ಸ್ಥಳೀಯ ಸಂಸ್ಥೆಗಳಿಂದ ಬಾಕಿ ಅನುದಾನ ಪಡೆಯಿರಿ: ರೆಡ್‌ಕ್ರಾಸ್‌ ರಾಜ್ಯಾಧ್ಯಕ್ಷ ಸೂಚನೆ

KannadaprabhaNewsNetwork |  
Published : Apr 22, 2025, 01:46 AM IST
ಚಿತ್ರ :  20ಎಂಡಿಕೆ3 : ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಕನಾ೯ಟಕ ರಾಜ್ಯದ ಅಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಜಿಲ್ಲಾ ರೆಡ್‌ಕ್ರಾಸ್‌ನಲ್ಲಿ ಪ್ರಸ್ತುತ 775 ಸದಸ್ಯರಿದ್ದಾರೆ. ಸದಸ್ಯತ್ವ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಬಿ.ಕೆ. ರವೀಂದ್ರ ರೈ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸ್ಥಳೀಯ ಸಂಸ್ಥೆಗಳಿಂದ ರೆಡ್ ಕ್ರಾಸ್ ಗೆ ನಿಯಮ ಪ್ರಕಾರ ಸಲ್ಲಬೇಕಾದ ಅನುದಾನವನ್ನು ವಿಳಂಬರಹಿತವಾಗಿ ಪಡೆದುಕೊಂಡು ನಿಯಮಾನುಸಾರ ಜನರಿಗೆ ಪ್ರಯೋಜನಕಾರಿಯಾಗುವ ಯೋಜನೆಗಳಿಗೆ ಬಳಸಿಕೊಳ್ಳುವಂತೆ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಕರ್ನಾಟಕ ರಾಜ್ಯದ ಅಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ ಸೂಚಿಸಿದ್ದಾರೆ.ನಗರದಲ್ಲಿನ ಕೊಡಗು ರೆಡ್ ಕ್ರಾಸ್ ಭವನಕ್ಕೆ ಭೇಟಿ ನೀಡಿದ ಬಳಿಕ ರೆಡ್ ಕ್ರಾಸ್ ನಿರ್ದೇಶಕರೊಂದಿಗೆ ಸಮಾಲೋಚನೆ ನಡೆಸಿ ಜಿಲ್ಲೆಯಲ್ಲಿ ರೆಡ್ ಕ್ರಾಸ್ ಕಾಯ೯ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ರಾಜೀವ್ ಶೆಟ್ಟಿ, ಸ್ಥಳೀಯ ಸಂಸ್ಥೆಗಳಾದ ಜಿ.ಪಂ. ಗ್ರಾ..ಪಂ. ತಾ.ಪಂ. ನಗರ ಮತ್ತು ಪುರಸಭೆ, ಪ.ಪಂ.ಗಳಿಂದ ಇನ್ನು ಕೂಡ ನಿಯಮಪ್ರಕಾರ ರೆಡ್ ಕ್ರಾಸ್ ಗೆ ಪಾವತಿಸಬೇಕಾದ ವಾಷಿ೯ಕ ಅನುದಾನ ಪಾವತಿಯಾಗದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ವಿಳಂಬರಹಿತವಾಗಿ ಕಾರ್ಯಪ್ರವೃತ್ತವಾಗಿ ರೆಡ್ ಕ್ರಾಸ್ ಗೆ ಸಲ್ಲಿಸಬೇಕಾದ ಅನುದಾನವನ್ನು ನೀಡುವಂತೆಯೂ ಅವರು ಸೂಚಿಸಿದರು.

