ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಹೂರವಲಯದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅವರು,
ಜಗತ್ತಿನಲ್ಲಿ ಸಮಾಜ, ರಾಷ್ಟ್ರ ಅಥವಾ ವಿಶ್ವ ಎಂಬುದು ಸ್ವತಂತ್ರವಾಗಿ ಅಸ್ತಿತ್ವದಲ್ಲಿಲ್ಲ. ನೀವೊಬ್ಬರು, ನಾನೊಬ್ಬರು ಸೇರಿದರೆ ಮಾತ್ರ ಇಲ್ಲಿ ಸಮಾಜ ನಿರ್ಮಾಣವಾಗುತ್ತದೆ. ವ್ಯಕ್ತಿಗತವಾಗಿ ನಮ್ಮಲ್ಲಿ ಪ್ರೀತಿ, ಕರುಣೆ ಹಾಗೂ ಅರಿವು ಮೂಡಿದಾಗ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.ಯುವಕರೆಂದರೆ ವಯಸ್ಸಿನ ಮಿತಿಯಲ್ಲ, ನಮ್ಮಲ್ಲಿ ಜೀವಂತಿಕೆ ಇರುವವರೆಗೂ ನಾವೆಲ್ಲರೂ ಯುವಕರೇ ಆಗಿರುತ್ತೇವೆ. ಮಾನವ ಕೇವಲ ಪ್ರಾಣಿಜನ್ಯ ಪ್ರವೃತ್ತಿಗಳಿಂದ ಬದುಕುವ ಜೀವಿ ಅಲ್ಲ. ಆತ ತಾನು ಹೇಗೆ ಬಾಳಬೇಕು ಎಂಬುದನ್ನು ಅರಿತಿರುವ ಅಸ್ತಿತ್ವದ ಸ್ವರೂಪ. ಪ್ರಾಣಿಗಳು ಕೇವಲ ಪ್ರಚೋದನೆಗಳಿಗೆ ಪ್ರತಿಕ್ರಿಯಿಸುತ್ತ ಪ್ರಕೃತಿಯ ಸಹಜ ಪ್ರವೃತ್ತಿಯಂತೆ ಬದುಕುತ್ತವೆ. ಆದರೆ ಮಾನವನಿಗೆ ಜೀವನದಲ್ಲಿ ಎದುರಾಗುವ ಯಾವುದೇ ಸನ್ನಿವೇಶದಲ್ಲೂ ತಾನು ಹೇಗೆ ಇರಬೇಕು ಎಂದು ನಿರ್ಧರಿಸುವ ಅದ್ಭುತ ಸಾಮರ್ಥ್ಯವಿದೆ.
ಭೂಮಿಯ ಮೇಲಿರುವ ಎಲ್ಲಾ ಯಂತ್ರೋಪಕರಣ ಹಾಗೂ ತಂತ್ರಜ್ಞಾನಗಳಿಗಿಂತ ಮನುಷ್ಯನ ದೇಹ ಮತ್ತು ಮನಸ್ಸಿನ ತಂತ್ರಜ್ಞಾನವೇ ಅತ್ಯಂತ ಶ್ರೇಷ್ಠ ಹಾಗೂ ಅತ್ಯುನ್ನತವಾದುದಾಗಿದೆ. ಆದರೆ ಇದರ ಸರಿಯಾದ ಬಳಕೆಯ ವಿಧಾನ ತಿಳಿಯದೆ ನಾವಿಂದು ಬದುಕಿನುದ್ದಕ್ಕೂ ಹೆಣಗಾಡುತ್ತಿದ್ದೇವೆ. ಪ್ರಾಣಿಗಳಾಗಿದ್ದರೆ ತಮಗೆ ಇಷ್ಟಬಂದ ಹಾಗೆ ತಿಂದು, ತಮಗೆ ಬೇಕಾದ ಕಡೆ ಮಲಗಿ, ಸಂತಾನೋತ್ಪತ್ತಿ ನಡೆಸಿ ಕೊನೆಗೆ ಮರಣ ಹೊಂದುತ್ತಿದ್ದವು. ಅದರಲ್ಲಿ ಯಾವುದೇ ಗೊಂದಲಗಳಿರುವುದಿಲ್ಲ. ಆದರೆ, ಮನುಷ್ಯನಿಗೆ ಅಷ್ಟೇ ಸಾಲುವುದಿಲ್ಲ. ಪ್ರಾಣಿಗಳಂತೆ ದಿನನಿತ್ಯದ ಕ್ರಿಯೆಗಳನ್ನು ನಡೆಸಿದರೂ ಬದುಕಿನಲ್ಲಿ ಏನೋ ಒಂದು ಅಪೂರ್ಣತೆಯ ಭಾವ ಕಾಡುತ್ತಲೇ ಇರುತ್ತದೆ. ತಿನ್ನುವುದು, ಮಲಗುವುದು, ಸಂತಾನೋತ್ಪತ್ತಿ ಮಾಡುವುದು ನಮ್ಮ ದೈಹಿಕ ಮತ್ತು ಮಾನಸಿಕ ಅಸ್ತಿತ್ವದ ಪ್ರಕ್ರಿಯೆಗಳಷ್ಟೇ ಹೊರತು ಇಡೀ ಜೀವ ಬದುಕುವ ಸಂಪೂರ್ಣ ಮಾರ್ಗವಲ್ಲ ಎಂದು ಸದ್ಗುರು ಅಭಿಪ್ರಾಯಪಟ್ಟರು.
ಚಿತ್ರದುರ್ಗ ಜಿಲ್ಲೆಯು ಕರ್ನಾಟಕದ ಕೇಂದ್ರ ಭಾಗದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿ ಹಾದು ಹೋಗುತ್ತವೆ. ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿ ಸನ್ನಿಧಿ ನಿರ್ಮಾಣವಾಗಿರುವ ಮಾದರಿಯಲ್ಲೇ ಚಿತ್ರದುರ್ಗ ದಲ್ಲೂ ಭವ್ಯ ಆಧ್ಯಾತ್ಮಿಕ ಕೇಂದ್ರವೊಂದು ನಿರ್ಮಾಣವಾಗಬೇಕು ಎಂದು ಸ್ಥಳೀಯ ಭಕ್ತರು ಹಾಗೂ ಪೀಠದ ಅನುಯಾಯಿಗಳು ಸದ್ಗುರುಗಳಲ್ಲಿ ಆಶಯ ವ್ಯಕ್ತಪಡಿಸಿದರು.
ಮುರುಘಾ ಮಠದ ಡಾ ಬಸವಕುಮಾರ ಸ್ವಾಮೀಜಿ, ಅಥಣಿ ಶಿವಯೋಗಾಶ್ರಮದ ಶಿವಬಸವ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಕಬೀರಾನಂದ ಮಠದ ಶಿವಲಿಂಗಾನಂದ ಶ್ರೀಗಳು ಉಪಸ್ಥಿತರಿದ್ದರು.