಕಟ್ಟಡ ನಿರ್ಮಾಣದ ಬಗ್ಗೆ ಅಧಿಕಾರಿಗಳಿಂದ ಬಂದ ಮನವಿ ಬಗ್ಗೆ ಚರ್ಚಿಸಲಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದರು.
ಕುಶಾಲನಗರ ಗಡಿಭಾಗದ ವ್ಯಾಪ್ತಿಯಲ್ಲಿ ಆಕರ್ಷಕ ಸ್ವಾಗತ ಕಮಾನು ನಿರ್ಮಾಣ ಮಾಡುವ ಬಗ್ಗೆ ಸದಸ್ಯರಾದ ಶೇಕ್ ಕಲಿಮುಲ್ಲಾ ಅವರು ಸಭೆಯಲ್ಲಿ ಚರ್ಚಿಸಿದರು.
ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ನದಿ ತಟದಲ್ಲಿ ಸಮುದಾಯ ಭವನ, ಆರತಿ ಕಟ್ಟೆ ನಿರ್ಮಾಣ ಬಗ್ಗೆ ಸದಸ್ಯರಾದ ಜಯ ವರ್ಧನ್, ಡಿ ಕೆ ತಿಮ್ಮಪ್ಪ ಅವರು ಪ್ರಸ್ತಾಪಿಸಿದರು.ಕೋಣ ಮಾರಿಯಮ್ಮ ದೇವಾಲಯದ ಅಭಿವೃದ್ಧಿಗೆ ಪುರಸಭೆಯಿಂದ ಅನುದಾನ ಕಲ್ಪಿಸುವುದು, ಪಟ್ಟಣದ ವಿವೇಕಾನಂದ ಕಾಲನಿಯಲ್ಲಿ ಸಮುದಾಯ ಭವನ ನಿರ್ಮಾಣ ತಡೆಗೋಡೆ ಕಾಮಗಾರಿ ಬಗ್ಗೆ ಸದಸ್ಯರಾದ ಶಿವಶಂಕರ್ ಸಭೆಯಲ್ಲಿ ಚರ್ಚೆ ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ನೀಡಿದರು.
ಇದೆ ಸಂದರ್ಭದಲ್ಲಿ ಹಿಂದಿನ ಸಭೆಯ ನಡಾವಳಿಗಳನ್ನು ಓದಿ ಅಂಗೀಕರಿಸಲಾಯಿತು.ಪಟ್ಟಣ ಮತ್ತು ಮುಳ್ಳುಸೋಗೆ ವ್ಯಾಪ್ತಿಯ ವಿದ್ಯುತ್ ಸಂಪರ್ಕ ಸಮಸ್ಯೆ, ಪಟ್ಟಣದ ವಾಹನ ಸಂಚಾರ ಅವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಿತು.
ಪಟ್ಟಣದ ವ್ಯಾಪ್ತಿಯ ಬೀದಿ ದೀಪ ನಿರ್ವಹಣೆ ಕಾಮಗಾರಿಗೆ ಟೆಂಡರ್ ಆಹ್ವಾನಿಸುವ ಕುರಿತು, ಪಟ್ಟಣದ ವಿವಿಧ ಕಡೆ ಬಡಾವಣೆಗಳಲ್ಲಿ ಒಳ ಚರಂಡಿ ಯೋಜನೆಗೆ ಪೈಪ್ ಲೈನ್ ಅಳವಡಿಸಿ ಜೋಡಣೆ ಮಾಡುವ ಕಾಮಗಾರಿ, ಕುಶಾಲನಗರದ ಪಟ್ಟಣದ ವೃತ್ತವನ್ನು ವಿಸ್ತರಣೆ ಮಾಡುವ ಬಗ್ಗೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್, ಉಪಾಧ್ಯಕ್ಷರಾದ ಪುಟ್ಟಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ ಬಿ ಸುರೇಶ್ ಮತ್ತು ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಪುರಸಭೆ ಅಧಿಕಾರಿ ಸಿಬ್ಬಂದಿ ಇದ್ದರು.