ಜೂ.೧೧ರಿಂದ ಚುಂಚನಗಿರಿಯಲ್ಲಿ ಸುಭಾಷ್ ಪಾಳೇಕಾರ್ ಕೃಷಿ ಕಾರ್ಯಾಗಾರ

KannadaprabhaNewsNetwork | Published : May 16, 2025 2:04 AM
Follow Us

ಸಾರಾಂಶ

ಜಿಲ್ಲೆಯಲ್ಲಿ ದೇಸಿ ತಳಿಯಾಗಿರುವ ಹಳ್ಳಿಕಾರ್ ತಳಿ ಅವನತಿಯತ್ತ ಸಾಗುತ್ತಿದೆ. ನೈಸರ್ಗಿಕ ಕೃಷಿ ಪದ್ಧತಿಗೆ ಮುಖ್ಯವಾಗಿ ದೇಶೀ ತಳಿಯ ಗೋಮೂತ್ರ, ಸಗಣಿ ಅತ್ಯವಶ್ಯವಾಗಿದೆ. ಆದರೆ, ಇಂತಹ ತಳಿಯ ಹಸುಗಳನ್ನು ಸಾಕಾಣೆ ಮಾಡಲು ನಮ್ಮ ರೈತರು ಹಿಂದೇಟು ಹಾಕುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಿರ್ಮಲ ಭೂಮಾತಾ ಟ್ರಸ್ಟ್, ಸುಭಾಷ್ ಪಾಳೇಕರ್ ಕೃಷಿ ಜನಾಂದೋಲನ ಇವರ ವತಿಯಿಂದ ಜೂ. ೧೧, ೧೨, ೧೩ರಂದು ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಪದ್ಮಶ್ರೀ ಡಾ.ಸುಭಾಷ್ ಪಾಳೇಕರ್ ಅವರ ನೇತೃತ್ವದಲ್ಲಿ ಮೂರು ದಿನಗಳ ಸುಭಾಷ್ ಪಾಳೇಕರ್ ಕೃಷಿ ಕಾರ್ಯಾಗಾರ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಅನಂತರಾವ್ ಕೆರಗೋಡು ತಿಳಿಸಿದರು.

ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥಸ್ವಾಮೀಜಿ ಸಾನ್ನಿಧ್ಯ ಹಾಗೂ ಶ್ರೀಪ್ರಸನ್ನನಾಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಸುವ ಕಾರ್ಯಾಗಾರವನ್ನು ಡಾ.ಸುಭಾಷ್ ಪಾಳೇಕರ್ ಅವರು ನಡೆಸಿಕೊಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯಲ್ಲಿ ದೇಸಿ ತಳಿಯಾಗಿರುವ ಹಳ್ಳಿಕಾರ್ ತಳಿ ಅವನತಿಯತ್ತ ಸಾಗುತ್ತಿದೆ. ನೈಸರ್ಗಿಕ ಕೃಷಿ ಪದ್ಧತಿಗೆ ಮುಖ್ಯವಾಗಿ ದೇಶೀ ತಳಿಯ ಗೋಮೂತ್ರ, ಸಗಣಿ ಅತ್ಯವಶ್ಯವಾಗಿದೆ. ಆದರೆ, ಇಂತಹ ತಳಿಯ ಹಸುಗಳನ್ನು ಸಾಕಾಣೆ ಮಾಡಲು ನಮ್ಮ ರೈತರು ಹಿಂದೇಟು ಹಾಕುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ ಎಂದು ನುಡಿದರು.

ರಾಮನಗರ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ದೇಶಿ ತಳಿಯ ಹಾಲು ಲೀಟರ್‌ಗೆ ೬೦ ರು.ನಿಂದ ೬೫ ರು.ವರೆಗೆ ಮಾರಾಟವಾಗುತ್ತಿದ್ದರೆ, ಜಿಲ್ಲೆಯಲ್ಲಿ ೮೦ ರಿಂದ ೧೦೦ ರು.ವರೆಗೆ ಮಾರಾಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಹಳ್ಳಿಕಾರ್ ಹಸುಗಳನ್ನು ಸಾಕಾಣಿಕೆ ಮಾಡಿ ಅದರಿಂದ ಬರುವಂತಹ ಹಾಲನ್ನು ಹಾಲು ಒಕ್ಕೂಟದಲ್ಲಿ ಖರೀದಿಸಲು ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಕೃಷಿ ಸಚಿವರನ್ನು ಒತ್ತಾಯಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಕೇವಲ ಹಾಲಿನ ಬಗ್ಗೆ ಮಾತ್ರ ನೋಡದೆ, ಸಗಣಿ, ಗೋ ಮೂತ್ರವನ್ನು ಗಣನೆಗೆ ತೆಗೆದುಕೊಂಡು ತಮ್ಮ ಜಮೀನಿಗೆ ಜೀವಾಮೃತ ತಯಾರಿಸಿ ಬೆಳೆಗಳಿಗೆ ಬಳಸಿದಲ್ಲಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು. ಪ್ರಸ್ತುತ ಒಂದು ಎಕರೆ ಜಮೀನಿನಲ್ಲಿ ಕೇವಲ ೩೦ ಟನ್ ಕಬ್ಬು ಬೆಳೆಯಲಾಗುತ್ತಿದೆ. ಇದು ಅತಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಬಳಕೆಯಿಂದಾಗಿ ಭೂಮಿ ಸತ್ವ ಕಳೆದುಕೊಂಡಿರುವುದನ್ನು ತೋರಿಸುತ್ತದೆ. ದೇಶಿ ಹಸುಗಳನ್ನು ಸಾಕಾಣಿಗೆ ಮಾಡುವ ಮೂಲಕ ಭೂಮಿಯನ್ನು ಮತ್ತೆ ಫಲವತ್ತನೆಯ ಪ್ರದೇಶವನ್ನಾಗಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ಟ್ರಸ್ಟ್ ಉಪಾಧ್ಯಕ್ಷ ಎಂ.ಎಸ್. ಮಹೇಶ್‌ಕುಮಾರ್ ಮಾತನಾಡಿ, ಹಳ್ಳಿಕಾರ್ ಹಸುಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮನೆಗೊಂದು ಹಳ್ಳಿಕಾರ್ ಹಸು ಹಾಗೂ ಊರಿಗೊಂದು ಹಳ್ಳಿಕಾರ್ ಹೋರಿ ಎಂಬ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದರು.

ಟ್ರಸ್ಟ್‌ನ ವಿವಿಧ ತಾಲೂಕಿನ ಮುಖಂಡರಾದ ಸೋಮು, ಚಂದ್ರು, ಬಸವರಾಜು, ಜಗದೀಶ್‌ಕುಮಾರ್, ವೆಂಕಟೇಶ್, ಮಂಜು ಇತರರು ಗೋಷ್ಠಿಯಲ್ಲಿದ್ದರು.