ಕಾಲಕ್ಕೆ ತಕ್ಕಂತ ಕೌಶಲ್ಯ ಹೊಂದಿ ಉದ್ಯೋಗ ಪಡೆಯಿರಿ

KannadaprabhaNewsNetwork |  
Published : Feb 03, 2026, 03:15 AM IST
ಎಆಯ್ ಗೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು: ಸಚಿವ ಎಂ.ಬಿ.ಪಾಟೀಲ | Kannada Prabha

ಸಾರಾಂಶ

ವಿಜಯಪುರ ನಗರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಒಟ್ಟು 25, 356 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 11,713 ಅಭ್ಯರ್ಥಿಗಳು ಹಾಜರಾಗಿದ್ದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಆರ್ಟಿಫಿಸಿಯಲ್ ಇಂಟಲಿಜೆನ್ಸ್ (ಎಐ), ರೋಬೋಟ್‌ ತಂತ್ರಜ್ಞಾನ, ಗ್ರೀನ್ ಎನರ್ಜಿ ದಾಪುಗಾಲಿಟ್ಟಿದೆ. ಈ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು, ತಂತ್ರಜ್ಞಾನ ಅಳವಡಿಸಿಕೊಂಡು, ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ಪಡೆಯಲು ಇಂದಿನ ಯುವ ಜನಾಂಗ ಮುಂದಾಗಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

ನಗರದ ದರ್ಬಾರ ಶಾಲಾ ಆವರಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶಿಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಬೆಂಗಳೂರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಸೋಮವಾರ ನಡೆದ ಯುವ ಸಮೃದ್ಧಿ ಸಮ್ಮೇಳನ-ವಿಜಯಪುರ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಉದ್ಯೋಗ ಮೇಳದಲ್ಲಿ 25 ಸಾವಿರ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಬೇರೆ ಬೇರೆ ಉದ್ಯೋಗದಾತ ಕಂಪನಿಗಳ ಮೂಲಕ ಆಯ್ಕೆ ಬಯಸಿ ಈ ಮೇಳದ ಕುರಿತು ಯುವಜನರು ಆಶಾ ಕಿರಣ ಹೊಂದಿದ್ದಾರೆ. ಯುವ ನಿರುದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ಧ್ಯೇಯೋದ್ದೇಶದೊಂದಿಗೆ, ಇಂತಹ ಮೇಳಗಳನ್ನು ಆಯೋಜಿಸಿ ಸಹಾಯ-ಸಹಕಾರದೊಂದಿಗೆ ಅವಕಾಶಗಳನ್ನು ಒದಗಿಸಲಾಗುತ್ತಿದೆ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿರುವ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡುವ ಗುರಿಯೊಂದಿಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಮೈಸೂರು ಮತ್ತು ಕಲಬುರಗಿಯಲ್ಲಿ ಈಗಾಗಲೇ ಯಶಸ್ವಿಯಾಗಿ ಉದ್ಯೋಗ ಮೇಳ ಕೈಗೊಂಡು ಯಶಸ್ವಿಗೊಳಿಸಲಾಗಿದೆ. ರಾಜ್ಯದಲ್ಲಿ 3 ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಎರಡು ದಿನ ನಡೆದ ಉದ್ಯೋಗ ಮೇಳದಲ್ಲಿ 45 ಸಾವಿರ ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದು, 14 ಸಾವಿರ ಜನರಿಗೆ ಉದ್ಯೋಗ ದೊರೆತಿದೆ ಎಂದು ಹೇಳಿದರು. ರಾಜ್ಯದಿಂದ ಪ್ರತಿ ವರ್ಷ ಸುಮಾರು 1.15 ಲಕ್ಷ ಇಂಜಿನೀಯರ್ ಪದವಿ ಪಡೆದುಕೊಳ್ಳುತ್ತಿದ್ದಾರೆ. ಕೌಶಲ್ಯ ಕೊರತೆ ನೀಗಿಸಲು ಇಂಡಸ್ಟ್ರೀಜ್ ಲಿಂಕೇಜ್ ಜಾರಿ ಮಾಡಲಾಗುತ್ತಿದೆ ಎಂದು ಹೇಳಿದರು.

ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಮಾತನಾಡಿ, ಪದವಿಯೊಂದಿಗೆ ಕೌಶಲ್ಯ ರೂಢಿಸಿಕೊಳ್ಳಬೇಕು. ಕೌಶಲ್ಯ ಒಂದು ಶಕ್ತಿ, ಆಯುಧ, ಇದನ್ನು ಇಂದಿನ ಯುವಕರು ಅರಿತುಕೊಳ್ಳಬೇಕು. ಕೌಶಲ್ಯಾಭಿವೃದ್ಧಿ ನಿಗಮದದಿಂದ ನನ್ನ ವೃತ್ತಿ, ನನ್ನ ಆಯ್ಕೆ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ನವಕರ್ನಾಟಕ ನಿರ್ಮಾಣಕ್ಕಾಗಿ ನವ ಕೌಶಲ್ಯಗಳು ಪುಸ್ತಕ ಬಿಡುಗಡೆ ಮಾಡಲಾಯಿತು. ಜಲಜೀವನ ಮಿಷನ್ ಅಡಿಯಲ್ಲಿ ನಲ್-ಜಲ್ ಮಿತ್ರ ಕಾರ್ಯಕ್ರಮದಡಿ ಗ್ರಾಮ ಪಂಚಾಯತ್ ಕಾರ್ಯಾಲಯ ವ್ಯಾಪ್ತಿಯ ಎರಡು ಜನ ಮಹಿಳಾ ಸ್ವಸಹಾಯ ಸದಸ್ಯರಿಗೆ ಒಟ್ಟು 17 ದಿನಗಳವರೆಗೆ ಯಶಸ್ವಿಯಾಗಿ ಪಠ್ಯಕ್ರಮದಂತೆ ತರಗತಿ ಹಾಗೂ ಪ್ರಾಯೋಗಿಕ ತರಗತಿ ನೀಡಿ ನಂತರ 23 ದಿನಗಳ ಕಾಲ ಓಜೆಟಿ ತರಗತಿ ಕೈಗೊಂಡು ಮಹಿಳೆ ಸ್ವಾವಲಂಬಿಯಾಗಲು ಕೈಗೊಂಡ ಯೋಜನೆಯಡಿ ಸಾಂಕೇತಿಕವಾಗಿ ಹತ್ತು ಜನರಿಗೆ ಕಿಟ್ ವಿತರಿಸಲಾಯಿತು.

ಚಲನಚಿತ್ರ ನಟಿ ಸಪ್ತಮಿ ಗೌಡ ಮಾತನಾಡಿದರು. ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸ್ನೇಹಲ.ಆರ್ ಸ್ವಾಗತಿಸಿದರು. ಧಾರವಾಡ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ-ಉಪಾಧ್ಯಕ್ಷರು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಉದ್ಯೋಗದಾತ ಸಂಸ್ಥೆಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ವಿವಿಧ ಕಂಪನಿಗೆ 2,074 ಜನ ಆಯ್ಕೆ

ವಿಜಯಪುರ ನಗರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಒಟ್ಟು 25, 356 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 11,713 ಅಭ್ಯರ್ಥಿಗಳು ಹಾಜರಾಗಿದ್ದರು. 2,074 ಅಭ್ಯರ್ಥಿಗಳು ವಿವಿಧ ಕಂಪನಿಗಳ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದು, 4,313 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಆಗಿದ್ದಾರೆ. ಈ ಮೇಳದಲ್ಲಿ 160 ವಿವಿಧ ಕಂಪನಿಗಳು ನೋಂದಾಯಿಸಿಕೊಂಡು, 141 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತ, ಶಿಕ್ಷಕ, ಸೈನಿಕ ದೇಶದ ಕಣ್ಣುಗಳು
ವೈಭವದ ಬನಶಂಕರೀದೇವಿ ಭಾವೈಕ್ಯತಾ ಮಹಾರಥೋತ್ಸವ