ಕುಷ್ಟಗಿ: ತಾಲೂಕಿನ ದೋಟಿಹಾಳದ ಶುಖಮುನಿ ತಾತನ ಜಾತ್ರೆ ಅದ್ಧೂರಿಯಾಗಿ ಆಚರಣೆಗೆ ಎಲ್ಲ ಸಿದ್ಧತೆಗಳು ನಡೆದಿದ್ದು, ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಮಾ.10ರಂದು ಶಿವರಾತ್ರಿ ಅಮವಾಸ್ಯೆಯಂದು ಜರುಗುವ ಅವಧೂತ ಶುಖಮುನಿ ತಾತನ ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ನೆರವೇರಲಿದೆ. ಈಗಾಗಲೇ ಮಹಾ ರಥೋತ್ಸವದ ಸ್ವಚ್ಛತಾ ಕಾರ್ಯವು ಹಾಗೂ ಬಣ್ಣಲೇಪನ ಕಾರ್ಯವು ಭರದಿಂದ ನಡೆದಿದೆ.ಮಾ.9ರಂದು ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಬೆಳಿಗ್ಗೆ ತೇರಿನ ಮೇಲಿನ ಕಳಶದ ಮೆರವಣಿಗೆ ನಡೆಯುತ್ತದೆ. ಮೆರವಣಿಗೆಯಲ್ಲಿ ದೋಟಿಹಾಳ-ಕೇಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ಭಕ್ತರು ಕಳಶಕ್ಕೆ ಸಾರ್ವಜನಿಕರು ಮಡಿಯಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ಹರಕೆ ಹಾಗೂ ಬೇಡಿಕೆಗಳನ್ನು ಕುಂಚಿಗೆಯನ್ನು ಹಾಕುವ ಮತ್ತು ತೆಗೆದುಕೊಳ್ಳುವ ಮೂಲಕ ಬೇಡಿಕೊಳ್ಳುತ್ತಾರೆ. ನಂತರ ಕಳಶವು ತೇರಿನೆ ಮೇಲೆ ಏರಿಸಲಾಗುತ್ತದೆ.
ನಂತರ ಪಲ್ಲಕ್ಕಿ ಉತ್ಸವ ಅವಳಿ ಗ್ರಾಮಗಳ ಪ್ರಮುಖ ದೇವಾಲಯಗಳಲ್ಲಿ ಗದ್ದುಗೆ ಹಾಕಿಸುವ ನಡೆಯುತ್ತದೆ. ರಾತ್ರಿ ಹೊತ್ತು ಉಪವಾಸ ಇರುವ ಭಕ್ತರು ಸಂಜೆ ಪಲ್ಲಕ್ಕಿ ಉತ್ಸವದ ನಂತರ ಉಪವಾಸ ಕೈಬಿಡುವುದು ಸಂಪ್ರದಾಯವಾಗಿ ಬಂದಿದೆ.ನೂರಾರು ಅಂಗಡಿಗಳು:
ಮಠದ ಆವರಣದಲ್ಲಿ ಪ್ರತಿ ವರ್ಷವೂ ಅಂಗಡಿಗಳನ್ನು ಹಾಕಲಾಗುತ್ತದೆ. ಜಾತ್ರೆಯಲ್ಲಿ ಬರುವಂತಹ ಎಲ್ಲ ಅಂಗಡಿಗಳಿಗೂ ಮಠದ ಕಮಿಟಿಯವರು ಸ್ಥಳಾವಕಾಶ ಮಾಡಿಕೊಡುವ ಮೂಲಕ ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಜೆಸ್ಕಾಂನವರು ವಿದ್ಯುತ್ ವ್ಯವಸ್ಥೆ ಮಾಡುತ್ತಿದ್ದಾರೆ.ಝಗಮಗಿಸುತ್ತಿರುವ ದೇವಸ್ಥಾನ:
