- ಬಸವಮಂದಿರದಲ್ಲಿ ಬಸವತತ್ವ ಸಮಾವೇಶ । ಶಾಸಕ ಎಚ್.ಡಿ. ತಮ್ಮಯ್ಯ ಅವರಿಂದ ಸಮಾವೇಶ ಉದ್ಘಾಟನೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಗತ್ತಿನಲ್ಲಿ ಹಲವು ಪ್ರವಾದಿ, ಮಹಾತ್ಮರು, ಸಂತರು ದಾರ್ಶನಿಕರು ಕಾಣದ ಕಾಲ್ಪನಿಕ ದೇವರ ಬಗ್ಗೆ ಮಾತನಾಡಿದರು, ಆದರೆ, ಬಸವಣ್ಣ, ವಿಜ್ಞಾನ ಮತ್ತು ವೈಚಾರಿಕತೆ ಬಗ್ಗೆ ಜನ ಜಾಗೃತಿ ಮೂಡಿಸಿದ ಮಹನೀಯರು ಎಂದು ಬೈಲೂರಿನ ನಿಶ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿ ನುಡಿದರು.
ನಗರದ ದೊಡ್ಡಕುರುಬರಹಳ್ಳಿ ಬಸವ ಮಂದಿರದಲ್ಲಿ ಶ್ರೀ ಮ. ನಿ. ಪ್ರ. ಚಂದ್ರಶೇಖರ ಮಹಾಸ್ವಾಮಿಗಳ 169 ನೇ ಜಯಂತಿ, ಶ್ರೀ ಮ. ನಿ. ಪ್ರ. ಜಯಚಂದ್ರಶೇಖರ ಮಹಾಸ್ವಾಮಿಗಳ 28ನೆಯ ಸಂಸ್ಮರಣೆ ಅಂಗವಾಗಿ ಇಂದು ನಡೆದ ಬಸವತತ್ವ ಸಮಾವೇಶದಲ್ಲಿ ಅಭಿನಂದನೆ ಸ್ವೀಕರಿಸಿ ಶ್ರೀಗಳು ಆಶೀರ್ವಚನ ನೀಡಿದರು.ಇಂದಿನ ಮಕ್ಕಳು ಡಾಕ್ಟರ್ ಇಂಜಿನಿಯರ್ ಆಗಬೇಕೆಂದು ಹೇಳುತ್ತಾರೆಯೇ ವಿನಃ ಒಳ್ಳೆಯ ರೈತ, ಒಳ್ಳೆಯ ಸ್ವಾಮೀಜಿ ಆಗುತ್ತೇನೆ ಎಂದು ಯಾರೂ ಹೇಳುವುದಿಲ್ಲ. ಸಮಾಜಕ್ಕೆ ತನು, ನಿಸ್ವಾರ್ಥ ಭಾವದ ಉತ್ತಮ ಚಾರಿತ್ರದ ಸ್ವಾಮೀಜಿ ದೊರೆಯುವುದು ವಿರಳವಾದ ಸಂದರ್ಭದಲ್ಲಿ ಸಮಾಜವನ್ನು ಸರಿ ದಾರಿಯಲ್ಲಿ ನಡೆಸುವ ಸಚ್ಚಾರಿತ್ರ್ಯ ಸ್ವಾಮೀಜಿಗಳ ಅಗತ್ಯ ಇದೆ ಎಂದರು.
ಕಾರ್ಯಕ್ರಮ ಉಧ್ಘಾಟಿಸಿದ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಬಸವಾದಿ ಶರಣರ ವಿಚಾರಧಾರೆ ಪಾಲಿಸಲು ಹೇಳುವುದು ಸುಲಭ ಆದರೆ, ಬದುಕಲ್ಲಿ ಅಳವಡಿಸಿಕೊಳ್ಳುವುದು ಬಹು ಕಷ್ಟದ ವಿಚಾರ. ಅವರ ಸಂಪೂರ್ಣ ಆದರ್ಶಗಳನ್ನು ಪಾಲಿಸಲು ಸಾಧ್ಯವಾಗದಿದ್ದರೂ ಅದರಲ್ಲಿ ಕೆಲವನ್ನಾದರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.ದೇಶದಲ್ಲಿ ಕಾಯಕ ಯೋಗಿ ಬಸವಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಹುಟ್ಟದೇ ಇದ್ದಿದ್ದರೆ ದೇಶದ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿರುತ್ತಿತ್ತು. ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನವಾದ ಸ್ಥಾನ ನೀಡಬೇಕೆಂದರು.
