ಸೋಮರಡ್ಡಿ ಅಳವಂಡಿ
ಕೊಪ್ಪಳ: ನಗರದ ಸುತ್ತಮುತ್ತ ಇರುವ ಕಾರ್ಖಾನೆಗಳ ಹಾರು ಬೂದಿ, ಧೂಳು, ಪರಿಸರ ಮಾಲಿನ್ಯ, ಕಾರ್ಖಾನೆ ತ್ಯಾಜ್ಯದಿಂದಾಗಿ ಕೊಪ್ಪಳ ನಗರದಲ್ಲಿ ಜನಜೀವನ ಅಸಹನೀಯವಾಗಿರುವಾಗಲೇ ನಗರದ ಕೂಗಳತೆ ದೂರದಲ್ಲೇ ಮತ್ತೊಂದು ಬೃಹತ್ ಆರ್.ಎಸ್. ಸ್ಟೀಲ್ ಕಾರ್ಖಾನೆ ಸ್ಥಾಪನೆಯಾಗುತ್ತಿದೆ. ಈಗಿರುವ ಎಲ್ಲ ಕಾರ್ಖಾನೆಗಳ ಸಾಮರ್ಥ್ಯವನ್ನು ಮೀರಿಸುವ ಕಾರ್ಖಾನೆ ಇದಾಗಿದೆ.ಸುಮಾರು 1.2 ಮಿಲಿಯನ್ ಟನ್ ಸಾಮರ್ಥ್ಯದ ಬೃಹತ್ ಸ್ಟೀಲ್ ಕಾರ್ಖಾನೆ ಆರಂಭವಾಗಲಿದೆ. ಇದು ಮುಂದಿನ ದಿನಗಳಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಪ್ರಸ್ತಾಪವನ್ನೂ ಹೊಂದಿದೆ. ಐದಾರು ಮಿಲಿಯನ್ ಟನ್ ಸಾಮರ್ಥ್ಯ ಹೊಂದಬಹುದು. ಈಗ ಇರುವ ಯಾವ ಕಾರ್ಖಾನೆಯೂ ಒಂದು ಮಿಲಿಯನ್ ಟನ್ ಸಾಮರ್ಥ್ಯ ಹೊಂದಿಲ್ಲ ಎನ್ನುವುದು ಗಮನಾರ್ಹ ಸಂಗತಿ. ಬಳ್ಳಾರಿಯಲ್ಲಿರುವ ಜಿಂದಾಲ್ 15 ಮಿಲಿಯನ್ ಟನ್ ಸಾಮರ್ಥ್ಯದ್ದು.ಜಿಲ್ಲಾ ಕೇಂದ್ರ ಅಲ್ಲ, ಡಿಸಿ ಕಚೇರಿಯಿಂದ ಕೂಗಳತೆಯ ದೂರದಲ್ಲಿರುವ ಸುಮಾರು 1200 ಎಕರೆ ಪ್ರದೇಶದಲ್ಲಿ ಈ ಬೃಹತ್ ಕಾರ್ಖಾನೆ ತಲೆ ಎತ್ತಲಿದೆ.ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡೇ ಈಗಾಗಲೇ ತನ್ನ ಕಾರ್ಖಾನೆ ಆರಂಭಿಸಿದೆ. ಇದೇ ಕಂಪನಿ ಸ್ವಾಧೀನ ಮಾಡಿಕೊಂಡಿರುವ ಭೂಮಿಯಲ್ಲಿ ಈಗ ಬೃಹತ್ ಕಾರ್ಖಾನೆ ತಲೆ ಎತ್ತಲಿದೆ. ಬೇರೆ ಹೆಸರಿನಲ್ಲಿ ಸ್ಚೀಲ್ ಪ್ಲಾಂಟ್ ಹಾಕಲು ಬೇಕಾಗಿರುವ ಎಲ್ಲ ತಯಾರಿ ಮತ್ತು ಅನುಮತಿಯೂ ದೊರೆತಿದೆ. ಘಟಕ ಸ್ಥಾಪನೆ ಮಾತ್ರ ಬಾಕಿ ಇದೆ. ಈಗಾಗಲೇ 1200 ಎಕರೆ ಪ್ರದೇಶಕ್ಕೂ ಕಾಂಕ್ರಿಟ್ ಕಂಪೌಂಡ್ ನಿರ್ಮಾಣ ಮಾಡಲಾಗಿದೆ.ವಿವಾದ ಇತ್ಯರ್ಥ: ಭೂಸ್ವಾಧೀನ ವಿವಾದ ಸುಪ್ರೀಂ ಕೋರ್ಟಿನಲ್ಲಿ ಕಳೆದ ವರ್ಷವಷ್ಟೇ ಇತ್ಯರ್ಥವಾಗಿದೆ. ಹೀಗಾಗಿ, 2008ರಲ್ಲಿಯೇ ರೂಪಿತಗೊಂಡ ಯೋಜನೆ ಈಗ ಕಾರ್ಯಾರಂಭವಾಗಲಿದೆ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಅನುಮತಿಯೂ ಲಭ್ಯವಾಗಿದ್ದು, ಜಿಲ್ಲಾಡಳಿತವೂ ಅಸ್ತು ಎಂದಿದೆ ಎನ್ನಲಾಗುತ್ತಿದೆ.ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಹೊಂದಿಕೊಂಡಿರುವ ಈ ಭೂಮಿಯಲ್ಲಿ ಬೃಹತ್ ಸ್ಟೀಲ್ ಕಾರ್ಖಾನೆ ತಲೆ ಎತ್ತಿದ್ದೇ ನಿಜವಾದರೆ ಕೊಪ್ಪಳದಲ್ಲಿ ವಾಸಿಸುವವರನ್ನು ದೇವರು ಬಂದರೂ ಕಾಪಾಡಲು ಸಾಧ್ಯವಿಲ್ಲ. ಊರನ್ನು ತೊರೆಯುವುದೊಂದೇ ಬಾಕಿ ಎಂದು ಹೇಳಲಾಗುತ್ತಿದೆ.ಇಂಥದ್ದೊಂದು ಬೃಹತ್ ಸ್ಟೀಲ್ ಕಾರ್ಖಾನೆ ಆರಂಭಿಸುವ ಮೊದಲು ಸಾರ್ವಜನಿಕ ಅಹವಾಲು ಆಲಿಸಬೇಕಿತ್ತು. ಆದರೆ, ಇದು ಯಾವಾಗ ನಡೆಯಿತು? ಯಾರು ಅನುಮತಿ ನೀಡಿದರು? ಡಿಸಿ ಕಚೇರಿಗೆ ಹೊಂದಿಕೊಂಡಿರುವ ಭೂಮಿಯಲ್ಲಿ ಕಾರ್ಖಾನೆಗೆ ಅನುಮತಿ ನೀಡಿದ ಸರ್ಕಾರ ಯಾವುದು? ಡಿಸಿ ಯಾರು? ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.ಮನೆಗಳು ಖಾಲಿಯಾಗುತ್ತಿವೆ:ಈಗಾಗಲೇ ಡಿಸಿ ಕಚೇರಿಗೆ ಹೋಗುವ ರಸ್ತೆಯಲ್ಲಿರುವ ಅನೇಕ ಮನೆಗಳು ಖಾಲಿಯಾಗಿವೆ. ಯಾರೂ ಬಾಡಿಗೆಗೆ ಬರುತ್ತಿಲ್ಲ. ಅಷ್ಟೊಂದು ಧೂಳು ಬರುತ್ತಿದೆ. ಹೊಸಪೇಟೆ ರಸ್ತೆಯಿಂದ ಹಿಡಿದು ಗವಿಶ್ರೀ ನಗರದವರೆಗೂ, ಸಂಸದ ಸಂಗಣ್ಣ ಕರಡಿ ನಿವಾಸಕ್ಕೂ ವಿಪರೀತ ಧೂಳು ಬರುತ್ತಿದೆ ಎಂದು ಖುದ್ದು ಅವರೇ ಅಳಲು ತೋಡಿಕೊಂಡಿದ್ದಾರೆ. ಇನ್ನು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಸಹ ತಮ್ಮ ಮನೆಯಲ್ಲೂ ವಿಪರೀತ ಧೂಳು ಬರುತ್ತಿದೆ. ನಮಗೆ ಸಾಕಾಗಿ ಹೋಗಿದೆ ಎನ್ನುತ್ತಾರೆ.ಗಮನಿಸುತ್ತಾರಾ ಸಿಎಂ?ಕನಕಗಿರಿ ಉತ್ಸವಕ್ಕೆ ಚಾಲನೆ ನೀಡಲು ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರೇ ಇತ್ತ ಸ್ವಲ್ಪ ನೋಡಿ. ಲಕ್ಷ ಲಕ್ಷ ಜನರು ವಾಸಿಸುವ ನಗರ ಮತ್ತು ಹಳ್ಳಿಗಳನ್ನು ತೊರೆಯುವಂತೆ ಮಾಡುವ ಕಾರ್ಖಾನೆ ಪ್ರಾರಂಭವಾಗುವುದು ಬೇಕಾ? ನೀವಾದರೂ ಇದನ್ನು ತಡೆಯುವ ಪ್ರಯತ್ನ ಮಾಡಿ ಎನ್ನುವುದು ಪ್ರಜ್ಞಾವಂತ ನಾಗರಿಕರ ಆಗ್ರಹ.ಅಯ್ಯೋ ದೇವರೆ, ಕೊಪ್ಪಳ ಕತೆ ಮುಗಿದೇ ಹೋಯಿತು. ಈಗಿರುವ ಕಾರ್ಖಾನೆಯಿಂದ ಬರುತ್ತಿರುವ ಕಾರ್ಖಾನೆ ಧೂಳಿನಿಂದ ಬದುಕಲು ಆಗುತ್ತಿಲ್ಲ. ಮತ್ತೊಂದು ಬೃಹತ್ ಸ್ಟೀಲ್ ಕಾರ್ಖಾನೆ ಬಂದರೆ ನಾವು ಊರು ತೊರೆಯಬೇಕಾಗುತ್ತದೆ. ಸುತ್ತಮುತ್ತಲಿನ ಗ್ರಾಮಗಳ ಜನರ ಬದುಕು ದಹನೀಯವಾಗಿದೆ ಎನ್ನುತ್ತಾರೆ ವಿಪ ಸದಸ್ಯೆ ಹೇಮಲತಾ ನಾಯಕ.