ಜೆಸ್ಕಾಂ ಬೇಜವಾಬ್ದಾರಿ: ಕತ್ತಲೆ ಕೂಪದಲ್ಲಿ ಜನ

KannadaprabhaNewsNetwork |  
Published : Sep 24, 2025, 01:00 AM IST
ಚಿತ್ರ 23ಬಿಡಿಆರ್‌1ರವಿಕುಮಾರ್ ಕಾರಬಾರಿ, ಎಇಇ ಜೆಸ್ಕಾಂ ಔರಾದ್‌ | Kannada Prabha

ಸಾರಾಂಶ

ಮಳೆ ಗಾಳಿ ಏನೂ ಇಲ್ಲದೆ ವಿದ್ಯುತ್‌ ಸರಬರಾಜಿನಲ್ಲಿ ದೋಷ ಕಂಡು ಬಂದರೂ ಗುಲಬರ್ಗಾ ವಿದ್ಯುತ್‌ ಸರಬರಾಜು ಕಂಪನಿಯ (ಜೆಸ್ಕಾಂ) ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸತತ ಎರಡು ದಿನಗಳ ಕಾಲ ಇಲ್ಲಿನ 9 ಗ್ರಾಮಗಳ ಜನರು ವಿದ್ಯುತ್‌ ಪೂರೈಕೆ ಇಲ್ಲದೆ ಹಗಲು ರಾತ್ರಿ ಪರದಾಡಿದ ಘಟನೆ ನಡೆದಿದೆ.

ಅನೀಲಕುಮಾರ್ ದೇಶಮುಖ

ಕನ್ನಡಪ್ರಭ ವಾರ್ತೆ ಔರಾದ್‌

ಮಳೆ ಗಾಳಿ ಏನೂ ಇಲ್ಲದೆ ವಿದ್ಯುತ್‌ ಸರಬರಾಜಿನಲ್ಲಿ ದೋಷ ಕಂಡು ಬಂದರೂ ಗುಲಬರ್ಗಾ ವಿದ್ಯುತ್‌ ಸರಬರಾಜು ಕಂಪನಿಯ (ಜೆಸ್ಕಾಂ) ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸತತ ಎರಡು ದಿನಗಳ ಕಾಲ ಇಲ್ಲಿನ 9 ಗ್ರಾಮಗಳ ಜನರು ವಿದ್ಯುತ್‌ ಪೂರೈಕೆ ಇಲ್ಲದೆ ಹಗಲು ರಾತ್ರಿ ಪರದಾಡಿದ ಘಟನೆ ನಡೆದಿದೆ.

ಕಮಲನಗರ ತಾಲೂಕಿನ ಚಿಮ್ಮೆಗಾಂವ್‌ ಗ್ರಾಪಂ ವ್ಯಾಪ್ತಿಯ ಹಂದಿಖೇರಾ, ಮಾಳೆಗಾಂವ್‌, ಧೋಪರವಾಡಿ, ಚಿರ್ಕಿ ತಾಂಡ, ವಾಗನಗೇರಾ, ಲಷ್ಕರನಾಯಕ ತಾಂಡ, ಸೋಮಾನಾಯಕ ತಾಂಡ, ಕುರುಬುರವಾಡಿ, ರುಪ್ಲಾ ತಾಂಡ, ಸೇವಾನಗರ ತಾಂಡ ಹಾಗೂ ಹಂದಿಖೇರಾ ತಾಂಡದಲ್ಲಿ ಕಳೆದ ಭಾನುವಾರ ಏಕಾಏಕಿ ವಿದ್ಯುತ್‌ ಕಡಿತವಾಗಿದೆ.

ನಂತರ ಇದನ್ನು ಸರಿಪಡಿಸುವಂತೆ ಸ್ಥಳೀಯರು ಸತತವಾಗಿ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಯಾವೊಬ್ಬ ಅಧಿಕಾರಿ ಇಲ್ಲಿನ ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗಿಲ್ಲ. ಹೀಗೆ ಭಾನುವಾರ ಹಾಗೂ ಸೋಮವಾರ ಎರಡು ದಿನಗಳ ಕಾಲ 9 ಗ್ರಾಮಗಳಲ್ಲಿ ಕಾಡ್ಗತ್ತಲೆ ಆವರಿಸಿಕೊಂಡು ಜನ ನರಕಯಾತನೆ ಅನುಭವಿಸುವಂತಾಗಿದೆ.