ಶುಖಮುನಿ ತಾತನ ಜಾತ್ರಾ ಮಹೋತ್ಸವ ಅಂಗವಾಗಿ ಹೊಸ ದೇವಸ್ಥಾನ ಹಾಗೂ ಹಳೆಯ ದೇವಸ್ಥಾನಕ್ಕೆ ವಿದ್ಯುತ್ ದೀಪಗಳ ಮೂಲಕ ಅಲಂಕಾರ ಮಾಡಿದ್ದು, ದೇವಸ್ಥಾನವು ವಿದ್ಯುತ್ ದೀಪಾಲಂಕಾರಗಳಿಂದ ಝಗಮಗಿಸುತ್ತಿದೆ.ಅನ್ನದಾಸೋಹ:
ಪ್ರತಿದಿನ ಸುಮಾರು ಐದು ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ. ಜಾತ್ರೆಯ ಎರಡು ದಿನಗಳಲ್ಲಿ 30 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸವಿಯುತ್ತಾರೆ. ದಾಸೋಹದಲ್ಲಿ ಅನ್ನ, ಸಾಂಬಾರು, ಸಿರ, ಗೋಧಿ ಹುಗ್ಗಿ, ಕಡಕ್ ರೊಟ್ಟಿ, ಚಟ್ಟಿ, ಮೊಸರು, ತರಕಾರಿ ಪಲ್ಲೆ, ಕಡಲೆಕಾಳು ಪಲ್ಲೆ ಸೇರಿದಂತೆ ತಹರೇವಾರಿ ಖಾಧ್ಯವನ್ನು ಭಕ್ತರಿಗೆ ಬಡಿಸಲು ವ್ಯವಸ್ಥೆ ಮಾಡಲಾಗಿದೆ.ಎಂಟು ದಿನಗಳ ಕಾಲ ನಡೆಯುವ ಸುಖಮುನಿ ತಾತನ ಪಲ್ಲಕ್ಕಿ ಉತ್ಸವದಲ್ಲಿ ದೋಟಿಹಾಳ ಹಾಗೂ ಕೇಸೂರು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ದೂರದ ಊರುಗಳಿಂದ ಬರುವ ಭಕ್ತರಿಗೆ ಮಠದಲ್ಲಿ ಒಂದು ವಾರದ ಕಾಲ ಬೆಳಗ್ಗೆಯಿಂದ ರಾತ್ರಿ 11 ಗಂಟೆಯವರೆಗೆ ದಾಸೋಹ ನಡೆಯುತ್ತದೆ. ಈ ದಾಸೋಹದಲ್ಲಿ 10ಕ್ಕೂ ಹೆಚ್ಚು ಜನ ಅಡುಗೆ ತಯಾರಕರು, ಅಡುಗೆ ಸಾಮಗ್ರಿಗಳನ್ನು ಸಿದ್ಧಪಡಿಸುವರು, ಭಕ್ತರಿಗೆ ಪ್ರಸಾದ ನೀಡಲು ಸುಮಾರು ಐದಾರು ಜನರು ನಿತ್ಯ ಸೇವೆ ಮಾಡುತ್ತಿರುವುದನ್ನು ಗಮನಿಸಬಹುದಾಗಿದೆ.
10ನೇ ತರಗತಿ ಬಳಗದಿಂದ ಪ್ರಸಾದ: 2010ನೇಯ ಸಾಲಿನ ಹತ್ತನೆಯ ತರಗತಿ ವಿದ್ಯಾರ್ಥಿಗಳ ಗೆಳೆಯರ ಬಳಗವು ಪ್ರತಿ ವರ್ಷದಂತೆ ಈ ವರ್ಷವೂ ಸಹಿತ ಒಂದು ದಿನದ ಅನ್ನದಾಸೋಹವನ್ನು ಮಾಡುತ್ತಿದ್ದು ಈ ದಾಸೋಹದಲ್ಲಿ ಗೋಧಿ ಹುಗ್ಗಿ, ಪಲಾವ್, ಸಿಹಿ ಅಡುಗೆ, ತುಪ್ಪ, ಚಟ್ನಿ, ಸೇರಿದಂತೆ ವಿವಿಧ ಖಾದ್ಯಗಳನ್ನು ನೀಡುತ್ತಿದ್ದು ಶ್ಲಾಘನೀಯ ಕಾರ್ಯವಾಗಿದೆ ಎನ್ನಬಹುದು.