ಕುಷ್ಟಗಿ: ತಾಲೂಕಿನ ಕಂದಕೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಂದಕೂರು ಗ್ರಾಪಂದಿಂದ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಮಾತನಾಡಿ, ಫೋಕ್ಸೊ ಕಾಯ್ದೆ ಜಾರಿಗೆಯಿಂದ ಮಕ್ಕಳ ಹಕ್ಕುಗಳ ರಕ್ಷಣೆ ವಿಷಯಕ್ಕೆ ದೊಡ್ಡ ಬಲ ಬಂದಿದ್ದು, ಸಾರ್ವಜನಿಕರಲ್ಲಿ ಮತ್ತಷ್ಟು ಜಾಗೃತಿ ಬರಬೇಕಿದ್ದು, ಮಕ್ಕಳು ತಮ್ಮ ಕುಂದುಕೊರತೆ ಹೇಳಿ, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ದಬ್ಬಾಳಿಕೆ, ಕೆಟ್ಟ ಸ್ಪರ್ಶಗಳು ಮತ್ತಿತರ ಚಟುವಟಿಕೆಗಳು ನಡೆದರೆ ಮಕ್ಕಳ ಸಹಾಯವಾಣಿ ಅಥವಾ ಶಿಕ್ಷಕರು, ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.
ಮಕ್ಕಳ ಮನವಿಕಂದಕೂರು ಗ್ರಾಪಂ ವ್ಯಾಪ್ತಿಯ ಕಂದಕೂರು, ನೆರೆಬೆಂಚಿ, ಕುರುಬನಾಳ ಶಾಲೆಯ ಮಕ್ಕಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಿ, ಶೌಚಾಲ ನಿರ್ಮಿಸಿ ಕೊಡಿ, ಶಾಲೆಯ ಕಂಪೌಂಡ್ ಎತ್ತರಿಸಿ, ತಂತಿ ಬೇಲಿ ಅಳವಡಿಸಿಕೊಡಿ, ತರಗತಿ ಕೊಠಡಿ ನಿರ್ಮಿಸಿಕೊಡಿ ಸರಿಯಾದ ಸಾರಿಗೆ ವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯ ಒದಗಿಸಿಕೊಡಿ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ದುರಗಮ್ಮ ಸತ್ಯಪ್ಪ ಹಾದಿಮನಿ, ಮುಖ್ಯ ಶಿಕ್ಷಕ ಶಿವಾನಂದ, ಭೀಮನಗೌಡ, ನಾಗಪ್ಪ ವಾಲ್ಮೀಕಿ, ಸಲೀಮಸಾಬ್, ಲಕ್ಷ್ಮವ್ವ, ಕಂದಕೂರಪ್ಪ, ಭೀಮಪ್ಪ ಬಿಜಕಲ್, ಯಲ್ಲಮ್ಮ, ಶರಣಮ್ಮ, ಹನಮಂತಪ್ಪ, ಶರಣಪ್ಪ, ಆಂಜನೇಯ ಹಾದಿಮನಿ ಸೇರಿದಂತೆ ಶಾಲಾ ಶಿಕ್ಷಕರು, ಸಾರಿಗೆ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.