ವಿದ್ಯುತ್‌ ಇಲ್ಲದಕ್ಕೆ ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳಲಾಗದೆ ಹಲವರು ಪರದಾಡಿದ್ದಾರೆ. ಎರಡು ದಿನಗಳ ಕಾಲ ಮೊಬೈಲ್‌ ಬಳಸಲಾಗದೆ ಜನರು ಸಂಕಷ್ಟ ಎದುರಿಸಿದ್ರೆ ಸಾರ್ವಜನಿಕ ಕುಡಿಯುವ ನೀರಿನ ಸರಬರಾಜು ಕೂಡ ಸ್ಥಗಿತವಾಗಿ ಜನರು ಮಳೆಗಾಲದಲ್ಲೂ ಕುಡಿಯುವ ನೀರಿಗಾಗಿ ಪರದಾಡಿದ ಸ್ಥಿತಿ ಉಲ್ಬಣಗೊಂಡಿತ್ತು.

ಸೋಮವಾರ ರಾತ್ರಿ ಸುರಿದ ಮಳೆಯಲ್ಲಂತೂ ಕೆಲ ಗ್ರಾಮಗಳಲ್ಲಿ ವಿಷ ಜಂತುಗಳು ಮನೆಗಳಿಗೆ ಸೇರಿ ಜನರು ನಿದ್ದೆಗೆಟ್ಟು ಜೆಸ್ಕಾಂ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಜೆಸ್ಕಾಂ ಬೇಜವಾಬ್ದಾರಿ: ಖೇರ್ಡಾ ಉಪ ಸ್ಟೇಶನ್‌ ಅಡಿಯಲ್ಲಿ ಬರುವ ಈ ಭಾಗದಲ್ಲಿ ಶನಿವಾರ ತಡ ರಾತ್ರಿ ವಿದ್ಯುತ್‌ ಸಂಪರ್ಕದಲ್ಲಿ ದೋಷ ಉಂಟಾಗಿದೆ. ತಕ್ಷಣ ಇದಕ್ಕೆ ಸ್ಪಂದಿಸಬೇಕಾದ ಸಿಬ್ಬಂದಿಗಳು ಮೊದ ಮೊದಲು ಅಸಡ್ಡೆತನ ತೋರಿದ್ದಾರೆ. ಎಇ ದಿನೇಶ ನಂತರ, ಎಇಇ ರವಿ ಕಾರಬಾರಿ ಅ‍ವರ ಗಮನಕ್ಕೆ ತಂದರೂ ನಿರ್ಲಕ್ಷ್ಯ ಮುಂದುವರೆದಿದೆ ಎಂಬುವುದು ಗ್ರಾಮಸ್ಥರ ಆರೋಪ. ಜೆಸ್ಕಾಂ ಈಗಲಾದರೂ ಎಚ್ಚೆತ್ತುಕೊಳ್ಳಲಿ.

----------

ಎರಡು ದಿನಗಳ ಕಾಲ ನಾವು ವಿದ್ಯುತ್‌ ಪೂರೈಕೆ ಮಾಡ್ರಿ ಅಂತ ಪರಿ ಪರಿಯಾಗಿ ಬೇಡಿಕೊಂಡಿವಿ. ಅಮವಾಸೆ ಇದೆ ದಸರಾ ನವಮಿ ಹಬ್ಬದ ಸಂಭ್ರಮವಿದೆ ಹಬ್ಬಕ್ಕೆ ಮನೆಯಲ್ಲಿ ನೀರಿಲ್ಲ. ದೂರದ ಊರುಗಳಿಗೆ ಹೋಗಿ ಮೊಬೈಲ್‌ ಚಾರ್ಜ್‌ ಮಾಡಿಕೊಂಡು ಜೆಸ್ಕಾಂ ಅಧಿಕಾರಿಗಳಿಗೆ ಫೋನ್‌ ಮಾಡಿದ್ರೆ ಯಾರೂ ಸ್ವೀಕರಿಸಲಿಲ್ಲ, ನಮ್ಮ ಭಾಗವನ್ನು ಕೃತಕವಾಗಿ ಬ್ಲಾಕೌಟ್‌ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

- ಮಾಧವ ಮಾಳಕರಿ, ಹಂದಿಖೇರಾ ಗ್ರಾಮಸ್ಥ

-----

ಎರಡು ದಿನಗಳ ಕಾಲ ವಿದ್ಯುತ್‌ ಸರಬರಾಜು ಸ್ಥಗಿತವಾಗಿದೆ. ಅಲ್ಲಿನ ಸಿಬ್ಬಂದಿ ತಪ್ಪು ಮಾಡಿದ್ದಾರೆ. ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ತೀವಿ. ಮುಂದೆ ಈ ರೀತಿ ಸೇವೆಯಲ್ಲಿ ಅಸಡ್ಡೆತನ ಹಾಗೂ ಬೇಜವಾಬ್ದಾರಿತನ ಆಗದಂತೆ ಎಚ್ಚರಿಕೆ ವಹಿಸಲಾಗುವುದು.

ರವಿಕುಮಾರ್ ಕಾರಬಾರಿ, ಎಇಇ ಜೆಸ್ಕಾಂ ಔರಾದ್‌

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