ಕನ್ನಡಪ್ರಭ ವಾರ್ತೆ ಕಲಬುರಗಿ
ಕೈಗಾರಿಕೆಗಳವರು ಹಾಗೂ ಜನಸಾಮಾನ್ಯರು ಮನೆಗಳ ಮೇಲ್ಚಾವಣಿಗಳ ಮೇಲೆ ಸೌರಶಕ್ತಿ ಉತ್ಪಾದಿಸುವ ಮೂಲಕ ಸ್ವಾವಲಂಬಿಯಾಗಬೇಕು ಎಂದು ಕಲ್ಯಾಣ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿಯ ಅಧ್ಯಕ್ಷ ಶಶಿಕಾಂತ್ ಬಿ. ಪಾಟೀಲ್ ಕರೆ ನೀಡಿದರು.ನಗರದ ಸೂಪರ್ ಮಾರ್ಕೆಟ್‍ನ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಡಾ. ಎಸ್.ಎಸ್. ಪಾಟೀಲ್ ಸಭಾಂಗಣದಲ್ಲಿ ಬೆಂಗಳೂರಿನ ಆರ್ಬ ಎನರ್ಜಿ ಸಹಯೋಗದೊಂದಿಗೆ ಕೈಗಾರಿಕೆಗಳಿಗೆ ಮೇಲ್ಚಾವಣಿ ಸೌರಶಕ್ತಿ ಹೇಗೆ ಪ್ರಯೋಜನಕಾರಿ ಎಂಬ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ವಾಣಿಜ್ಯ ಮಳಿಗೆ ಮತ್ತು ಕೈಗಾರಿಕಾ ಕಾರ್ಖಾನೆ ಹಾಗೂ ಮನೆಗಳ ಮೇಲ್ಚಾವಣಿಗಳ ಮೇಲೆ ಸೌರಶಕ್ತಿಯನ್ನು ಅಳವಡಿಸಬಹುದಾಗಿದೆ. ಈ ಸಂಬಂಧ ಸರ್ಕಾರದಿಂದಲೂ ಸಹಾಯಧನ ಸೌಲಭ್ಯವಿದೆ. ಇದರ ಸದುಪಯೋಗ ಪಡೆಯಬೇಕು ಎಂದರು.ಸೌರಶಕ್ತಿಯಿಂದಾಗಿ ಮಾಸಿಕ ವಿದ್ಯುತ್ ಶುಲ್ಕ ಉಳಿತಾಯವಾಗುತ್ತದೆ. ಮೂರರಿಂದ ನಾಲ್ಕು ವರ್ಷಗಳಲ್ಲಿ ಹಾಕಿದ ಬಂಡವಾಳ ಸಹ ಹಿಂತಿರುಗುತ್ತದೆ. ಸೌರಶಕ್ತಿ ಉತ್ಪಾದನೆ ಮೂಲಕ ಸ್ವಾವಲಂಬನೆ ಸಾಧಿಸಿ ನಷ್ಟದ ಭಾರವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಪಿವಿ ಪ್ರಾಜೆಕ್ಟ್ ಆರ್ಬ ಎನರ್ಜಿ ಸಹಾಯಕ ಮಹಾಪ್ರಬಂಧಕ ರಮೇಶ್ ಪಿ. ಕಲಿಭಟ್ ಅವರು ಮೇಲ್ಚಾವಣಿ ಸೌರಶಕ್ತಿಯ ಉಪಯೋಗ ಹಾಗೂ ಲಾಭಗಳನ್ನು ವಿವರಿಸಿದರು.ಅತಿಥಿಗಳಾಗಿ ಸಂಸ್ಥೆಯ ಗೌರವ ಕಾರ್ಯದರ್ಶಿ ಮಂಜುನಾಥ್ ಜೇವರ್ಗಿ, ಆಡಳಿತ ಮಂಡಳಿಯ ಸದಸ್ಯ ಅಭಿಜಿತ್ ಪಟ್ಟಣಶೆಟ್ಟಿ, ವಿಕಾಸ್ ಎಲ್., ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಿರಾಣಾ ಬಜಾರರ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಮಾದಮಶೆಟ್ಟಿ, ಬೇಳೆ ಕಾರ್ಖಾನೆಗಳ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ್ ಕೋಬಾಳ್ ಮತ್ತು ಸದಸ್ಯರು, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ವ್ಯಾಪಾರಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.