ಖರೀದಿಸಿದ ವಸ್ತುವಿಗೆ ರಸೀದಿ ಪಡೆಯಿರಿ: ನ್ಯಾ. ಮಾಯಣ್ಣ

KannadaprabhaNewsNetwork | Updated : Jan 11 2024, 01:20 PM IST

ಸಾರಾಂಶ

ಪ್ರತಿಯೊಬ್ಬರು ಹೆಚ್ಚಾಗಿ ಇ-ಕಾಮರ್ಸ್ ಮತ್ತು ಆನ್ಲೈನ್ ಮೂಲಕ ವಸ್ತುಗಳ ಖರೀದಿ ಹಾಗೂ ಸೇವೆ ಪಡೆಯುತ್ತಿದ್ದಾರೆ. ಗ್ರಾಹಕರಿಗೆ ತಾವು ಕೊಂಡುಕೊಳ್ಳುವ ವಸ್ತುವಿನ ಗುಣಮಟ್ಟ, ತೂಕ ಪರಿಶೀಲನೆ ಮಾಡಿ ಆಯ್ಕೆ ಮಾಡಿಕೊಳ್ಳುವ ಹಕ್ಕು ಇರುತ್ತದೆ. ಈ ವೇಳೆ ಹೆಚ್ಚಿನ ಮುಂಜಾಗ್ರತೆ ವಹಿಸುವುದು ಮುಖ್ಯವಾಗಿದೆ.

ಕಾರವಾರ: ಪ್ರತಿಯೊಬ್ಬ ವ್ಯಕ್ತಿ ಒಂದಿಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿರುತ್ತಾರೆ. ಗ್ರಾಹಕರು ತಮ್ಮ ಖರೀದಿಗೂ ಮುನ್ನ ವಸ್ತುವಿನ ತೂಕ, ಅಳತೆ, ಗುಣಮಟ್ಟ, ಅವಧಿ ಎಲ್ಲವನ್ನೂ ಪರಿಶೀಲಿಸಿ ಖರೀದಿಸಬೇಕು. ಜತೆಗೆ ಆ ವಸ್ತುವಿನ ಸೂಕ್ತ ರಶೀದಿ ಪಡೆಯುವುದು ಅತ್ಯಂತ ಮುಖ್ಯವಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಣ್ಣ ಬಿ.ಎಲ್. ಹೇಳಿದರು.

ಇಲ್ಲಿನ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇ-ಕಾಮರ್ಸ್‌ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ ಎಂಬ ಘೋಷ ವಾಕ್ಯದೊಂದಿಗೆ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೆಲವು ವರ್ಷಗಳಲ್ಲಿ ಪ್ರತಿಯೊಬ್ಬರು ಹೆಚ್ಚಾಗಿ ಇ-ಕಾಮರ್ಸ್‌ ಮತ್ತು ಆನ್‌ಲೈನ್ ಮೂಲಕ ವಸ್ತುಗಳ ಖರೀದಿ ಹಾಗೂ ಸೇವೆ ಪಡೆಯುತ್ತಿದ್ದಾರೆ. 

