ಯುವಕರನ್ನು ಸನ್ಮಾರ್ಗದತ್ತ ತರಲು ಮಹಾರುದ್ರ ಹೋಮ

KannadaprabhaNewsNetwork | Published : Feb 23, 2025 12:35 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ತಾಲೂಕಿನ ತೊರವಿ ನರಸಿಂಹದೇವರ ಸನ್ನಿಧಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದಿಂದ ಗಾಯತ್ರಿ ಜಪ ಯಜ್ಞ ಹಾಗೂ ಮಹಾರುದ್ರ ಹೋಮ ನಡೆಸಲಾಯಿತು. ಹೋಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಜಪಿಸಿದ 36 ಲಕ್ಷ ಗಾಯತ್ರಿ ಮಂತ್ರವನ್ನು ಶನಿವಾರ ಭಗವಂತನಿಗೆ ಸಮರ್ಪಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ತಾಲೂಕಿನ ತೊರವಿ ನರಸಿಂಹದೇವರ ಸನ್ನಿಧಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದಿಂದ ಗಾಯತ್ರಿ ಜಪ ಯಜ್ಞ ಹಾಗೂ ಮಹಾರುದ್ರ ಹೋಮ ನಡೆಸಲಾಯಿತು. ಹೋಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಜಪಿಸಿದ 36 ಲಕ್ಷ ಗಾಯತ್ರಿ ಮಂತ್ರವನ್ನು ಶನಿವಾರ ಭಗವಂತನಿಗೆ ಸಮರ್ಪಿಸಲಾಯಿತು.

ಈ ವೇಳೆ ಮಾತನಾಡಿದ ದೇವಸ್ಥಾನ ಸಮಿತಿ ಅಧ್ಯಕ್ಷ ರಾವೇಂದ್ರ ಕುಲಕರ್ಣಿ, ಅತ್ಯಂತ ಪ್ರಭಾವಶಾಲಿ, ಪರಮ ಪವಿತ್ರ ಮತ್ತು ಚತುರ್ವೇದ ಸಾರವಾಗಿರುವ ಗಾಯತ್ರಿ ಮಂತ್ರ ನಿತ್ಯ ಪಠಣದಿಂದ ಏಕಾಗ್ರತೆ, ಸ್ಮರಣಶಕ್ತಿ ವೃದ್ಧಿ, ಆತ್ಮಸ್ಥೈರ್ಯ ಹೆಚ್ಚುತ್ತದೆ. ಜೀವನದಲ್ಲಿ ಉತ್ಸಾಹ, ದೇಹದಲ್ಲಿ ಚೈತನ್ಯ, ಮುಖದಲ್ಲಿ ತೇಜಸ್ಸು ಮೂಡುತ್ತದೆ. ಕ್ರೋಧ ನಿಯಂತ್ರಿಸಿ ಮಾನಸಿಕ ಶಾಂತಿ, ನೆಮ್ಮದಿ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ. ದಾರಿ ತಪ್ಪುತ್ತಿರುವ ಯುವ ಜನತೆಯನ್ನು ಸನ್ಮಾರ್ಗದತ್ತ ತರುವ ಪ್ರಯತ್ನವಾಗಿ ಹೋಮ ಹನವ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದರು.

ಶನಿವಾರ ಬೆಳಗ್ಗೆ 8ಕ್ಕೆ ಮಹಾರುದ್ರ ಹೋಮ ಆರಂಭವಾಗಿದ್ದು, 11ಜನ ಋತ್ವಿಜರು ಹೋಮದ ನೇತೃತ್ವ ವಹಿಸಿದ್ದರು. ಹಿರಿಯ ವಿದ್ವಾಂಸ ಪಂ.ಮಧ್ವಾಚಾರ್ಯ ಮೊಕಾಶಿ ನೇತೃವದಲ್ಲಿ ನಡೆದ ಗಾಯತ್ರಿ ಜಪ ಯಜ್ಞದಲ್ಲಿ 22 ಜನ ಋತ್ವಿಜರು ಪಾಲ್ಗೊಂಡಿದ್ದರು. ಮಹಿಳೆಯರು ಪಠಿಸಿದ 14 ಲಕ್ಷ ಕೃಷ್ಣ ಜಪ ನರಸಿಂಹ ದೇವರಿಗೆ ಸಮರ್ಪಿಸಲಾಯಿತು.

