ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಭಾಷಾ ಕಲಾವಿದರನ್ನು ಕರೆಸಿ ಅವರಿಗೆ ಕೈತುಂಬ ಗೌರವಧನ ಕೊಡುವ ನಾವು ನಮ್ಮ ಕಲಾವಿದರಿಗೆ ತಾರತಮ್ಯ ಮಾಡದೆ ಅವರಿಗೂ ಸರಿ ಸಮನಾದ ಗೌರವಧನ ನೀಡಬೇಕು ಎಂದು ನಟ ಡಾ.ಶಿವರಾಜ್‌ ಕುಮಾರ್‌ ಹೇಳಿದರು.

ಶನಿವಾರ ನಗರದಲ್ಲಿ ಎಸ್.ಪಿ.ವರದರಾಜು ಆತ್ಮೀಯರ ಬಳಗ ಆಯೋಜಿಸಿದ್ದ ‘20ನೇ ವರ್ಷದ ಎಸ್.ಪಿ.ವರದರಾಜು ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೇರೆ ಭಾಷೆಯ ನಟರು ಬಂದಾಗ ನಾವು ಭಾರೀ ಗೌರವಧನ ಕೊಡುತ್ತೇವೆ. ಆದರೆ ನಮ್ಮ ನಟರಿಗೆ ಕಡಿಮೆ ಕೊಡುತ್ತೇವೆ. ಸೆಟ್‌ನಲ್ಲಿ ಊಟದ ವಿಚಾರದಲ್ಲೂ ಹೀಗೆಯೇ ಆಗುತ್ತದೆ. ಒಬ್ಬರಿಗೊಂದು ಇನ್ನೊಬ್ಬರಿಗೆ ಇನ್ನೊಂದು ಯಾಕೆ? ನಮ್ಮ ಕಲಾವಿದರಿಗೂ ಪರಭಾಷಾ ಕಲಾವಿದರಷ್ಟೇ ಗೌರವಧನ ಸಿಗಬೇಕು. ಸಿನಿಮಾದಲ್ಲಿ ಇಂದು ಗುಂಪುಗಳು ಹುಟ್ಟಿಕೊಂಡಿವೆ. ಹಾಗಾಗಬಾರದು, ಎಲ್ಲಾ ಕಲಾವಿದರಿಗೆ ಅವಕಾಶಗಳನ್ನು ಕೊಟ್ಟು ಜೀವನ ನಡೆಸಿಕೊಂಡು ಹೋಗುವಂತೆ ಮಾಡಬೇಕಿದೆ ಎಂದು ಹೇಳಿದರು.

ವರದರಾಜ ಅವರು ಡಾ.ರಾಜಕುಮಾರ್ ಮಾತ್ರವಲ್ಲದೆ ವಿಷ್ಣುವರ್ಧನ್ ಅಭಿನಯದ ‘ಭೂತಯ್ಯನ ಮಗ ಅಯ್ಯು’ ಸಿನಿಮಾ ಸೇರಿ ಹಲವರ ಸಿನಿಮಾಕ್ಕೆ ಶ್ರಮಿಸಿದವರು. ಅವರೆಲ್ಲರೂ ನಮ್ಮ ಜೊತೆ ಇದ್ದಾರೆ. ಪುನೀತ್ ಬೆಳೆಯಲು ಕೂಡ ಅವರ ಕೊಡುಗೆ ದೊಡ್ಡದಿದೆ ಎಂದರು.


ರಾಘವೇಂದ್ರ ರಾಜಕುಮಾರ್ ಮಾತನಾಡಿ, ವರದರಾಜು ಅವರು ನಮ್ಮ ತಂದೆ ಸೇರಿ ಮೂರು ತಲೆಮಾರಿಗೆ ಕತೆಗಳನ್ನು ಆಯ್ಕೆ ಮಾಡಿ ಸಿನಿಮಾ ಮಾಡಿಸಿದವರು. ಕಾಲಕ್ಕೆ ತಕ್ಕಂತೆ ತಮ್ಮ ಯೋಚನೆಯನ್ನೂ ಮೇಲ್ದರ್ಜೆಗೇರಿಸಿಕೊಳ್ಳುತ್ತ ಸಿನಿಮಾ ರಂಗ ಮುನ್ನಡೆಸಿದರು. ಹೀಗಾಗಿ ಅವರ ಕೊಡುಗೆ ಸಿನಿಮಾ ರಂಗಕ್ಕೆ ದೊಡ್ಡದು ಎಂದು ಹೇಳಿದರು.

ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಭಾವಪ್ರಧಾನ ವ್ಯಕ್ತಿತ್ವ ಡಾ.ರಾಜಕುಮಾರ್ ಅವರದಾದರೆ ವರದರಾಜ ಅವರದು ಬುದ್ಧಿ ಪ್ರದಾನ ಹಾಗೂ ಪಾರ್ವತಮ್ಮ ಅವರದು ಆರ್ಥಿಕ ನೆಲೆಯದ್ದು. ಈ ಮೂವರು ಸಿನಿಮಾ ರಂಗಕ್ಕೆ ತಮ್ಮ ನೆಲೆಗಟ್ಟಿನಲ್ಲಿ ಕೊಡುಗೆ ನೀಡಿದ್ದಾರೆ. ರಾಜಕುಮಾರ್‌ ಯುಗದಲ್ಲಿ ಬಂದ ಯಾವ ಹೀರೋಗಳ ಸಿನಿಮಾಗಳೂ ನೈತಿಕಹೀನ ನೆರಳಿನಲ್ಲಿ ಇರಲಿಲ್ಲ. ಇದಕ್ಕೆ ಕಾರಣವಾಗಿದ್ದು ರಾಜಕುಮಾರ್ ಅವರ ವ್ಯಕ್ತಿತ್ವ ಹಾಗೂ ವರದರಾಜ ಅವರ ವಿವೇಕ ಎಂದು ಹೇಳಿದರು.

ಹಿರಿಯ ನಟಿ ಅಂಬಿಕಾ ಮಾತನಾಡಿ, ಡಾ.ರಾಜಕುಮಾರ್ ಕುಟುಂಬ ನನ್ನ ಹೃದಯಕ್ಕೆ ಹತ್ತಿರವಾದುದು. ಭಾಷೆ ಕಲಿಯುವಾಗ ಗೌರವ ಪೂರ್ವಕವಾಗಿ ಸ್ವೀಕರಿಸಬೇಕು. ಮರ್ಯಾದೆಯಿಂದ ಕೂಡಿರಬೇಕು ಎಂದಿದ್ದು ಇಂದಿಗೂ ನೆನಪು ಎಂದು ಹೇಳಿದರು.

ಹಿರಿಯ ನಟ ನೀರ್ನಳ್ಳಿ ರಾಮಕೃಷ್ಣ, ಹಿರಿಯ ನಟಿ ಗೀತಾ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ಉಪಾಧ್ಯಕ್ಷ ಸುಂದರ್‌ರಾಜ್, ದತ್ತಣ್ಣ, ರಾಜೇಂದ್ರ ಸಿಂಗ್‌ ಬಾಬು ಹಾಗೂ ಡಾ. ರಾಜ್‌ಕುಮಾರ್‌ ಕುಟುಂಬಸ್ಥರು ಸೇರಿ ಇತರರಿದ್ದರು.

ಪ್ರಶಸ್ತಿ ಪ್ರದಾನ

ಕಾರ್ಯಕ್ರಮದಲ್ಲಿ ರಂಗಭೂಮಿ ಹಿರಿಯ ನಟಿ ಪುಷ್ಪಮಾಲಾ ಎ.ಅಣ್ಣಿಗೇರಿ ಹಾಗೂ ಕನ್ನಡ ಚಲನಚಿತ್ರ ನಿರ್ದೇಶಕ ಬಿ.ಗುರುರಾಜು ಅವರಿಗೆ 20ನೇ ವರ್ಷದ ‘ಎಸ್.ಪಿ.ವರದರಾಜು ಪ್ರಶಸ್ತಿ’ ಪ್ರದಾನ ಮಾಡಲಾಯಿತು.