ಗ್ರಾಹಕರಿಗೆ ತಾವು ಕೊಂಡುಕೊಳ್ಳುವ ವಸ್ತುವಿನ ಗುಣಮಟ್ಟ, ತೂಕ ಪರಿಶೀಲನೆ ಮಾಡಿ ಆಯ್ಕೆ ಮಾಡಿಕೊಳ್ಳುವ ಹಕ್ಕು ಇರುತ್ತದೆ. ಈ ವೇಳೆ ಹೆಚ್ಚಿನ ಮುಂಜಾಗ್ರತೆ ವಹಿಸುವುದು ಮುಖ್ಯವಾಗಿದೆ. ತಾವು ಖರೀದಿಸಿದ ವಸ್ತುವಿನ ಗುಣಮಟ್ಟದಲ್ಲಿ ದೋಷ ಅಥವಾ ಸೇವೆಯಲ್ಲಿ ನ್ಯೂನತೆ ಕಂಡು ಬಂದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ರೇಣುಕಾ ರಾಯ್ಕರ ಮಾತನಾಡಿ, ಗ್ರಾಹಕರ ರಕ್ಷಣಾ ಕಾಯ್ದೆಯು 1986ರಲ್ಲಿ ಜಾರಿಗೆ ಬಂದಿತು. ತದ ನಂತರ ಕೆಲವು ಬದಲಾವಣೆಗಳೊಂದಿಗೆ ಗ್ರಾಹಕರ ರಕ್ಷಣೆಗೆ 2019ರಲ್ಲಿ ಹೊಸ ಕಾಯ್ದೆ ಜಾರಿ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ವಸ್ತುಗಳ ಖರೀದಿ ಹಾಗೂ ಸೇವೆ ಪಡೆಯುತ್ತಿದ್ದು, ಹೊಸ ಸವಲತ್ತುಗಳೊಂದಿಗೆ ಹೊಸ ಸಮಸ್ಯೆ ಉದ್ಭವಿಸಿದವು. 

ಯಾವುದೇ ವಸ್ತು ಖರೀದಿಸುವಾಗ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಆಗ ಮಾತ್ರ ಖರೀದಿಸಿದ ಉತ್ಪನ್ನಗಳಲ್ಲಿ ನ್ಯೂನತೆಗಳು ಇದ್ದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದಾವೆ ಹೂಡಬಹುದು ಎಂದು ತಿಳಿಸಿದರು.ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ಪದ್ಮಾ ತಾಂಡೆಲ್, ಕಾಮರ್ಸ್‌ ಮತ್ತು ಡಿಜಿಟಲ್ ಟ್ರೇಡ್‌ನಲ್ಲಿ ಆನ್‌ಲೈನ್ ಮುಖಾಂತರ ವಸ್ತು ಖರೀದಿಸುವಾಗ ಎಚ್ಚರ ಅವಶ್ಯ. 

ಸಾಮಾಜಿಕ ಜಾಲತಾಣಗಳ ಮೂಲಕ ಕಡಿಮೆ ಬೆಲೆಗೆ ಜಾಹೀರಾತು ನೀಡಿದಾಗ ಇದಕ್ಕೆ ಮಾರು ಹೋಗುವ ಗ್ರಾಹಕರು ವಸ್ತು ಖರೀದಿಸಿ ಮೋಸ ಹೋಗುತ್ತಾರೆ. ಖರೀದಿಸುವ ವಸ್ತುಗಳ ಗುಣಮಟ್ಟ ಪರಿಶೀಲಿಸಿ ತೆಗೆದುಕೊಳ್ಳಬೇಕು ಎಂದು ಅಬಿಪ್ರಾಯಿಸಿದರು.

ಇದೇ ವೇಳೆ ಕಾನೂನು ಮಾಪನಶಾಸ್ತ್ರ ಇಲಾಖೆ ಮತ್ತು ಆಹಾರ ಸುರಕ್ಷತೆ ಇಲಾಖೆಯಿಂದ ಏರ್ಪಡಿಸಿದ್ದ ವಸ್ತು ಪ್ರದರ್ಶನ ಉದ್ಘಾಟಿಸಲಾಯಿತು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಕೆ.ವಿ. ಸುರೇಂದ್ರಕುಮಾರ, ಸದಸ್ಯೆ ನೈನಾ ಕಾಮಟೆ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜಿ.ಎನ್. ಜಾಂಬಾವಳಿಕರ್, ಪ್ರಾಚಾರ್ಯ ಡಾ. ಕೇಶವ ಕೆ. ಜಿ., ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ, ಜಿಲ್ಲಾ ತೂಕ ಮತ್ತು ಅಳತೆ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ದೇವರಾಜ್ ಇದ್ದರು.

Share this article