ಸರ್ಕಾರಿ, ಅರಣ್ಯ ಭೂಮಿ ಶ್ರೀಗಂಧ ಮರಗಳಿಗೆ ಜಿಯೋ ಟ್ಯಾಗ್‌: ಈಶ್ವರ ಖಂಡ್ರೆ ಸೂಚನೆ

KannadaprabhaNewsNetwork | Published : May 16, 2025 2:04 AM
ಸರ್ಕಾರಿ ಮತ್ತು ಅರಣ್ಯ ಭೂಮಿಯಲ್ಲಿರುವ ಬೆಲೆ ಬಾಳುವ ಶ್ರೀಗಂಧದ ಮರಗಳಿಗೆ ಜಿಯೋ ಟ್ಯಾಗ್ ಮಾಡಿ, ಒಂದೇ ಒಂದು ಮರವೂ ಅಕ್ರಮ ಕಡಿತಲೆ ಆಗದಂತೆ ಎಚ್ಚರ ವಹಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.
Follow Us

ದಾವಣಗೆರೆ: ಸರ್ಕಾರಿ ಮತ್ತು ಅರಣ್ಯ ಭೂಮಿಯಲ್ಲಿರುವ ಬೆಲೆ ಬಾಳುವ ಶ್ರೀಗಂಧದ ಮರಗಳಿಗೆ ಜಿಯೋ ಟ್ಯಾಗ್ ಮಾಡಿ, ಒಂದೇ ಒಂದು ಮರವೂ ಅಕ್ರಮ ಕಡಿತಲೆ ಆಗದಂತೆ ಎಚ್ಚರ ವಹಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದರು.

ದಾವಣಗೆರೆಯಲ್ಲಿ ಗುರುವಾರ ಅರಣ್ಯ ಮತ್ತು ಪರಿಸರ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಶ್ರೀಗಂಧ ಮರಗಳ ಕಳವು ನಿಯಂತ್ರಿಸಲು ಜಿಯೋ ಟ್ಯಾಗ್ ಮಾಡಲು ಮತ್ತು ಕಳುವಾದರೆ ಸಂಬಂಧಿತ ಗಸ್ತು ಸಿಬ್ಬಂದಿಯನ್ನು ಹೊಣೆ ಮಾಡಲು ಸೂಚಿಸಿದರು.

ಜಿಲ್ಲೆಯಲ್ಲಿ ಸೆಕ್ಷನ್ 4 ಆಗಿರುವ ಕಂದಾಯ ಭೂಮಿಯನ್ನು ಸೆಕ್ಷನ್ 17 ಮಾಡಿ, ಅರಣ್ಯ ಎಂದು ಘೋಷಿಸಲು ತ್ವರಿತ ಕ್ರಮ ಕೈಗೊಳ್ಳಬೇಕು. ಹವಾಮಾನ ಬದಲಾವಣೆಯ ಪ್ರಸಕ್ತ ಕಾಲಘಟ್ಟದಲ್ಲಿ ಹಸಿರು ಹೊದಿಕೆಯ ಹೆಚ್ಚಳವೇ ಪರಿಹಾರವಾಗಿದೆ. ಮುಂಬರುವ ವನಮಹೋತ್ಸವ ಸಂದರ್ಭ ರಸ್ತೆಯ ಎರಡೂ ಬದಿಗಳಲ್ಲಿ ಎತ್ತರದ ಸಸಿಗಳನ್ನು ನೆಟ್ಟು ಪೋಷಿಸುವಂತೆ ತಿಳಿಸಿದರು.

ವಾಯುಮಾಲಿನ್ಯ ನಿಯಂತ್ರಣಕ್ಕೆ ಸೂಚನೆ:

ದಾವಣಗೆರೆಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ದೂರುಗಳು ಬಂದಿವೆ. ಇದರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ, ದೈನಂದಿನ ಆಧಾರದಲ್ಲಿ ವಾಯು ಮಾಲಿನ್ಯದ ಪರಿಶೀಲನೆ ನಡೆಸಿ ಹೆಚ್ಚು ಮಾಲಿನ್ಯ ಇರುವ ಪ್ರದೇಶದಲ್ಲಿ ಅದನ್ನು ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿತ ಸ್ಥಳೀಯ ಸಂಸ್ಥೆಗೆ ಸೂಚನೆ ನೀಡಲು ತಿಳಿಸಿದರು.

ಕುಡಿಯುವ ನೀರು ಪರಿಶುದ್ಧವಾಗಿರಬೇಕು. ಯಾರೂ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಬಾರದು, ಮರಣ ಹೊಂದಬಾರದು. ಈ ನಿಟ್ಟಿನಲ್ಲಿ ನಿಯಮಿತವಾಗಿ ನೀರು ಪೂರೈಕೆ ಮಾಡುವ ಜಲಮೂಲಗಳ ಜಲ ಪರೀಕ್ಷಿಸಿ, ಕಲುಷಿತವಾಗಿದ್ದರೆ ಪಂಚಾಯಿತಿಗಳಿಗೆ, ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ನೀಡುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯ ಕೆಲವು ಕೈಗಾರಿಕೆಗಳಿಂದ ನದಿಗೆ ಮಾಲಿನ್ಯ ನೀರು ಹರಿಯುತ್ತಿದೆ ಎಂಬ ದೂರುಗಳಿವೆ. ಜಲಮೂಲಗಳು ಕಲುಷಿತವಾಗದಂತೆ ಆ ಕೈಗಾರಿಕೆಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲು ಪರಿಸರ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಇದಕ್ಕೂ ಮುನ್ನ ಪರಿಸರ ಇಲಾಖೆಯ ವಾಯು ಮಾಲಿನ್ಯ ನಿಗಾ ಮತ್ತು ಪರೀಕ್ಷಾ ಪ್ರಯೋಗಾಲಯ, ತ್ಯಾಜ್ಯ ಜಲ ಸಂಸ್ಕರಣಾ ಘಟಕ ಹಾಗೂ ನರ್ಸರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- - -

-15ಕೆಡಿವಿಜಿ40, 41:

ದಾವಣಗೆರೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಕುರಿತು ಪರಿಶೀಲನೆ ನಡೆಸಿದರು.