ಕನ್ನಡಪ್ರಭ ವಾರ್ತೆ ವಿಜಯಪುರ
ಬದಲಾಗುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ವ್ಯವಸ್ಥೆ ಪರಿಣಾಮವಾಗಿ ವಿದ್ಯಾರ್ಥಿನಿಯರು ವಿವಿಧ ಕಾರಣಗಳಿಂದ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಸಮಸ್ಯೆಗಳನ್ನು ಎದುರಿಸಲು ಮನೋಧೈರ್ಯ ಕೊರತೆಯಿಂದ ದುಡುಕು ನಿರ್ಧಾರ ತೆಗೆದುಕೊಳ್ಳುತ್ತಿರುವುದು ಚಿಂತಾಜನಕವಾಗಿದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲೇ ಮಾನಸಿಕ ಸಮಸ್ಯೆಗಳಿಗಾಗಿ ಆಪ್ತಸಮಾಲೋಚನಾ ಸೇವೆ ಒದಗಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಜಯಪುರದ ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಸಂತೋಷ ರಾಮದುರ್ಗ ಮಾತನಾಡಿ, ಮಾನಸಿಕ ಪ್ರಥಮ ಚಿಕಿತ್ಸೆ, ಒತ್ತಡ ಅಥವಾ ತುರ್ತುಸ್ಥಿತಿಯ ಸಂದರ್ಭದಲ್ಲಿರುವವರಿಗೆ ನೀಡಲಾಗುವ ತಕ್ಷಣದ ಸಹಾಯವಾಗಿದೆ. ಮಾನವ ನಿರ್ಮಿತ ವಿಪತ್ತು, ಯುದ್ಧ, ಅಪಘಾತ ಅಥವಾ ವೈಯಕ್ತಿಕ ನಷ್ಟದಿಂದ ಬಳಲುವವರಿಗೆ ಇದು ಮಾನವೀಯ ಹಾಗೂ ಪ್ರಾಯೋಗಿಕ ಬೆಂಬಲವಾಗಿದೆ. ಸುರಕ್ಷತೆ, ಶಾಂತಿ, ಭರವಸೆ ಮತ್ತು ಆತ್ಮವಿಶ್ವಾಸ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.ವಿಜಯಪುರದ ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಸೀನಿಯರ್ ರೆಸಿಡೆಂಟ್ ಡಾ.ಗೌತಮಿ ಎಸ್.ಜಿ. ಮಾತನಾಡಿ, ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯ ವ್ಯಕ್ತಿಯ ಆಲೋಚನೆ, ನಡವಳಿಕೆ ಮತ್ತು ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಸಾಮಾಜಿಕ ಸಂಪರ್ಕ, ಕುಟುಂಬ-ಸ್ನೇಹಿತರ ಬೆಂಬಲ ಮತ್ತು ಅಗತ್ಯವಿದ್ದಾಗ ವೃತ್ತಿಪರರ ಸಹಾಯ ಪಡೆಯುವುದರಿಂದ ಮಾನಸಿಕ ಒತ್ತಡ ನಿಭಾಯಿಸಬಹುದು. ಅಷ್ಟೇ ಅಲ್ಲದೇ ಆರೋಗ್ಯಕರ ಮನೋಭಾವವು ವ್ಯಕ್ತಿಯ ಉತ್ಪಾದಕತೆ ಮತ್ತು ಸಮತೋಲನಯುತ ಜೀವನಕ್ಕೆ ಅತ್ಯಂತ ಅಗತ್ಯವಾಗಿದೆ ಎಂದರು.
ಸಮಾಜ ಕಾರ್ಯ ವಿಭಾಗದ ಡಾ.ಕಲಾವತಿ ಎಚ್ ಕಾಂಬಳೆ, ಡಾ.ರಮೇಶ ಸೊನಕಾಂಬಳೆ, ಶರಣಬಸು ಕೊಡಬಾಗಿ ಮತ್ತು ಎಸ್.ಆರ್ ಪಾಟೀಲ ಸಮಾಜಕಾರ್ಯ ವಿಭಾಗದ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿವಿಧ ಸ್ನಾತಕ ವಿಭಾಗಗಳ ಉಪನ್ಯಾಸಕರು ಇದ್ದರು. ಕಾರ್ಯಗಾರದ ಸಂಯೋಜಕ ಪ್ರೊ.ಜಿ.ಬಿ ಸೋನಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಕಲಾವತಿ ಕಾಂಬಳೆ ಸ್ವಾಗತಿಸಿ, ಡಾ.ಶಿವಲಿಂಗ ಮೇತ್ರಿ ನಿರೂಪಿಸಿ, ವಂದಿಸಿದರು.