ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಮೂರು ತಿಂಗಳೊಳಗಾಗಿ ಒಪ್ಪಿಗೆ ನೀಡಿ ಪರಿಹಾರ ಪಡೆದುಕೊಳ್ಳಲು ಅವಕಾಶ ಇದೆ. ಆದರೆ, ಭೂ ಮಾಲೀಕರು ನಗದು ಪರಿಹಾರದ ಬದಲಿಗೆ ಟೌನ್‌ಶಿಪ್ ನಲ್ಲಿ ಸಹಭಾಗಿತ್ವ ಪಡೆದುಕೊಳ್ಳುವಂತೆ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಸಲಹೆ ನೀಡಿದರು.
ಬಿಡದಿ ಹೋಬಳಿಯ ಬೈರಮಂಗಲ, ಕಂಚುಗಾರನಹಳ್ಳಿ, ಕೆಂಪಯ್ಯನಪಾಳ್ಯ, ಅರಳಾಳುಸಂದ್ರ, ಹೊಸೂರು, ಬನ್ನಿಗಿರಿ, ಕೆ.ಜಿ.ಗೊಲ್ಲರಪಾಳ್ಯ, ಮಂಡಲಹಳ್ಳಿ, ವಡೇರಹಳ್ಳಿ ಗ್ರಾಮಗಳ ವ್ಯಾಪ್ತಿಯ 7431ಎಕರೆ ಭೂಮಿಯಲ್ಲಿ ಅತ್ಯಾಧುನಿಕ ಎಐ ಸಿಟಿ ನಿರ್ಮಾಣವಾಗುತ್ತಿದೆ. ಇದರಲ್ಲಿ ಸರ್ಕಾರದ ಸ್ವಾಮ್ಯದಲ್ಲಿರುವ 750 ಎಕರೆ ಹೊರತುಪಡಿಸಿ 6731 ಎಕರೆಯನ್ನು ರೈತರು ಸೇರಿದಂತೆ ಖಾಸಗಿ ವ್ಯಕ್ತಿಗಳ ಸ್ವಾಮ್ಯದಲ್ಲಿರುವ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗುತ್ತಿದೆ. ಸ್ವಾಧೀನಕ್ಕೆ ಒಪ್ಪಿಗೆ ನೀಡುವ ರೈತರು ಮತ್ತು ಭೂಮಾಲೀಕರಿಗೆ ಎಕರೆಗೆ 2ರಿಂದ 2.55 ಕೋಟಿ ರು.ವರೆಗೆ ಪರಿಹಾರದ ಮೊತ್ತ ದೊರೆಯಲಿದೆ ಎಂದು ತಿಳಿಸಿದರು.
ಬೆಂಗಳೂರು ನಗರದ ಮೇಲಿರುವ ಒತ್ತಡವನ್ನು ಕಡಿಮೆ ಮಾಡುವುದು ಟೌನ್‌ಶಿಪ್ ನಿರ್ಮಾಣದ ಉದ್ದೇಶ. ಎಲ್ಲಕ್ಕಿಂತ ಹೆಚ್ಚಾಗಿ ಇದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕನಸಿನ ಕೂಸು. ಇಲ್ಲಿವರೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳು ಟೌನ್‌ಶಿಪ್ ನಿರ್ಮಾಣಕ್ಕೆ ನಡೆಸಿದ ಪ್ರಕ್ರಿಯೆಗಳನ್ನೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿದೆ. ಈ ಯೋಜನೆಗೆ ಎಲ್ಲರ ಸಹಕಾರ ಮುಖ್ಯ ಎಂದರು.ಈ ಮೊದಲಿನಿಂದಲೂ ಬಿಡದಿ ಟೌನ್‌ಶಿಪ್ ಯೋಜನೆಗೆ ವಿರೋಧ ವ್ಯಕ್ತವಾಗಿತ್ತು. ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯ ಯೋಜನೆಗೆ ತಡೆ ನೀಡಲಿಲ್ಲ. ಆನಂತರ ಯೋಜನೆಗೆ ಗುರುತಿಸಿದ ಭೂಮಿಯನ್ನು ರೆಡ್ ಜೋನ್ ಎಂದು ಘೋಷಿಸಲಾಯಿತು. ಎಚ್.ಡಿ.ಕುಮಾರಸ್ವಾಮಿ ಎರಡನೇ ಬಾರಿಗೆ ಮುಖ್ಯಮಂತ್ರಿಗಳಾದಾಗ ಯೋಜನೆಯನ್ನು ಕೈಬಿಡಬೇಕು ಎಂದು ರೈತರು ಮನವಿ ಮಾಡಿಕೊಂಡರು. ಆಗಲೂ ಕುಮಾರಸ್ವಾಮಿಯವರು ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು ಎಂದು ತಿಳಿಸಿದರು.