ಪ್ರಾಧ್ಯಾಪಕ ಪ್ರಶಾಂತ ನಾಯಕ್ ದಿಕ್ಸೂಚಿ ಭಾಷಣ ಮಾಡಿ, ಈಗಾಗಲೇ ಬಸವಣ್ಣನವರನ್ನು ನಾಡಿನ ಜನ ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡು ಬಹುದಿನಗಳು ಕಳೆದು ಹೋಗಿದೆ. ಆದರೆ, ತಡವಾಗಿಯಾದರೂ ರಾಜ್ಯ ಸರ್ಕಾರ ಬಸವಣ್ಣ ನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಶ್ಲಾಘನೀಯ ಎಂದರು.ಮೌಢ್ಯ, ಅಂಧಕಾರದ ಹೆಸರಿನಲ್ಲಿ ಶೋಷಣೆಗೊಳಗಾಗಿದ್ದ ಜನರಲ್ಲಿ ಜಾಗೃತಿ ಮೂಡಿದ ಬಸವಣ್ಣ ಈ ದೇಶದ ಹೆಮ್ಮೆಯ ವ್ಯಕ್ತಿ. ನಾಲಿಗೆ ಜನ ತಮಗೆ ಬೇಕಾದಂತೆ ಹೊರಳಿಸುತ್ತಿರುವ ಈ ದಿನಗಳಲ್ಲಿ ಮನುಷ್ಯ ತನ್ನ ನಾಲಿಗೆಯನ್ನು ಶುದ್ಧಗೊಳಿಸಿ ಕೊಂಡರೆ ಆಲೋಚನೆ, ಭಾವನೆಗಳು ಶುದ್ಧವಾಗುತ್ತವೆ ಎಂಬುದನ್ನು ಶರಣರು ನುಡಿದರೆ ಮಾಣಿಕ್ಯದ ಹಾರದಂತಿರಬೇಕು ಎಂದು ಹೇಳಿದ್ದಾರೆ.
ದೇಶದ ಸಮಾಜಿಕ ವ್ಯವಸ್ಥೆಯಲ್ಲಿ ಜಾತಿ ಎಂಬುದು ದರಿದ್ರ ಆಲೋಚನೆ ಎಂಬುದನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಬೋಧಿಸಬೇಕಿದೆ ಎಂದು ಬಸವಣ್ಣನವರ ವೈಚಾರಿಕ ವಿಚಾರಧಾರೆಗಳು ಇಂದು ಅತ್ಯಗತ್ಯ ಎಂದರು.ಇತ್ತೀಚಿನ ದಿನಗಳಲ್ಲಿ ಪ್ರತಿ ಒಂದು ಸ್ಥಳದಲ್ಲಿಯೂ ಬುದ್ಧ ಬಸವ ಪ್ರತಿಷ್ಠಾಪಿಸಲ್ಪಡುತ್ತಿದ್ದಾರೆ. ಬಹಳಷ್ಟು ಕಾರ್ಯಕ್ರಮ ಗಳಲ್ಲಿ ಬುದ್ಧ, ಬಸವನ ಸಮಗ್ರ ಪರಿಚಯವಿಲ್ಲದಿದ್ದರೂ ಸಹ ಕೊಡುಗೆಯಾಗಿ ಬುದ್ಧ ಬಸವರ ವಿಗ್ರಹ ನೀಡಲಾಗುತ್ತಿದೆ ಇದೇ ಬೆಳವಣಿಗೆ ಮುಂದುವರಿದರೆ ಮುಂದೊಂದು ದಿನ ಜನ ಬುದ್ಧ ಬಸವ ಮಾರ್ಗಕ್ಕೆ ಮರಳುವ ಭರವಸೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.
