)
ರಾಮನಗರ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆ ರದ್ದುಪಡಿಸಬೇಕು, ಮನರೇಗಾ ಮರು ಜಾರಿಗೊಳಿಸುವುದು ಹಾಗೂ ಬಿಡದಿ ಟೌನ್ ಶಿಪ್ ಯೋಜನೆಗೆ ಬಲವಂತದ ಭೂ ಸ್ವಾಧೀನ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ಗುರುವಾರ ಮುಷ್ಕರ ನಡೆಸಿದರು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಹಾಗೂ ಜಿಲ್ಲಾ ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕಾರ್ಖಾನೆಗಳ ನೂರಾರು ಕಾರ್ಮಿಕರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ವಂಡರ್ ಲಾ ಬಳಿಯಿಂದ ಬೈಕ್ ರ್ಯಾಲಿ ಹೊರಟು ಬಿಡದಿ ಕೈಗಾರಿಕಾ ಪ್ರದೇಶದೊಳಗೆ ಸಂಚರಿಸಿದರು.
ಕೈಗಾರಿಕಾ ಪ್ರದೇಶದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ನಡೆಸಿದ ಕಾರ್ಮಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬಿಡದಿ ಪಟ್ಟಣ ಚೌಕಿಮಠದ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಕೇಂದ್ರದಿಂದ ಅಸಂವಿಧಾನಿಕ ನಿಬಂಧನೆಗಳು ಜಾರಿಗೆ:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಯುವಜನತೆ ಮತ್ತು ಶ್ರಮಿಕ ವರ್ಗವನ್ನು ಆಧುನಿಕ ಗುಲಾಮಗಿರಿಗೆ ತಳ್ಳಲಿದೆ. ಇನ್ನು ರಾಜ್ಯದಲ್ಲಿ ನಾಲ್ಕು ಕಾರ್ಮಿಕ ನಿಯಮಗಳನ್ನು ರೂಪಿಸಲು ಕಾರ್ಮಿಕ ಇಲಾಖೆ ಮುಂದಾಗಿದ್ದು, ಮೂರು ಕರಡುಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆ ಹೊರಡಿಸಿದೆ. ಈ ಕರಡು ಅಧಿಸೂಚನೆಗಳು ಕೇಂದ್ರ ಸರ್ಕಾರದ ಮೂಲ ಕಾನೂನುಗಳಿಗಿಂತಲೂ ಕಠಿಣ ಮಾತ್ರವಲ್ಲದೆ ಅಸಂವಿಧಾನಿಕ, ಅನಿಯಂತ್ರಿತ ನಿಬಂಧನೆಗಳಾಗಿವೆ ಎಂದು ಟೀಕಿಸಿದರು.ಕೈಗಾರಿಕಾ ಸಂಬಂಧಗಳ ನಿಯಮಗಳಲ್ಲಿ ಸಂಘಟನಾ ಹಕ್ಕಿಗೆ ಅಡ್ಡಿ ಇದೆ. ಕಾರ್ಮಿಕ ಸಂಘದ ಮಾನ್ಯತೆಗೆ ಒಟ್ಟು ಕಾರ್ಮಿಕರಲ್ಲಿ ಶೇ.51ರಷ್ಟು ಮತಗಳನ್ನು ಕಡ್ಡಾಯಗೊಳಿಸಿದೆ. ಇದು ಸಾಧ್ಯವಿಲ್ಲದ ಮಿತಿ. ಮುಷ್ಕರ ಹಮ್ಮಿಕೊಳ್ಳುವುದಾದರೆ 6 ತಿಂಗಳು ಕೂಲಿಂಗ್ ಆಫ್ ಅವಧಿಯನ್ನು ವಿಧಿಸಿರುವುದು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಿದೆ. ಒತ್ತಡ ಹೇರುವ ಪ್ರಕ್ರಿಯೆಯನ್ನು ಕಾರ್ಮಿಕರ ಅನುಚಿತ ವರ್ತನೆ ಎಂದು ವ್ಯಾಖ್ಯಾನಿಸಿರುವುದರಿಂದ ಶಾಂತಿಯುತ ಪ್ರತಿಭಟನೆಯನ್ನು ಅಪರಾಧವಾಗಿ ಪರಿಗಣಿಸಲು ಅವಕಾಶ ಇದೆ. ಈ ಕಾರ್ಮಿಕ ಸಂಹಿತೆಗಳನ್ನು ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರದ ಕಾರ್ಮಿಕರ ನೀತಿಗಳಿಂದ ನೇರವಾದ ಹೊಡೆತ ಸ್ಥಳೀಯ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬೀಳಲಿದೆ. ಕಾರ್ಮಿಕರ ಹಿತ ಕಾಪಾಡುವ ಬದಲಿಗೆ ಬಂಡವಾಳಶಾಹಿಗಳ ಹಿತ ಸರ್ಕಾರಗಳಿಗೆ ಮುಖ್ಯವಾಗಿದೆ. ಕಾಯಂಯೇತರ ಕಾರ್ಮಿಕರ ಕಾಯಂಗೆ ತಿಲಾಂಜಿ ಇಟ್ಟಿದೆ. ಸಂಹಿತೆ ಮೂಲಕ ನಿಗದಿ ಅವಧಿಯ ಉದ್ಯೋಗಕ್ಕೆ ಅವಕಾಶ ನೀಡಿ ಕಾಯಂ ಉದ್ಯೋಗದಿಂದ ಕಾರ್ಮಿಕರನ್ನು ಹೊರ ಹಾಕಲಾಗಿದೆ ಎಂದು ಆರೋಪಿಸಿದರು.ಕಾರ್ಮಿಕರ ಮುಷ್ಕರ ಹತ್ತಿಕ್ಕುವ ಪ್ರಯತ್ನ:
ಕೇಂದ್ರ - ರಾಜ್ಯ ಸರ್ಕಾಗಳು ಕಾರ್ಮಿಕ ವಿರೋಧಿ ನೀತಿಗಳ ಮೂಲಕ ಕಾರ್ಮಿಕರ ಮುಷ್ಕರದ ಹಕ್ಕನ್ನೇ ದುರ್ಬಲಗೊಳಿಸಲು ಹೊರಟಿದೆ. ಕನಿಷ್ಠ 14 ದಿನ ಮತ್ತು ಗರಿಷ್ಠ 60 ದಿನ ಮುಂಚಿತವಾಗಿ ಮುಷ್ಕರದ ನೋಟಿಸ್ ನೀಡಬೇಕು. ನೋಟಿಸ್ ನೀಡಿದ 14 ದಿನದೊಳಗೆ ಮುಷ್ಕರ ನಡೆಸುವಂತಿಲ್ಲ. ಮಾಲೀಕರು ಮುಷ್ಕರದ ಸಂಬಂಧ 7 ದಿನದಲ್ಲಿ ಅರ್ಜಿ ಸಲ್ಲಿಸಿ ಸಂಧಾನ ಸಭೆ, ನ್ಯಾಯ ನಿರ್ಣಯ, ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಮತ್ತು 60 ದಿನಗಳ ನಂತರವೂ ಮುಷ್ಕರ ಮಾಡುವಂತಿಲ್ಲ. ಈ ಅವಧಿಯಲ್ಲಿ ಮುಷ್ಕರದ ಚಟುವಟಿಕೆ ಮಾಡಿದಲ್ಲಿ ಅದು ಅಕ್ರಮ ಮತ್ತು ಕಾನೂನು ಬಾಹಿರ ಆಗಲಿದೆ. ಹಣಕಾಸು ಸಹಾಯ ನೀಡುವುದು ಅಪರಾಧ. ಕಾನೂನು ಬಾಹಿರ ಮುಷ್ಕರಕ್ಕೆ ದಂಡದ ಜೊತೆಗೆ ಶಿಕ್ಷೆಗೂ ಅವಕಾಶ ಕಲ್ಪಿಸಿದೆ ಎಂದು ಕಾರ್ಮಿಕರು ದೂರಿದರು.ಪ್ರಸ್ತುತ ಕಾಯ್ದೆಯಲ್ಲಿ ದಿನದ ಕೆಲಸದ ಅವಧಿ 8 ಗಂಟೆ , ವಾರಕ್ಕೆ 48 ಗಂಟೆ ಕೆಲಸ, ವಿಶ್ರಾಂತಿ ಅವಧಿ, ಹೆಚ್ಚುವರಿ ಕೆಲಸದ ಅವಧಿ, ವಿಸ್ತರಿತ ಕೆಲಸದ ಅವಧಿ ಬಗ್ಗೆ ವ್ಯಾಖ್ಯಾನಿಸಲಾಗಿದೆ. ಆದರೆ, ಕಾರ್ಮಿಕ ಸಂಹಿತೆಯಲ್ಲಿ ದಿನದ ಕೆಲಸದ ಅವಧಿ 8 ಗಂಟೆಗಳ ಮೂಲಭೂತ ಮಾನವೀಯ ಅವಧಿಯನ್ನು ರಕ್ಷಿಸಿಲ್ಲ. ಸಂಹಿತೆಯಲ್ಲಿ 6 ದಿನಗಳ ನಿರಂತರ ಕೆಲಸದ ದಿನಗಳ ನಂತರವೂ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ. ರಜೆ ದಿನಗಳಲ್ಲಿ ಮಾಡಿದ ದುಡಿಮೆಗೆ ಬದಲಿ ರಜೆ ಎರಡು ತಿಂಗಳಲ್ಲಿ ನೀಡಲು ಮಾಲೀಕರಿಗೆ ಕಾಲಾವಕಾಶ ನೀಡಲಾಗಿದೆ.
