ಮತದಾರರ ದಿನಾಚರಣೆಯ ಸಿದ್ಧತೆ ಮಾಡಿಕೊಳ್ಳಿ

KannadaprabhaNewsNetwork |  
Published : Jan 24, 2025, 12:47 AM IST
ಜ. 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ | Kannada Prabha

ಸಾರಾಂಶ

ಭಾರತ ಚುನಾವಣಾ ಆಯೋಗವು ಚುನಾವಣೆ ಕುರಿತು ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಧ್ಯೇಯವಾಕ್ಯವನ್ನು ಜ.25 ರಂದು ತಮ್ಮ ತಮ್ಮ ಕಚೇರಿಯ ಪತ್ರ ವ್ಯವಹಾರಗಳಲ್ಲಿ ಬಳಕೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಭಾರತ ಚುನಾವಣಾ ಆಯೋಗವು ಚುನಾವಣೆ ಕುರಿತು ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಧ್ಯೇಯವಾಕ್ಯವನ್ನು ಜ.25 ರಂದು ತಮ್ಮ ತಮ್ಮ ಕಚೇರಿಯ ಪತ್ರ ವ್ಯವಹಾರಗಳಲ್ಲಿ ಬಳಕೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜ.25 ರಂದು ನಡೆಯುವ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಹಾಗೂ ಅಧೀನ ಕಚೇರಿಗಳಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಮತದಾರರ ಪ್ರತಿಜ್ಞಾ ವಿಧಿ ಬೋಧನೆ ಬೋಧಿಸುವುದರ ಜತೆಗೆ ಛಾಯಾಚಿತ್ರ ತೆಗೆದು ಪ್ರಚಾರ ಪಡಿಸಬೇಕು. ಸಾಮಾಜಿಕ ಸೇವಾ ಸಂಸ್ಥೆಗಳು, ಯುವ ಸ್ವಯಂ ಸೇವಾ ಸಂಸ್ಥೆಗಳು, ಎನ್‌ಎಸ್‌ಎಸ್‌, ಎನ್‌ಸಿಸಿ ಸ್ಕೌಟ್‌ ಆ್ಯಂಡ್‌ ಗೈಡ್ಸ್, ನೆಹರು ಯುವಕ ಕೇಂದ್ರ ಸೇರಿದಂತೆ ರಾಷ್ಟ್ರೀಯ ಮತದಾರರ ದಿನಾಚರಣೆ 2025ರ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಬೇಕು, ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ಜಾಥಾ ಕಾರ್ಯಕ್ರಮ ಏರ್ಪಡಿಸಬೇಕು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಚುನಾವಣೆಯ ಮತದಾನ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು, ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ವಿತರಿಸುವುದು, ಅಂಚೆ ಮತಪತ್ರ, ಮತದಾರರಿಗೆ ಮತ್ತು ಮತಗಟ್ಟೆಗಳಲ್ಲಿ ಒದಗಿಸಿರುವ ಮೂಲಭೂತ ಸೌಲಭ್ಯಗಳು, ಇವಿಎಂ, ವಿವಿ ಪ್ಯಾಟ್, ಓಟರ್ ಹೆಲ್ಪಲೈನ್, ನೈತಿಕ ಮತದಾನ ಇತ್ಯಾದಿಗಳ ಕುರಿತು ಜಾಗೃತಿ ಚಿತ್ರಗಳನ್ನು ಪ್ರದರ್ಶಿಸುವುದು. ಇದರ ಜತೆಗೆ ಸ್ವೀಪ್ ಕಾರ್ಯಕ್ರಮಗಳು ಕೂಡ ಒಂದು ಭಾಗವಾಗಿವೆ ಎಂದರು.ಜ.30 ರಂದು ಹುತಾತ್ಮ ದಿನಾಚರಣೆ:

ಭಾರತ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಪ್ರಾಣತೆತ್ತು ಹುತಾತ್ಮರಾದ ಮಹನೀಯರ ಸ್ಮರಣಾರ್ಥ ಜ.30 ರಂದು ಜಿಲ್ಲಾಡಳಿತ ವತಿಯಿಂದ ಬೆಳಗ್ಗೆ 11.02ಕ್ಕೆ ನಗರದ ಹುತಾತ್ಮ ವೃತ್ತದಲ್ಲಿ (ಮೀನಾಕ್ಷೀ ಚೌಕ್‌) ಆಚರಿಸಲು ನಿರ್ಧರಿಸಲಾಯಿತು. ವೇದಿಕೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರದಂತೆ ಆಹ್ವಾನ ನೀಡುವುದು, ಭಾರತದ ಸ್ವಾತಂತ್ರಕ್ಕಾಗಿ ಹೋರಾಟಗಾರರ ಪಾತ್ರವನ್ನು ತಿಳಿಸುವಂತಹ ಭಾಷಣ, ಚರ್ಚೆಗಳನ್ನು ಏರ್ಪಡಿಸುವುದು. ಪ್ರಾರ್ಥನೆ ಸರ್ವಧರ್ಮ ಭಜನೆ ಕಾರ್ಯಕ್ರಮ ಆಯೋಜಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆ ಮುಖಂಡರು ಉಪಸ್ಥಿತರಿದ್ದರು.

PREV