ಕನ್ನಡಪ್ರಭ ವಾರ್ತೆ ಮದ್ದೂರು
ಬೆಳಗಿನಿಂದಲೇ ದೇಗುಗಳಲ್ಲಿ ವಿಶೇಷ ಪೂಜೆ ನೆರವೇರಿತು. ಅಸಂಖ್ಯಾತ ಭಕ್ತಾದಿಗಳು ದೇವಾಲಯಕ್ಕೆ ತೆರಳಿ ದರ್ಶನ ಪಡೆದು ಧನ್ಯತಾ ಭಾವ ಮೆರೆದರು. ಪಟ್ಟಣದ ಶ್ರೀಕಾಶಿವಿಶ್ವೇಶ್ವರಸ್ವಾಮಿ ದೇಗುಲದಲ್ಲಿ ಮುಂಜಾನೆಯಿಂದಲೇ ಸಾಮೂಹಿಕ ರುದ್ರ ಹೋಮ ನಂತರ ಪ್ರಥಮ ರುದ್ರಾಭಿಷೇಕ ತರುವಾಯ ಪುಷ್ಪಾಲಂಕಾರ ಸೇವೆಯೊಂದಿಗೆ ಮಹಾ ಮಂಗಳಾರತಿ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಸಂಜೆ ರುದ್ರಾಭಿಷೇಕ ದೊಂದಿಗೆ ವಿಶೇಷ ಪೂಜೆ ನೆರವೇರಿಸಿದ ಬಳಿಕ ಶಂಕರ್ ಸಭಾದಿಂದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ರಾತ್ರಿ ಜಾಗರಣೆ ಅಂಗವಾಗಿ ಶೃತಿಸಾಗರ ಭಜನಾ ಮಂಡಳಿಯಿಂದ ಭಕ್ತಿಗೀತೆಗಳೊಂದಿಗೆ ವಿವಿಧ ಕಾರ್ಯಕ್ರಮಗಳು ಜರುಗಿದವು.ಪುರಾಣ ಪ್ರಸಿದ್ಧ ವೈದ್ಯನಾಥಪುರದ ಶ್ರೀವೈದ್ಯನಾಥೇಶ್ವರ ದೇಗುಲದಲ್ಲಿ ರುದ್ರ ಹೋಮ. ರುದ್ರಾಭಿಷೇಕ ದೊಂದಿಗೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಮಳವಳ್ಳಿ ರಸ್ತೆಯ ಶ್ರೀವಿಶ್ವನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಬೆಳಗ್ಗೆ 6 ಗಂಟೆಯಿಂದ ಮಹಾ ಗಣಪತಿ ಹೋಮ. ನವಗ್ರಹ ಹೋಮ ಹಾಗೂ ಮೃತ್ಯುಂಜಯ ಹೋಮ ನೆರವೇರಿಸಲಾಯಿತು.
ತಾಲೂಕಿನ ಚಿಕ್ಕ ಅಂಕನಹಳ್ಳಿ ಶ್ರೀನಂದಿ ಬಸವೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಚನ್ನೇಗೌಡನ ದೊಡ್ಡಿ ಹೊರವಲಯದ ಬಸವನಗುಡಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಕಾರ್ಯಗಳು ನೆರವೇರಿದವು.
ಸೋಮನಹಳ್ಳಿಯ ಮಾದೇಶ್ವರ ದೇವಸ್ಥಾನ,ಚನ್ನೇಗೌಡ ಬಡಾವಣೆಯ ಶ್ರೀ ನಂದಿ ಬಸವೇಶ್ವರ ದೇವಾಲಯ ಸೇರಿದಂತೆ ವಿವಿಧ ಶಿವನ ದೇವಾಲಯ ಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.