ಪಂ.ವೇದನಿಧಿ ಆಚಾರ್ಯ, ಶ್ರಿಕಾಂತಾಚಾರ್ಯ ಆಶ್ರಿತ, ಕೃಷ್ಣಾಚಾರ್ಯ ಗಲಗಲಿ, ಸುಧನ್ವ ಸಂಗಮ, ತೊರವಿ ನರಸಿಂಹ, ಉಪಾಧ್ಯಕ್ಷ ಶಶಿಕಾಂತ ಜೋಶಿ, ಕಾರ್ಯದರ್ಶಿ ಸಂತೋಷ ಕುಲಕರ್ಣಿ ಹಾಗೂ ವಿಪ್ರ ಸಮಾಜದ ಪ್ರಮುಖರಾದ ಉಲ್ಲಾಸ ಪಾಟೀಲ, ಎಸ್.ಎಂ.ದೇಸಾಯಿ, ವಿದ್ಯಾ ಕುಲಕರ್ಣಿ, ಚೈತ್ರಾ ಗೊರಟೆಕರ, ಆನಂದ ಕುಲಕರ್ಣಿ, ಪ್ರದೀಪ ಕುಲಕರ್ಣಿ, ರಮೇಶ ನಾಮಣ್ಣವರ, ಪವನ ಗಲಗಲಿ, ಸಂದೀಪ ಕುಲಕರ್ಣಿ, ಕೆ.ಬಿ.ಕುಲಕರ್ಣಿ, ರಾಜೇಂದ್ರ ಜೋಶಿ, ಸುಧೀಂದ್ರ ಜೋಶಿ, ಗೋವಿಂದ ದೇಶಪಾಂಡೆ, ಪ್ರಹ್ಲಾದ ಕುಲಕರ್ಣಿ, ವಿಜಯ ಜೋಶಿ, ಅನಂತ ಕುಲಕರ್ಣಿ, ಅಂಬಾದಾಸ ಜೋಶಿ ಹಾಗೂ ಅನೇಕ ಭಕ್ತರು ಪಾಲ್ಗೊಂಡಿದ್ದರು.

ಹೋಮದಲ್ಲಿ ಸಚಿವದ್ವರು ಭಾಗಿ:

ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ ತೊರವಿ ಕ್ಷೇತ್ರಕ್ಕೆ ಭೇಟಿ ನೀಡಿ ನರಸಿಂಹ ದೇವರ ದರ್ಶನ ಪಡೆದುಕೊಂಡರು. ಈ ವೇಳೆ ಅರ್ಚಕರು ನರಸಿಂಹ ದೇವರಿಗೆ ಆರತಿ ಬೆಳಗಿ ಸಚಿವರಿಗೆ ಆಶೀರ್ವದಿಸಿದರು. ನಂತರ ಇಬ್ಬರು ಸಚಿವರು ಹೋಮದಲ್ಲಿ ಕೆಲಕಾಲ ಭಾಗಿಯಾಗಿದ್ದರು.

ಪಾರ್ಕಿಂಗ್‌ ಸ್ಥಳ ಅಭಿವೃದ್ಧಿ ಭರವಸೆ:

ಮಂದಿರದ ಪಾರ್ಕಿಂಗ್ ಸ್ಥಳ ಅಭಿವೃದ್ಧಿ ಪಡಿಸುವಂತೆ ನರಸಿಂಹ ಸ್ವಾಮಿ ದೇವಸ್ಥಾನ ಸಮಿತಿ ಮುಖಂಡರು ಸಚಿವ ಎಂ.ಬಿ.ಪಾಟೀಲರಲ್ಲಿ ಮನವಿ ಮಾಡಿದರು. ಪಾರ್ಕಿಂಗ್ ಜಾಗದಲ್ಲಿ ಸುತ್ತುಗೋಡೆ ನಿರ್ಮಿಸಿಕೊಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಸಚಿವದ್ವಯರನ್ನು ಸಮಿತಿಯಿಂದ ಸನ್ಮಾನಿಸಲಾಯಿತು.

ಇಂದಿನ ಕಾರ್ಯಕ್ರಮ

ಫೆ 23ಕ್ಕೆ ಬೆಳಗ್ಗೆ 8ಕ್ಕೆ ಗಾಯತ್ರಿ ಜಪಯಜ್ಞ ಪೂರ್ಣಾಹುತಿ. 9ಕ್ಕೆ ಮಹಾರುದ್ರ ಹೋಮದ ಪೂರ್ಣಾಹುತಿ, 11.30ಕ್ಕೆ ಶ್ರೀಲಕ್ಷ್ಮಿ ನರಸಿಂಹ ದೇವರ ರಥೋತ್ಸವ ನಂತರ ದಾನಿಗಳಿಗೆ ಸನ್ಮಾನ ಸಮಾರಂಭ, ಮಧ್ಯಾಹ್ನ 1.30ಕ್ಕೆ ಸಾಮೂಹಿಕ ತೀರ್ಥ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Share this article