ಸೋಲಾರ್ ಪ್ಯಾನಲ್, ವಿಂಡ್‌ಮಿಲ್ ಸೇರಿದಂತೆ ಇತರ ವಿದ್ಯುತ್ ಉತ್ಪಾದನೆಗೆ ರೈತರ ಜಮೀನನ್ನು ತೆಗೆದುಕೊಳ್ಳದೆ, ಲಭ್ಯವಿರುವ ಸರ್ಕಾರಿ ಭೂಮಿಯಲ್ಲಿ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಬೇಕು ಎಂದು ಶಾಸಕ ಬಸವರಾಜ ರಾಯರಡ್ಡಿ ಒತ್ತಾಯಿಸಿದ್ದಾರೆ.
ಕುಕನೂರು: ಸೋಲಾರ್ ಪ್ಯಾನಲ್, ವಿಂಡ್‌ಮಿಲ್ ಸೇರಿದಂತೆ ಇತರ ವಿದ್ಯುತ್ ಉತ್ಪಾದನೆಗೆ ರೈತರ ಜಮೀನನ್ನು ತೆಗೆದುಕೊಳ್ಳದೆ, ಲಭ್ಯವಿರುವ ಸರ್ಕಾರಿ ಭೂಮಿಯಲ್ಲಿ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಬೇಕು ಎಂದು ಶಾಸಕ ಬಸವರಾಜ ರಾಯರಡ್ಡಿ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಯಲಬುರ್ಗಾ ವಿಧಾನಸಭಾ ಕ್ಷೇತ್ರವು ಕೃಷಿ ಆಧಾರಿತ ಪ್ರದೇಶವಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ನೀರಾವರಿ ಮಾಡಲು ನಮ್ಮ ತಾಲೂಕಿನಲ್ಲಿ ಅವಕಾಶವಿದೆ. ಐದರಿಂದ ಆರು ವರ್ಷಗಳಿಂದ ಕೇಂದ್ರ ಸರ್ಕಾರ ವಿದ್ಯುತ್ ಉತ್ಪಾದನೆಗೆ ಸೋಲಾರ್, ಪ್ಯಾನಲ್ ವಿಂಡ್ ಮಿಲ್ ಮತ್ತು ವಿದ್ಯುತ್ ಕಂಬಗಳನ್ನು ಅಳವಡಿಸುವ ಯೋಜನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಈ ಯೋಜನೆ ಕೇವಲ ಯಲಬುರ್ಗಾ ಮಾತ್ರವಲ್ಲದೆ ಪಕ್ಕದ ರೋಣ, ಕುಷ್ಪಗಿ, ಗದಗ ಹಾಗೂ ಹುನಗುಂದ ತಾಲೂಕುಗಳಲ್ಲಿ ಕೇಂದ್ರ ಸರ್ಕಾರದ ಪರವಾನಗಿಯೊಂದಿಗೆ ನಡೆಯುತ್ತಿದೆ. ಖಾಸಗಿ ಕಂಪನಿಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಕಾನೂನು ರೂಪಿಸಿದೆ. ರೈತರ ಜಮೀನು ಸ್ವಾಧೀನ ಹಾಗೂ ಬೆಲೆ ನಿಗದಿ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಅದರಲ್ಲಿ ರಾಜ್ಯ ಸರ್ಕಾರದ ಯಾವುದೇ ಕಾನೂನು ರೂಪಿಸುವ ಹಕ್ಕು ಮತ್ತು ಜವಾಬ್ದಾರಿ ಇಲ್ಲ ಎಂದು ಹೇಳಿದ್ದಾರೆ.
ರೈತರು ಕಂಪನಿ ಮಧ್ಯವರ್ತಿಗಳ ಆಸೆ, ಆಮಿಷಗಳಿಗೆ ಒಳಗಾಗಬಾರದು, ಕೃಷಿ ಭೂಮಿ ಮಾರಾಟ ಮಾಡಬಾರದು. ಭೂಮಿ ನೀಡಲು ನಿರಾಕರಿಸುವಂತೆ ನಾನು ಈಗಾಗಲೇ ಹಲವು ಬಾರಿ ರೈತರಲ್ಲಿ ವಿನಂತಿಸಿಕೊಂಡಿದ್ದೇನೆ. ನೀವು ರೈತರಾಗಿಯೇ ಮುಂದುವರಿಯಬೇಕು. ನಿಮಗೆ ಯಾವುದೇ ಕಿರುಕುಳ ಆಗಿದ್ದಲ್ಲಿ ತಮಗೆ ಸಹಾಯ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಾನು ಸೂಚಿಸುತ್ತೇನೆ. ವಿದ್ಯುತ್ ಕಂಬಗಳನ್ನು ಅಳಪಡಿಸುವ ಯೋಜನೆಗಳಲ್ಲಿ ನಮ್ಮ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ. ಕೇಂದ್ರ ಸರ್ಕಾರ ರೈತರ ಜಮೀನಿನಲ್ಲಿ ಈ ವಿದ್ಯುತ್ ಉತ್ಪಾದನೆ ಮಾಡುವದನ್ನು ನಿಲ್ಲಿಸಬೇಕು. ಕೇವಲ ಸರ್ಕಾರಿ ಭೂಮಿಯಲ್ಲಿ ಯಂತ್ರ ಅಳವಡಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.