ಸೇವಾ ಸಂಸ್ಥೆಗಳಿಗೆ ನೀಡಬೇಕಾದ ಸಿ.ಎ. ನಿವೇಶನ ಶಾಸಕರಿಗೆ ನೀಡಿರುವುದು ಸರಿಯಲ್ಲ, ಬಡ ಸಂಸ್ಥೆಗಳಿಗೆ ನೀಡಬೇಕಿತ್ತು, ಶಾಸಕ ಸ್ಥಾನಕ್ಕೆ ಕಳಂಕ ತರುವ ರೀತಿಯಲ್ಲಿ ನಿವೇಶನ ಮಂಜೂರು ಮಾಡಿಸಿಕೊಂಡಿರುವುದು ಅವರಿಗೆ ಶೋಭೆ ತರುವುದಿಲ್ಲ
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ಸೇವಾ ಸಂಸ್ಥೆಗಳಿಗೆ ನೀಡಬೇಕಾದ ಸಿ.ಎ. ನಿವೇಶನ ಶಾಸಕರಿಗೆ ನೀಡಿರುವುದು ಸರಿಯಲ್ಲ, ಬಡ ಸಂಸ್ಥೆಗಳಿಗೆ ನೀಡಬೇಕಿತ್ತು, ಶಾಸಕ ಸ್ಥಾನಕ್ಕೆ ಕಳಂಕ ತರುವ ರೀತಿಯಲ್ಲಿ ನಿವೇಶನ ಮಂಜೂರು ಮಾಡಿಸಿಕೊಂಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಕಿಡಿಕಾರಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರು ಹಣ ಇರುವ ಜಮೀನು ಖರೀದಿಸಬೇಕಿದ್ದು, ವಿದ್ಯಾ ಸಂಸ್ಥೆಗಳನ್ನು ಕಟ್ಟಿ, ನಾಗರಿಕರ ಸೌಲಭ್ಯಕ್ಕಾಗಿ ಇರುವ ಸಿ.ಎ. ನಿವೇಶನ ಪಡೆಯಲು ಶಾಸಕರು ಮುಂದಾಗಿರುವುದು ಸರಿಯಲ್ಲ ಎಂದು ಟೀಕಿಸಿದರು.
ಮೂರು ಸಿ.ಎನಿವೇಶನ ಪಡೆಯಲು ಶಾಸಕರು ಮುಂದಾಗಿದ್ದಾರೆ. ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ನಿವೇಶನ ಮಂಜೂರು ಮಾಡಲಾಗಿದೆ. ಅರ್ಜಿ ಸಲ್ಲಿಸಿದ 15 ದಿನದೊಳಗೆ ನಿವೇಶನ ಮಂಜೂರು ಮಾಡಿದ್ದಾರೆ. ಇವರಿಗಿಂತ ಮೊದಲು ಅರ್ಜಿ ಸಲ್ಲಿಸಿದವರಿಗೆ ಯಾಕೆ ನಿವೇಶನ ನೀಡಿಲ್ಲ, ಬಡವರು ಸಿಎ ನಿವೇಶನ ಪಡೆಯಬಾರದೇ, ಕ್ಷೇತ್ರದ ಜನರು ಇದಕ್ಕೇನಾ ನಿಮಗೆ ಮತ ಹಾಕಿರುವುದು, ಪ್ರಾಧಿಕಾರದ ಸಮಿತಿಯ ಗಮನಕ್ಕೂ ಬಾರದೆ ನಿವೇಶನ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದರು.
ಒಂದೂ ಕೆಲಸ ಮಾಡಿಲ್ಲ:
ದಸಂಸ ಮುಖಂಡ ಬಾಲಕುಂಟಹಳ್ಳಿ ಗಂಗಾಧರ್ ಮಾತನಾಡಿ, ಶಾಸಕರು ಕ್ಷೇತ್ರದಲ್ಲಿ ಒಂದಾದರೂ ಒಳ್ಳೆಯ ಕೆಲಸವನ್ನು ಮಾಡಿಲ್ಲ, ಮಾಡಿದ್ದರೆ ಕಾಣುತ್ತಿತ್ತಲ್ಲವೇ, ಅವರ ನಿವಾಸದ ಮುಂದೆ ಪ್ರತಿಭಟನೆ ಮಾಡೋಣ ಎಂದರೆ ಅವರ ಮನೆ ಎಲ್ಲಿದೆ ಎಂಬುದೇ ಗೊತ್ತಿಲ್ಲ, ಕ್ಷೇತ್ರದಲ್ಲಿ ಪರಿಶಿಷ್ಟರ ಕಾಲೋನಿಗಳಲ್ಲಿ ರಸ್ತೆ, ಚರಂಡಿ ಇಲ್ಲ, ಅದರ ಕಡೆ ಗಮನ ಹರಿಸಿಲ್ಲ, ಬಡವರಿಗೆ ನಿವೇಶನ ನೀಡಿಲ್ಲ, ಆತನು ಮಾಡಿರುವ ಹಗರಣ ಮುಚ್ಚಿಡಲು ಮತ್ತೊಬ್ಬರ ಮೇಲೆ ಆರೋಪ ಮಾಡುವುದನ್ನು ಶಾಸಕರು ರೂಢಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಏನು ಮಾಡಿದ್ದೀರಿ ಅದನ್ನು ಹೇಳಿ ಎಂದು ಪ್ರಶ್ನಿಸಿದರು.
