ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ಮಧುಗಿರಿ ರಸ್ತೆಯಲ್ಲಿ ರಾ.ಹೆ. ಕಾಮಗಾರಿಯು ಆಮೆಗತಿಯಲ್ಲಿ ನಡೆಯುತ್ತಿದ್ದು, ಸಾರ್ವಜನಿಕರಿಗೆ ಅನೇಕ ರೀತಿಯಲ್ಲಿ ತೊಂದರೆಗಳು ಉಂಟಾಗುತ್ತಿದೆ. ವ್ಯವಸ್ಥಿತವಾಗಿ ಕಾಮಗಾರಿಯನ್ನು ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುಕೊಡುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ರಸ್ತೆಯಲ್ಲಿರುವ ಬಿಜಿಎಸ್ ವಿದ್ಯಾಸಂಸ್ಥೆಗೆ ಕನಿಷ್ಠ 3,000 ವಿದ್ಯಾರ್ಥಿಗಳು ಸೈಕಲ್, ಸ್ಕೂಟರ್, ಆಟೋ ಮತ್ತು ಮಿನಿವ್ಯಾನ್‌ಗಳ ಮೂಲಕ ಸಂಚರಿಸುತ್ತಾರೆ. ಮುಂದೆ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳಿಗೆ ಈ ರಸ್ತೆಯು ಸಂಪರ್ಕ ಕಲ್ಪಿಸುತ್ತದೆ. ಅಂತಹದರಲ್ಲಿ ಸಾರ್ವಜನಿಕರು ಓಡಾಡಲು ಒಂದು ಪರ್ಯಾಯ ರಸ್ತೆಯನ್ನು ನಿರ್ಮಿಸ ಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದೆ ಇಲ್ಲಿ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಂಚರಿಸಲು ಪರ್ಯಾಯ ರಸ್ತೆಯನ್ನು ನಿರ್ಮಸಿ ನಂತರ ನಿಮ್ಮ ಕೆಲಸವನ್ನು ಪ್ರಾರಂಭಿಸಿ ಎಂದು ಬಿಜಿಪಿ ಮುಖಂಡ ಮೃತ್ಯುಂಜಯ ತಿಳಿಸಿದರು.ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣಹೋಮ:ತಾಲೂಕಿನ ಅಭಿವೃದ್ದಿ ಗೆಸರಿನಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 80ಕ್ಕೂ ಹೆಚ್ಚು ವರ್ಷಗಳಿಂದ ಬೆಳೆದುನಿಂತಿದ್ದ ಮರಗಳ ಮಾರಣ ಹೋಮವೇ ನಡೆಯಿತು. ಅಭಿವೃದ್ಧಿ ಜೊತೆಗೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು.ರಸ್ತೆಯ ತುಂಬ ಧೂಳು:
ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಂದಾಗಿ ವಾಹನ ಸವಾರರು ಮತ್ತು ಸ್ಥಳೀಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಿರಿದಾದ ರಸ್ತೆ, ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯಿಂದ ಅಪಘಾತಗಳಿಗೆ ಕಾರಣವಾಗಿವೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನೆಪದಲ್ಲಿ ರಸ್ತೆ ಎಲ್ಲಾ ಧೂಳುಮಯವಾಗಿ ಮಾರ್ಪಟ್ಟಿದೆ. ಈ ರಸ್ತೆಯಲ್ಲಿನ ನಾಗರಿಕರು ನರಕಯಾತನೆ ಅನುಭವಿಸುವಂತಾಗಿದೆ ಎಂದು ಬಿಜಿಪಿ ಮುಖಂಡ ಮೃತ್ಯುಂಜಯ ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ಆಮೆ ನಡೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದವರು ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗುತ್ತಿದೆ. ಒಂದು ವಾರದಲ್ಲಿ ಚರಂಡಿಯ ಕಾಮಗಾರಿಯನ್ನು ಮುಗಿಸುವುದಾಗಿ ತಿಳಿಸಿ ಒಂದು ತಿಂಗಳಾದರೂ ಚರಂಡಿಯ ಕಾಮಗಾರಿಯು ಮುಗಿದಿಲ್ಲ. ಆದಕಾರಣ ನಮ್ಮ ಹೋಟೆಲ್ ಗೆ ವ್ಯಾಪಾರವೇ ಇಲ್ಲದಂತಾಗಿದೆ ಎಂದು ಹೊಟೇಲ್ ನ ಮಾಲಿಕರಾದ ಪದ್ಮಮ್ಮನವರು ಅಳಲನ್ನು ಹಂಚಿಕೊಂಡರು.