ಪರಿಹಾರ ಹೆಚ್ಚಾಗದಿರಲು ರೆಡ್ ಜೋನ್ ಕಾರಣ ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ಗುರುತಿಸಲಾಗಿದ್ದ ಭೂಮಿಯಲ್ಲಿ ಇನ್ಯಾವುದೇ ಚಟುವಟಿಕೆಗೆ ಅವಕಾಶ ಇಲ್ಲದಂತೆ ರೆಡ್ ಜೋನ್ ಎಂದು ಘೋಷಿಸಿದರು. ಈ ಕಾರಣದಿಂದಾಗಿಯೇ ರೈತರು ಆಗ್ರಹಿಸುತ್ತಿರುವ ಪರಿಹಾರದ ಮೊತ್ತವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಇಲ್ಲದಿದ್ದರೆ ಎಕರೆಗೆ ಕನಿಷ್ಠ 2 ಕೋಟಿ 50 ಲಕ್ಷ ರುಪಾಯಿ ಪರಿಹಾರ ದೊರೆಯುತ್ತಿತ್ತು ಎಂದರು.2019-20ರಲ್ಲಿ ಒಂದು ಸಾವಿರ ಎಕರೆಯನ್ನು ಕೆಐಎಡಿಬಿನವರು ಸ್ವಾಧೀನ ಮಾಡಿದರು. ಈಗ ಹೋರಾಟ ಮಾಡುತ್ತಿರುವ ರೈತರು ವಿರೋಧ ಮಾಡಿದ್ದರು. ನಾನು ಸಹ ಅವರಿಗೆ ಬೆಂಬಲವಾಗಿ ನಿಂತಿದ್ದೆ. ಆಗ ಜಿಲ್ಲಾಧಿಕಾರಿಗಳಾಗಿದ್ದ ಅರ್ಚನಾ ಅವರು ದರ ನಿಗಧಿ ಸಭೆ ಮಾಡಿದಾಗಲೂ ಒಳ್ಳೆಯ ದರಕ್ಕಾಗಿ ಒತ್ತಾಯ ಮಾಡಲಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಸಹ ಒಳ್ಳೆಯ ದರ ನೀಡುವ ಭರವಸೆ ಕೊಟ್ಟಿದ್ದರು. ತದನಂತರ ಉಪಮುಖ್ಯಮಂತ್ರಿಯಾಗಿದ್ದ ಅಶ್ವತ್ಥ ನಾರಾಯಣ ಅವರು ಸಹ ಪ್ರತಿಕ್ರಿಯೆ ನೀಡಿರಲಿಲ್ಲ. ನಮ್ಮ ಹೋರಾಟಕ್ಕೆ ಅಂದು ಸ್ಪಂದನೆ ಸಿಗಲಿಲ್ಲ ಎಂದು ಹೇಳಿದರು.
ಇಂದು ಭೂಸ್ವಾಧೀನಕ್ಕೆ ಉಪಮುಖ್ಯಮಂತ್ರಿಗಳು ಎಕರೆಗೆ 1.50 ಕೋಟಿ ರು. ಪರಿಹಾರ ನೀಡುವುದಾಗಿ ಹೇಳಿದ್ದರು. ಆದರೆ, ಭೂಮಾಲೀಕರು ಈ ದರಕ್ಕೆ ಒಪ್ಪಿಗೆ ಕೊಡಲಿಲ್ಲ. ನಮ್ಮ ಸರ್ಕಾರ ರೈತರ ಭಾವನೆಗಳನ್ನು ಸ್ಪಂದಿಸಿದೆ. ಪ್ರತಿ ಎಕರೆಗೆ ಕನಿಷ್ಠ 2.07 ಕೋಟಿ ರೂ ಪರಿಹಾರ ಸಿಗುತ್ತಿದೆ ಎಂದು ತಿಳಿಸಿದರು.ಟೌನ್‌ಶಿಪ್ ನಿರ್ಮಾಣಕ್ಕೆ ಭೂಸ್ವಾಧೀನದ ವಿಚಾರದಲ್ಲಿ ಅಪಪ್ರಚಾರಗಳು ನಡೆಯುತ್ತಿವೆ. ಪರಿಹಾರ ನೀಡಲು ಸರ್ಕಾರದ ಬಳಿ ಹಣ ಇಲ್ಲ. ಯೋಜನೆ ಅನುಷ್ಠಾನಕ್ಕೆ ಹಣ ಇಲ್ಲ. ಹಳ್ಳಿಗಳಿಂದ ಗುಳೇ ಹೋಗುವಂತೆ ಮಾಡುತ್ತಾರೆ ಎಂದೆಲ್ಲ ಅಪಪ್ರಚಾರಗಳು ನಡೆಯುತ್ತಿವೆ. ಇವೆಲ್ಲ ಸುಳ್ಳು. ಪರಿಹಾರಕ್ಕೆ ಬೇಕಾಗಿರುವ ಹಣ ಸರ್ಕಾರದ ಬಳಿ ಇದೆ. ಯೋಜನೆ ಅನುಷ್ಠಾನಕ್ಕೆ ಹುಡ್ಕೋದಿಂದ ಸರ್ಕಾರದ ಗ್ಯಾರಂಟಿಯ ಮೇಲೆ ಸುಮಾರು 2 ಸಾವಿರ ಕೋಟಿ ರುಪಾಯಿ ಸಾಲ ಪ್ರಾಧಿಕಾರ ಪಡೆಯಲಿದೆ ಎಂದು ಬಾಲಕೃಷ್ಣ ಪ್ರಶ್ನೆಗೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು, ನಿರ್ದೇಶಕರಾದ ನರಸಿಂಹಯ್ಯ, ಪುಟ್ಟಯ್ಯ, ಅಬ್ಬನಕುಪ್ಪೆ ರಮೇಶ್, ಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್ , ಮುಖಂಡರಾದ ವಿಷಕಂಠಪ್ಪ, ಸಿದ್ದರಾಜು, ಹೊಸೂರು ರಾಜಣ್ಣ ಇದ್ದರು.ಬಾಕ್ಸ್.........
