ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂದು ಫಲಾನುಭವಿಗಳಿಗೆ ಎಂಎಸ್‌ಐಎಲ್ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂದು ಫಲಾನುಭವಿಗಳಿಗೆ ಎಂಎಸ್‌ಐಎಲ್ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.ನಗರದ ಸಿಡಿಎಸ್ ಭವನದಲ್ಲಿ ಜಿಲ್ಲಾಡಳಿತ ಜಿಲ್ಲಾ ನಗರಾಭಿವೃದ್ಧಿಕೋಶ ಮತ್ತು ನಗರಸಭೆ ಸಂಯುಕ್ತಾಶ್ರಯಲ್ಲಿ ಮುಖ್ಯಮಂತ್ರಿಗಳ ನಗರೋತ್ತಾನ ಹಂತ-04ರಡಿಯಲ್ಲಿ ಫಲಾನುಭವಿಗಳಿಗೆ ಉಚಿತ ಹೊಲಿಗೆಯಂತ್ರ ಮತ್ತು ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಮುಖ್ಯಮಂತ್ರಿಗಳ ಅಮೃತ್ ನಗರೋತ್ತಾನ ಹಂತ 4 ಯೋಜನೆಯು ಅನುಷ್ಠಾನಕ್ಕೆ ಬಂದಿತು. ಅದರಂತೆ ಚಾಮರಾಜನಗರ ನಗರಸಭೆಗೂ ₹3400 ಲಕ್ಷಗಳ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದ್ದು, ಸದರಿ ಮೊತ್ತದಲ್ಲಿ ಶೇ. 24.10 ಯೋಜನೆಯಡಿ ಪರಿಶಿಷ್ಟ ಜಾತಿಗೆ ₹186 ಲಕ್ಷಗಳು, ಪರಿಶಿಷ್ಟ ಪಂಗಡಕ್ಕೆ ₹75 ಲಕ್ಷಗಳು ಇತರೆ ಹಿಂದುಳಿದ ವರ್ಗಕ್ಕೆ ₹99 ಲಕ್ಷಗಳು, ವಿಶೇಷಚೇತನರಿಗೆ ₹85 ಲಕ್ಷಗಳಿಗೆ ಅನುಮೋದನೆ ದೊರೆತಿರುತ್ತದೆ. ಅದರಂತೆ ಪ್ರಾಥಮಿಕ ಹಂತದಲ್ಲಿ ಹೊಲಿಗೆಯಂತ್ರ ಮತ್ತು ಲ್ಯಾಪ್‌ಟಾಪ್ ಖರೀದಿಸಿದ್ದು, ಪರಿಶಿಷ್ಠ ಜಾತಿಯ 100 ಫಲಾನುಭವಿಗಳಿಗೆ, ಪರಿಶಿಷ್ಟ ಪಂಗಡದ 50 ಫಲಾನುಭವಿಗಳಿಗೆ ಇತರೆ ಹಿಂದುಳಿದ ವರ್ಗದ 100 ಫಲಾನುಭವಿಗಳಿಗೆ ಹೊಲಿಗೆಯಂತ್ರ, ಪರಿಶಿಷ್ಟ ಜಾತಿಯ 21 ಫಲಾನುಭವಿಗಳಿಗೆ, ಪರಿಶಿಷ್ಟ ಪಂಗಡ 13 ಫಲಾನುಭವಿಗಳಿಗೆ, ಇತರೆ ಹಿಂದುಳಿದ ವರ್ಗದ ಫಲಾನುಭವಿಗಳಿಗೆ 25 ಲ್ಯಾಪ್‌ಟಾಪ್ ವಿತರಿಸಲಾಗಿದೆ ಎಂದರು.ನಗರಗಳ ಅಭಿವೃದ್ಧಿಗೆ ಈಗಾಗಲೇ ಒತ್ತು ನೀಡಲಾಗಿದ್ದು ಒಳಚರಂಡಿ ಕಾಮಗಾರಿ ಪೂರ್ಣಗೊಂಡ ಮೇಲೆ ರಸ್ತೆಗಳ ಅಭಿವೃದ್ಧಿ ಪಡಿಸಲಾಗುವುದು. ನಿವೇಶನ ಹಂಚಿಕೆಗೆ ಸಿದ್ಧ ಮಾಡಲಾಗಿದ್ದು, ಮೂಲಸೌಕರ್ಯ ಕಲ್ಪಿಸಿದ ಮೇಲೆ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಬೀದಿಯಲ್ಲಿ ಎಲ್ ಇಡಿ ಬಲ್ ಅಳವಡಿಸಲಾಗುವುದು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಧಿವೇಶನದಲ್ಲಿ ಅನುಮೋದನೆ ದೊರೆಯಲಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ನಗರಸಭಾ ಅಧ್ಯಕ್ಷ ಸುರೇಶ್ ಮಾತನಾಡಿ, ಸರ್ಕಾರದ ಆದೇಶದಂತೆ ಮುಖ್ಯಮಂತ್ರಿಗಳ ಅಮೃತ್ ನಗರೋತನ ಹಂತ 4 ಯೋಜನೆಯಡಿಯಲ್ಲಿ ಉಚಿತ ಹೊಲಿಗೆ ಯಂತ್ರ, ಲ್ಯಾಪ್‌ಟಾಪ್ ವಿತರಿಸಲಾಗಿದ್ದು, ಮಹಿಳೆಯರಿಗೆ ನೂರರಷ್ಟು ಹೊಲಿಗೆ ಯಂತ್ರ ವಿತರಿಸಲಾಗಿದೆ. ಮಹಿಳೆಯರು ಇದನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಚೂಡಾಧ್ಯಕ್ಷ ಮಹಮ್ಮದ್‌ಅಸ್ಕರ್, ನಗರಸಭಾ ಉಪಾಧ್ಯಕ್ಷೆ ಮಮತ ಬಾಲಸುಬ್ರಹ್ಮಣ್ಯ, ಪೌರಾಯುಕ್ತ ಎಸ್.ವಿ.ರಾಮದಾಸ್, ಸದಸ್ಯರಾದ ಚಿನ್ನಮ್ಮ, ಕುಮುದಕೇಶವಮೂರ್ತಿ, ನೀಲಮ್ಮ ಸುಧಾ, ಗಾಯಿತ್ರಿಚಂದ್ರಶೇಖರ್, ಬಸವಣ್ಣ, ಸ್ವಾಮಿ, ನಗರ ಅಭಿವೃದ್ಧಿ ಕೋಶದ ಇಇ ಅಲ್ತಾಫ್, ಜೆಇ ಪ್ರಕಾಶ್, ಕಂದಾಯ ಅಧಿಕಾರಿ ಶಕೀಲ್ ಅಹಮದ್, ಯೋಜನಾಧಿಕಾರಿ ವೆಂಕಟನಾಯಕ, ಪಳನಿ ಇತರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.