ವೇತನ ಸಂಹಿತೆ ನಿಯಮಗಳಲ್ಲಿಯೂ ಕಾರ್ಮಿಕರ ಹಕ್ಕುಗಳನ್ನು ಮೊಕಟುಗೊಳಿಸಲಾಗಿದೆ. ವಸತಿ ಸೌಕರ್ಯದ ಹೆಸರಿನಲ್ಲಿ ಯಾವುದೇ ಮಾನದಂಡಗಳಿಲ್ಲದೆ ವೇತನ ಕಡಿತಗೊಳಿಸಲು ಮಾಲೀಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಬ್ಯಾಂಕೇತರ ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ವೇತನ ಪಾವತಿಗೆ ಅವಕಾಶ ನೀಡಿರುವುದು ಕಾರ್ಮಿಕರನ್ನು ಶೋಷಣೆಗೆ ತಳ್ಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಹಿತೆಯಲ್ಲಿ ಮಹಿಳಾ ಕಾರ್ಮಿಕರಿಗೆ ಸಮಾನ ಅವಕಾಶದ ನೆಪದಲ್ಲಿ ರಾತ್ರಿ ಪಾಳಿಯ ಮತ್ತು ಅಪಾಯಕಾರಿ ಕೆಲಸದ ಸ್ಥಳಗಳಲ್ಲಿ ದುಡಿಮೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮಹಿಳಾ ಕಾರ್ಮಿಕರು ದುಡಿಮೆಯಿಂದ ಹೊರ ಬರುತ್ತಾರೆ. ವೇತನದ ವ್ಯಾಖ್ಯಾನದಲ್ಲಿನ ಬದಲಾವಣೆಯಿಂದ ಮಹಿಳಾ ಕಾರ್ಮಿಕರು ನಿಜವಾದ ಸಂಬಳವನ್ನು ಕಳೆದುಕೊಳ್ಳುತ್ತಾರೆ ಎಂದು ಕಾರ್ಮಿಕರು ಆತಂಕ ವ್ಯಕ್ತಪಡಿಸಿದರು.
ಮುಷ್ಕರದಲ್ಲಿ ಕೆಐಇಇಎಫ್ ಸಂಘಟನೆ ಅಧ್ಯಕ್ಷ ಗಂಗಣ್ಣ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲಾ ಸಂಚಾಲಕ ರಾಘವೇಂದ್ರ, ಸಿಐಟಿಯು ಜಿಲ್ಲಾಧ್ಯಕ್ಷ ಯೋಗೇಶ್, ಎಂಇಎ ಪ್ರಧಾನ ಕಾರ್ಯದರ್ಶಿ ಮಂಜುನಾಥ, ಟಿಕೆಎಂಇಯು ಪ್ರಧಾನ ಕಾರ್ಯದರ್ಶಿ ರವಿ, ಅಸಂಘಟಿತ ಕಾರ್ಮಿಕ ವಲಯದ ಮುಖಂಡ ಇಬ್ರಾಹಿಂ, ರೖತ ಮುಖಂಡ ಅಂಕಪ್ಪ ಸೇರಿದಂತೆ ಅನೇಕ ಕಾರ್ಮಿಕರು ಭಾಗವಹಿಸಿದ್ದರು.(ಫೋಟೊ ಬರಲಿದೆ)
12ಕೆಆರ್ ಎಂಎನ್ 1.ಜೆಪಿಜಿಬಿಡದಿ ಕೈಗಾರಿಕಾ ಪ್ರದೇಶದ ಪ್ರಮುಖ ರಸ್ತೆಗಳಲ್ಲಿ ಕಾರ್ಮಿಕರು ಬೈಕ್ ರ್ಯಾಲಿ ನಡೆಸಿದರು.