ರಾಜ್ಯದ 31 ಜಿಲ್ಲೆಗಳಲ್ಲಿಯೂ ಮುಂದಿನ ದಿನಗಳಲ್ಲಿ ಯೂತ್ ರೆಡ್ ಕ್ರಾಸ್ ನ್ನು ಪ್ರಬಲಗೊಳಿಸಲಾಗುತ್ತದೆ ಎಂದು ಹೇಳಿದ ಬಸ್ರೂರು ರಾಜೀವ್ ಶೆಟ್ಟಿ ಕೊಡಗಿನಲ್ಲಿ ರಕ್ತದಾನ ಶಿಬಿರಗಳ ಹೆಚ್ಚಳದ ಜತೆಯಲ್ಲಿಯೇ ಖಾಸಗಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ರಕ್ತನಿಧಿ ಕೇಂದ್ರವನ್ನೂ ಪ್ರಾರಂಭಿಸುವ ನಿಟ್ಟಿನಲ್ಲಿ ಚಿಂತನೆ ಹರಿಸಲಾಗುತ್ತದೆ ಎಂದು ಹೇಳಿದರು.

ರೆಡ್ ಕ್ರಾಸ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ, ಜಿಲ್ಲಾ ರೆಡ್ ಕ್ರಾಸ್ ನಲ್ಲಿ ಪ್ರಸ್ತುತ 775 ಸದಸ್ಯರಿದ್ದಾರೆ. ಸದಸ್ಯತ್ವ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರಲ್ಲದೇ, ಮಡಿಕೇರಿಯಲ್ಲಿ ಸ್ಥಾಪಿಸಲಾಗಿರುವ ರೆಡ್ ಕ್ರಾಸ್ ಭವನದ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ರಾಜ್ಯ ರೆಡ್ ಕ್ರಾಸ್ ನಿಂದ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಕೋರಿದರು.

ಕೊಡಗು ರೆಡ್ ಕ್ರಾಸ್ ಉಪಾಧ್ಯಕ್ಷ ಅನಿಲ್ ಎಚ್.ಟಿ. ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ಮುರಳೀಧರ್ ಎಚ್. ಆರ್. ವರದಿ ಮಂಡಿಸಿದರು.

ಮೂರನೇ ಅವಧಿಗೆ ಕರ್ನಾಟಕ ರೆಡ್ ಕ್ರಾಸ್ ನ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಮೆ ಹೊಂದಿರುವ ಬಸ್ರೂರು ರಾಜೀವ್ ಶೆಟ್ಟಿ ದಂಪತಿಯನ್ನು ಕೊಡಗು ರೆಡ್ ಕ್ರಾಸ್ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ರೆಡ್ ಕ್ರಾಸ್ ನಿದೇ೯ಶಕರಾದ ಅಂಬೆಕಲ್ ಜೀವನ್ ಕುಶಾಲಪ್ಪ, ಮಧುಕರ್, ಪ್ರಸಾದ್ ಗೌಡ, ಕೆ.ಡಿ.ದಯಾನಂದ್, ಡಾ.ಚೆರಿಯಮನೆ ಪ್ರಶಾಂತ್, ಸತೀಶ್ ರೈ ಸತೀಶ್ ಸೋಮಣ್ಣ, ದರ್ಶನ್ ಬೋಪಯ್ಯ, ಸಿಬ್ಬಂದಿ ಕೌಶಿ ಪೊನ್ನಮ್ಮ ಹಾಜರಿದ್ದರು.

ಕೊಡಗು ರೆಡ್ ಕ್ರಾಸ್ ಭವನವನ್ನು ವೀಕ್ಷಿಸಿದ ಬಸ್ರೂರು ರಾಜೀವ್ ಶೆಟ್ಟಿ ಮುಂಬರುವ ಮುಂಗಾರಿನಲ್ಲಿ ಪ್ರಾಕೃತ್ತಿಕ ವಿಕೋಪವೇನಾದರೂ ಸಂಭವಿಸಿದ ಸಂದರ್ಭದಲ್ಲಿ ಭವನವನ್ನು ಸುಸಜ್ಜಿತವಾಗಿರಿಸಿಕೊಳ್ಳುವಂತೆ ಸೂಚಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