ಶಾಲಾ ಕಾಲೇಜು ಕಚೇರಿ ಒಳಗೆ ಬಸವಣ್ಣನವರ ಭಾವಚಿತ್ರ ಇಟ್ಟು ಅವರಿಗೆ ಕರ್ಪೂರ ಹಚ್ಚಿದರೆ ಸಾಲದು ವಚನ ಚಳುವಳಿಯಲ್ಲಿ ಬಸವಣ್ಣನವರು ಹೇಳಿದ್ದ ವಿಜ್ಞಾನ ಮತ್ತು ವೈಚಾರಿಕತೆಯನ್ನು ಅಳವಡಿಸಿ ಕೊಳ್ಳಬೇಕೆಂದರು.ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗು ರಫ್ತು ನಿಗಮದ ಅಧ್ಯಕ್ಷ ಬಿ. ಎಚ್. ಹರೀಶ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಎಚ್. ಸಿ. ಕಲ್ಮರುಡಪ್ಪ, ಎಂ. ಎಸ್. ನಿರಂಜನ, ಮಹಡಿಮನೆ ಸತೀಶ್, ಬಿ. ಎ. ಶಿವಶಂಕರ್, ಬಿ. ಜೆ. ಸೋಮಶೇಖರಪ್ಪ, ಬಿ. ಸಿ. ಬಸವರಾಜು, ಬಿ. ಎನ್. ಚಿದಾನಂದ್, ಎನ್. ಸಿ. ಶಿವಕುಮಾರ್, ಗುರುಮಲ್ಲಪ್ಪ, ಅರುಣ್ ಕುಮಾರ್ ಉಪಸ್ಥಿತರಿದ್ದರು. --- ಬಾಕ್ಸ್---
ದುರ್ದೈವದ ಸಂಗತಿ.ಚಿನ್ನದ ಹಿಂದೆ ಹೋಗುತ್ತಿರುವ ಮನುಷ್ಯ ಅನ್ನವನ್ನು ಮರೆಯುತ್ತಿರುವುದು ದುರ್ದೈವದ ಸಂಗತಿ. ಮನುಷ್ಯ ಯಾವುದರ ಹಿಂದೆ ಹೋಗಬೇಕು ಎನ್ನುವ ಬಗ್ಗೆಯೇ ಜಿಜ್ಞಾಸೆಯಲ್ಲಿದ್ದಾನೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು. ಇಡೀ ದೇಹದಲ್ಲಿ ಮೂಳೆ ಇಲ್ಲದ ಅಂಗವೆಂದರೆ ಅದು ನಾಲಿಗೆ ನಾಲಿಗೆಗೆ ಆದ ಗಾಯ ಮಾಯಬಹುದು ಆದರೆ ನಾಲಿಗೆಯಿಂದ ಆದ ಗಾಯ ಮಾಯಲು ಸಾಧ್ಯವಿಲ್ಲ ಪ್ರತಿಯೊಬ್ಬರು ನಡೆ-ನುಡಿಯಲ್ಲಿ ವ್ಯತ್ಯಾಸವಿಲ್ಲದೆ ಬಸವಾದಿ ಪ್ರಮಥರ ಆಶಯ ದಂತೆ ನಡೆಯೋಣ ಎಂದು ಹೇಳಿದರು.
8 ಕೆಸಿಕೆಎಂ 1ಚಿಕ್ಕಮಗಳೂರಿನ ದೊಡ್ಡಕುರುಬರಹಳ್ಳಿ ಬಸವ ಮಂದಿರದಲ್ಲಿ ನಡೆದ ಬಸವತತ್ವ ಸಮಾವೇಶವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ಶ್ರೀ ನಿಜಗುಣಾನಂದ ಸ್ವಾಮೀಜಿ, ಬಿ.ಎಚ್. ಹರೀಶ್, ಸಿ.ಟಿ. ರವಿ, ಕಲ್ಮರುಡಪ್ಪ ಇದ್ದರು.