ಧಾರವಾಡ: ಜೀತ ಪದ್ಧತಿ ಒಂದು ಶಾಪ. ಇದರ ವಿಮೋಚನೆಗೆ ಸರ್ಕಾರ ಹಲವಾರು ಕಾನೂನುಗಳನ್ನು ರೂಪಿಸಿದೆ. ಪ್ರತಿ ಹಂತದಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಸರಿಯಾದ ರೀತಿಯಲ್ಲಿ ಕಾನೂನಾತ್ಮಕವಾಗಿ ನಿಭಾಯಿಸುವ ಮೂಲಕ ಜೀತ ಮುಕ್ತ ಸಮಾಜವನ್ನು ಸೃಷ್ಟಿಸಲು ಕಾರ್ಯಪ್ರವೃತ್ತರಾಗಲು ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ ಹೇಳಿದರು.
ಜೀತ ಪದ್ಧತಿ ಕೇವಲ ದೇಶಕ್ಕೆ ತಟ್ಟಿದ ಶಾಪವಲ್ಲ. ಪ್ರಪಂಚದ ಎಲ್ಲ ದೇಶಗಳಲ್ಲಿ ಬೇರೆ ಬೇರೆ ಸ್ವರೂಪಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಜೀತ ಪದ್ಧತಿ ಅಸ್ತಿತ್ವದಲ್ಲಿದೆ. ಇದನ್ನು ಕಿತ್ತು ಹಾಕಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಾನೂನುಗಳನ್ನು ರಚಿಸಿ, ಜಾರಿಗೊಳಿಸಲಾಗಿದೆ. ಭಾರತದಲ್ಲಿಯೂ ಜೀತ ಪದ್ಧತಿ ಆಚರಣೆ ಅಪರಾಧವಾಗಿದೆ ಎಂದರು.
ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನಾ) ನಿಯಮಗಳು 1976ರ ಕುರಿತು ಮಾಹಿತಿ ನೀಡಿದರು. ಪ್ರಸ್ತುತ ಜೀತ ವ್ಯವಸ್ಥೆಯ ಬದಲಾದ ವಾಸ್ತವ ಚಿತ್ರಣ ಕುರಿತು ವಿವರಿಸಿದರು.ಸರ್ಕಾರಿ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಬೇರೆಯವರಿಗೆ ವರ್ಗಾಯಿಸದೇ ತಾವೇ ನಿರ್ವಹಿಸಬೇಕು. ಪ್ರತಿ ನೌಕರ ಜೀತಪದ್ಧತಿಯನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜಿಲ್ಲೆಯಲ್ಲಿ ಜೀತ ಪದ್ಧತಿ ಕಂಡು ಬಂದರೆ, ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಬೇಕು ಎಂದರು.