ಶೇ.80ರಷ್ಟು ಭೂಮಾಲೀಕ ರೈತರ ಒಪ್ಪಿಗೆ ಇದೆಬಿಡದಿ ಟೌನ್ ಶಿಪ್‌ಗೆ ಗುರುತಿಸಿರುವ ಭೂಮಿಯ ಸ್ವಾಧೀನಕ್ಕೆ ಶೇಕಡ 80ರಷ್ಟು ಭೂಮಾಲೀಕ ರೈತರ ಒಪ್ಪಿಗೆ ಇದೆ. ಇನ್ನು ಶೇಕಡ 20ರಷ್ಟು ಮಾಲೀಕರ ಅಸಮಾಧಾನ ಇದೆ. ಇವರು ತಮ್ಮ ಒಪ್ಪಿಗೆ ನೀಡದಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದು. ಶೀಘ್ರದಲ್ಲಿಯೇ ಯೋಜನೆಗೆ ವಿರೋಧ ಪಡಿಸುತ್ತಿರುವ ರೈತರ ಸಭೆ ಕರೆದು ಚರ್ಚಿಸುತ್ತೇನೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.
ಬೈರಮಂಗಲ, ಕಂಚುಗಾರನಹಳ್ಳಿ, ಕೆಂಪಯ್ಯನಪಾಳ್ಯ, ಅರಳಾಳುಸಂದ್ರ, ಹೊಸೂರು, ಬನ್ನಿಗಿರಿ, ಕೆ.ಜಿ.ಗೊಲ್ಲರಪಾಳ್ಯ, ಮಂಡಲಹಳ್ಳಿ, ವಡೇರಹಳ್ಳಿ ಗ್ರಾಮಗಳನ್ನು ಯಥಾವತ್ ಉಳಿಸಿಕೊಳ್ಳಲಾಗುತ್ತದೆ. ಟೌನ್‌ಶಿಪ್ ಅಭಿವೃದ್ದಿ ಪಡಿಸಿದಂತೆ ಈ ಗ್ರಾಮಗಳನ್ನು ಅಭಿವೃದ್ದಿ ಪಡಿಸಲಾಗುವುದು. ಹಾಲಿ ಇರುವ ದೇವಸ್ಥಾನಗಳ ಜೀರ್ಣೋದ್ದಾರ. ಶಾಲೆಗಳು, ಆಸ್ಪತ್ರೆಗಳು, ಕೌಶಲ ತರಬೇತಿ ಕೇಂದ್ರಗಳು ಹೀಗೆ ಅನೇಕ ಸವಲತ್ತುಗಳನ್ನು ಕಲ್ಪಿಸಲಾಗುವುದು. ಈ ಗ್ರಾಮಗಳ ವ್ಯಾಪ್ತಿಯಲ್ಲಿ ವಾಸಿಸುವ ನಿವೇಶನ, ಮನೆ ರಹಿತರಿಗೂ ಉಚಿತ ನಿವೇಶನ ನೀಡುವ ವ್ಯವಸ್ಥೆ ಇರಲಿದೆ. ಮೇಲಾಗಿ ಟೌನ್‌ಶಿಪ್ ನಿರ್ಮಾಣವಾದ ನಂತರ ಸ್ಥಳೀಯರಿಗೆ ಉದ್ಯೋಗ ನೀಡುವ ನಿಯಮವೂ ಜಾರಿಯಾಗಲಿದೆ ಎಂದು ಬಾಲಕೃಷ್ಣ ತಿಳಿಸಿದರು.1ಕೆಆರ್ ಎಂಎನ್ 1.ಜೆಪಿಜಿ
ರಾಮನಗರದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ಕುರಿತು ಮಾಗಡಿ ಶಾಸಕ ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು, ನಿರ್ದೇಶಕರಾದ ನರಸಿಂಹಯ್ಯ, ಪುಟ್ಟಯ್ಯ, ಅಬ್ಬನಕುಪ್ಪೆ ರಮೇಶ್ ಇತರರಿದ್ದರು.