ಮದ್ಯದಂಗಡಿ ಸ್ಥಳಾಂತರಕ್ಕೆ ಅಹೋರಾತ್ರಿ ಧರಣಿ

KannadaprabhaNewsNetwork | Published : Mar 9, 2024 1:31 AM

ಸಾರಾಂಶ

ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಹತ್ತಿರದ ಸಂಕೋನಟ್ಟಿ ವಲಯದ ಜನವಸತಿ ಪ್ರದೇಶದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದಂಗಡಿಗೆ ಅನುಮತಿ ನೀಡಿದ್ದು, ಬಾಡಿಗೆ ಮನೆಯಲ್ಲಿ ನಡೆಸುತ್ತಿರುವ ಈ ಮದ್ಯದ ಅಂಗಡಿಯನ್ನು ಕೂಡಲೇ ತೆರವುಗೊಳಿಸಬೇಕು. ಮದ್ಯದಂಗಡಿ ಬೇರೆ ಕಡೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ಸಂಕೋನಟ್ಟಿ ಗ್ರಾಮಸ್ಥರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಅಥಣಿ

ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಹತ್ತಿರದ ಸಂಕೋನಟ್ಟಿ ವಲಯದ ಜನವಸತಿ ಪ್ರದೇಶದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದಂಗಡಿಗೆ ಅನುಮತಿ ನೀಡಿದ್ದು, ಬಾಡಿಗೆ ಮನೆಯಲ್ಲಿ ನಡೆಸುತ್ತಿರುವ ಈ ಮದ್ಯದ ಅಂಗಡಿಯನ್ನು ಕೂಡಲೇ ತೆರವುಗೊಳಿಸಬೇಕು. ಮದ್ಯದಂಗಡಿ ಬೇರೆ ಕಡೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ಸಂಕೋನಟ್ಟಿ ಗ್ರಾಮಸ್ಥರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ನೂರಾರು ಮಹಿಳೆಯರು ಮತ್ತು ಪುರುಷರು ಕಳೆದ ಎರಡು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸ್ಥಳಕ್ಕೆ ಅಥಣಿ ಪಿಎಸ್ಐ ಶಿವಾನಂದ ಕಾರಜೋಳ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದರೂ ಅಬಕಾರಿ ಇಲಾಖೆಯ ಅಧಿಕಾರಿಗಳು ಬಂದು ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿದ ಮಹಿಳೆಯರು ಮತ್ತು ಮಕ್ಕಳು ಅಹೋರಾತ್ರಿಯ ಧರಣಿಯಲ್ಲಿ ನಿರತರಾಗಿದ್ದಾರೆ.

ತಾಲೂಕಿನ ಮಸರಗುಪ್ಪಿಯಲ್ಲಿ ನಡೆಸಲಾಗುತ್ತಿದ್ದ ಎಂಎಸ್‌ಐಎಲ್ ಮದ್ಯದಂಗಡಿಯನ್ನು ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಹತ್ತಿರದ ಜನವಸತಿ ಪ್ರದೇಶದ ಹತ್ತಿರ ಬಾಡಿಗೆ ಮನೆ ಒಂದರಲ್ಲಿ ಸ್ಥಳಾಂತರಿಸಲಾಗಿದೆ. ಇಲ್ಲಿನ ನಿವಾಸಿಗಳು, ಮಹಿಳೆಯರು ಈ ಮದ್ಯದಂಗಡಿಯಿಂದ ಸಾರ್ವಜನಿಕರಿಗೆ, ಮಹಿಳೆಯರಿಗೆ ಮತ್ತು ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ. ಇಲ್ಲಿ ಮದ್ಯದಂಗಡಿ ನಡೆಸಲು ನಾವು ಅವಕಾಶ ನೀಡುವುದಿಲ್ಲ. ಅಬಕಾರಿ ಅಧಿಕಾರಿಗಳು ಕೂಡಲೇ ಅನುಮತಿ ನೀಡಿದ ಈ ಅಂಗಡಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದರು.