ನೀವು ಬದುಕಲು ಶಾಸಕರಾಗಿಲ್ಲ, ಬಡವರಿಗೆ ಅನುಕೂಲ ಮಾಡುವ ಕೆಲಸ ಮಾಡಿ, ಅಧಿಕಾರ ದುರುಯೋಗ ಮಾಡುವುದು ಒಳ್ಳೆಯದಲ್ಲ, ಈಗಲೂ ಅವಕಾಶವಿದೆ, ನಿವೇಶನ ಕೈಬಿಡಿ, ಮಾತೆತ್ತಿದ್ದರೆ ಒಬಿಸಿ ಹುಡುಗ ಅಂತಾನೆ, ಒಬಿಸಿ ಸಮುದಾಯಗಳಿಗೆ ಏನು ಮಾಡಿದ್ದಾರೆ, ಅನಾಥ ಹುಡುಗ ಅಂತಾನೆ, ಕೋಟ್ಯಂತರ ರು. ಆಸ್ತಿ ಇದ್ದು ಅನಾಥ ಹೇಗಾಗಲು ಸಾಧ್ಯ, ಅನಾಥ ಎಂದು ನೂರಾರು ಕೋಟಿ ಹೇಗೆ ಮಾಡಿದೆ, ಭಿಕ್ಷೆ ಬೇಡೋರು ಅನಾಥರು, ಶಾಸಕರು ಯಾವ ಅನಾಥ, ಶಾಸಕ ಅಂದರೆ ಏನು ಅನ್ನೋದು ತಿಳಿದು ಮಾತನಾಡಿ, ಕುಮಾರಸ್ವಾಮಿ ಬಗ್ಗೆ ಮಾತನಾಡುವ ಅಗತ್ಯ ಏನಿದೆ, ಚಿಕ್ಕಬಳ್ಳಾಪುರದ ಬಗ್ಗೆ ಮಾತನಾಡಿ, ಸರ್ಕಾರದ ಯೋಜನೆಗಳನ್ನು ತಂದು ಜನರಿಗೆ ನೀಡಿ, ಕುಂಠಿತಗೊಂಡಿರುವ ಕಾಮಗಾರಿ ಪೂರ್ಣಗೊಳಿಸಿ, ಹಾಸ್ಟೆಲ್‌ನಲ್ಲಿ ಮಕ್ಕಳ ಊಟದಲ್ಲಿ ಹುಳ ಇದೆ ಎಂಬ ಆರೋಪ ಕೇಳಿಬಂದಿದೆ. ಈ ಶಾಸಕರಿಗೆ ಹಾಸ್ಟೆಲ್ ಎಲ್ಲಿದೆ ಎಂಬುದೇ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅರುಣ್‌ಕುಮಾರ್, ಶ್ರೀನಾಥ್ ಮತ್ತಿರರರು ಇದ್ದರು.
ಬಾಕ್ಸ್....ಚಾಲಕನಿಲ್ಲದ ಅಮ್ಮ ಆಂಬ್ಯುಲೆನ್ಸ್!ಆಶ್ರಯ ಸಮಿತಿ ಸಭೆ ಮಾಡಿಲ್ಲ, ಕೆಡಿಪಿ ಸಭೆಗೆ ಬರಲ್ಲ, ಅಂಬೇಡ್ಕರ್ ಜಯಂತಿಗೆ ಬರಲ್ಲ, ಯಾವ ಕಾರಣಕ್ಕೆ ನೀವು ಶಾಸಕರಾಗಿದ್ದೀರಿ, ಅಮ್ಮ ಆಂಬ್ಯುಲೆನ್ಸ್‌ಗೆ ಚಾಲಕನಿಲ್ಲ, ಡೀಸೆಲ್ ಇದೆಯೋ ಇಲ್ಲವೋ ಗೊತ್ತಿಲ್ಲ, ಸರ್ಕಾರಿ ಆಂಬ್ಯುಲೆನ್ಸ್ ಗಳು ಮೂಲೆಗೆ ಬಿದ್ದಿವೆ. ಯಾವುದೋ ಮಗುವನ್ನು ತೋರಿಸಿ, ಅಮ್ಮ ಆಂಬ್ಯುಲೆನ್ಸ್ ನಿಂದ ಬದುಕಿದ್ದಾರೆ ಅಂತ ಪ್ರಚಾರ ಪಡೆಯೋದಲ್ಲ, ನೀವು ಮಾಡುವ ಸೇವೆ ಬಗ್ಗೆ ಹೇಳೋದು ಬೇಡ, ಅಭಿವೃದ್ಧಿಯ ಬಗ್ಗೆ ಹೇಳಿ ಎಂದು ಸವಾಲು ಹಾಕಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.