ಇಲ್ಲಿನ ನಿವಾಸಿ ನಂದಾಶ್ರೀ ಉಗಾರೆ ಸುದ್ದಿಗಾರರೊಂದಿಗೆ ಮಾತನಾಡಿ, 2019ರಲ್ಲಿ ಇಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿರುವವರ ಬಗ್ಗೆ ಅಬಕಾರಿ ಇಲಾಖೆ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ಅದರ ನಂತರ ಈಗ ಸಾರಾಯಿ ಅಂಗಡಿ ನಡಿಸಲು ಜನವಸತಿ ಇರುವ ಬಾಡಿಗೆ ಮನೆಯಲ್ಲಿ ಇಲಾಖೆಯ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಇಲ್ಲಿ ಹನುಮಂತನ ದೇವಸ್ಥಾನವಿದೆ, ಮಸೀದಿ ಇದೆ, ಇದಲ್ಲದೆ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಇದೆ. ಇಲ್ಲಿ ಸಾರಾಯಿ ಅಂಗಡಿಯನ್ನು ಪ್ರಾರಂಭಿಸುವುದರಿಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬಹಳಷ್ಟು ತೊಂದರೆಯಾಗುತ್ತದೆ. ಯಾವುದೇ ಕಾರಣಕ್ಕೂ ನಾವು ಇಲ್ಲಿ ಸಾರಾಯಿ ಅಂಗಡಿ ನಡಿಸಲು ಬಿಡುವುದಿಲ್ಲ. ಅಬಕಾರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಈ ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಎರಡು ದಿನಗಳಿಂದ ನಾವು ಧರಣಿ ನಡೆಸುತ್ತಿದ್ದರೂ ಯಾವ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ, ಅವರು ಇಲ್ಲಿಗೆ ಬರುವವರೆಗೆ ಹಗಲು-ರಾತ್ರಿ ನಾವು ಧರಣಿ ಮುಂದುವರಿಸುತ್ತೇವೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಅಬಕಾರಿ ಇಲಾಖೆಯ ಡಿವೈಎಸ್ಪಿ ವಜ್ರಮಟ್ಟಿ ಅವರನ್ನು ಸಂಪರ್ಕಿಸಿದಾಗ ನಮ್ಮ ಇಲಾಖೆಯ ಅನುಮತಿ ಪಡೆದುಕೊಂಡು ಮಸರಗುಪ್ಪಿಯಿಂದ ಅಂಗಡಿಯನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಜನವಸತಿ ಪ್ರದೇಶ ಇರುವುದು ನಿಜ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೆ ಬೇರೆ ಕಡೆಗೆ ಸ್ಥಳಾಂತರಿಸುತ್ತೇವೆ. ಪ್ರತಿಭಟನೆ ಕೈಬಿಡುವಂತೆ ಅಲ್ಲಿನ ಜನರಲ್ಲಿ ಮನವಿ ಮಾಡಿದ್ದೇವೆ. ಈಗ ರಜೆ ಇರುವುದರಿಂದ ಸೋಮವಾರ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

---

ಕೋಟ್‌

ರಾಜ್ಯ ಸರ್ಕಾರ ಮಹಿಳೆಯರ ಸ್ವಾವಲಂಬಿ ಬದುಕಿಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ ₹2000 ನೀಡಿ, ಈ ರೀತಿ ಮನೆಗಳಿರುವ ಪ್ರದೇಶದಲ್ಲಿ ಸಾರಾಯಿ ಅಂಗಡಿ ತೆರೆದು ನಮ್ಮ ಗಂಡು ಮಕ್ಕಳಿಗೆ ಕುಡಿತದ ಚಟ ಕಲಿಸುವುದು ಯಾವ ನ್ಯಾಯ?. ನಿಮಗೆ ಹಣ ಬೇಕಾದರೆ ನಾವೇ ಕೊಡುತ್ತೇವೆ, ಸಾರಾಯಿ ಅಂಗಡಿಗಳನ್ನು ಮೊದಲು ಬಂದ್ ಮಾಡಿ.

-ತಾಯವ್ವ ನಾಯಿಕ, ಗ್ರಾಮದ ಮಹಿಳೆ.

Share this article