ಭಯ ಹೋಗಲಾಡಿಸಿ ಮಾನಸಿಕವಾಗಿ ಸದೃಢರಾಗಿ

KannadaprabhaNewsNetwork | Published : Sep 16, 2024 1:47 AM

ಸಾರಾಂಶ

ಸಮಾಜದ ಎಲ್ಲ ವಿಭಾಗಗಲ್ಲಿ ಆತ್ಮಹತ್ಯೆ ಘಟನೆಗಳು ನಡೆಯುತ್ತಿವೆ.

ಬಳ್ಳಾರಿ: ದೇಶ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದ್ದು, ಖಿನ್ನತೆಗೊಳಗಾದ ವಿದ್ಯಾರ್ಥಿಗಳು ತಮ್ಮೊಳಗಿನ ಭಯ ಹೋಗಲಾಡಿಸಿ, ಮಾನಸಿಕವಾಗಿ ಸದೃಢರಾಗಿ ಉತ್ತಮ ಜೀವನ ನಡೆಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್. ಹೊಸಮನೆ ಹೇಳಿದರು.

ನಗರದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಆತ್ಮಹತ್ಯೆ ಬಗ್ಗೆ ಇರುವ ಅಭಿಪ್ರಾಯ ಬದಲಿಸಿ ಎಂಬ ಘೋಷ ವಾಕ್ಯದಡಿ ಮಂಗಳವಾರ ಏರ್ಪಡಿಸಲಾಗಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಜೀವನದ ಬಗ್ಗೆ ಜಿಗುಪ್ಸೆ, ಕೌಟುಂಬಿಕ ಕಲಹ, ವೈಯಕ್ತಿಕ ಸಮಸ್ಯೆ, ಬಡತನ, ಆರ್ಥಿಕ ಸಮಸ್ಯೆ ಸೇರಿದಂತೆ ಇನ್ನಿತರ ಕ್ಷುಲ್ಲಕ ಕಾರಣಗಳಿಂದ ಮನನೊಂದು ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡು ತಮ್ಮ ಅಮೂಲ್ಯ ಜೀವನ ಮೃತ್ಯುಪಾಶಕ್ಕೆ ತಳ್ಳದೆ ಎಲ್ಲ ರೀತಿಯ ಮಾನಸಿಕ ಖಿನ್ನತೆಗಳನ್ನು ಧೈರ್ಯದಿಂದ ಎದುರಿಸಿ ಜೀವನ ನಡೆಸಬೇಕು ಎಂದರು.

ಸಮಾಜದ ಎಲ್ಲ ವಿಭಾಗಗಲ್ಲಿ ಆತ್ಮಹತ್ಯೆ ಘಟನೆಗಳು ನಡೆಯುತ್ತಿವೆ. ಅದರಲ್ಲಿ ಹೆಚ್ಚಾಗಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಮಗಿರುವ ಒತ್ತಡವನ್ನು ನಿಗ್ರಹಿಸಿಕೊಳ್ಳಲು ಹತ್ತಿರದ ಮನೋವೈದ್ಯರೊಡನೆ ಸಮಾಲೋಚನೆ ಮಾಡಿ ಆತ್ಮಹತ್ಯೆಯಿಂದ ದೂರ ಉಳಿಯಬೇಕು. ಮಕ್ಕಳು ಪರೀಕ್ಷೆ-ಫಲಿತಾಂಶಗಳ ಕುರಿತು ಆತಂಕಕ್ಕೆ ಒಳಗಾಗಿ ಆತ್ಮಹತ್ಯೆಗೆ ಪ್ರಚೋದನೆಗೆಗೊಳಗಾಗದೇ ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಬೇಕು. ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹಾಗೂ ಕುಟುಂಬದಲ್ಲಿ ಯಾರಾದರೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆ ಅವರಿಗೆ ಮಾನಸಿಕ ಆರೋಗ್ಯ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ದೇಶದಲ್ಲಿ ಪ್ರತಿ 4 ಸೆಕೆಂಡ್‌ಗೆ ಒಬ್ಬರಂತೆ 1.80 ಲಕ್ಷ ಜನರು ವಾರ್ಷಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವರದಿಯಿದೆ. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರ ಜೊತೆ ಸಮಾಲೋಚನೆ ನಡೆಸಿ ಕಳೆದ ನಾಲ್ಕು ವರ್ಷಗಳಿಂದ 547 ಜನರ ಮನಃಪರಿವರ್ತನೆ ಮಾಡಿ ಆತ್ಮಹತ್ಯೆಯಿಂದ ದೂರಗೊಳಿಸಿರುವುದು ಸಂತಸದ ವಿಷಯವಾಗಿದೆ ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನರೋಗ ತಜ್ಞ ಡಾ. ರೋಹನ್ ವನಗುಂದಿ ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಹಾಗೂ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಕೆ.ಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.

ಕೌಲ್‌ಬಜಾರ್ ಪೊಲೀಸ್ ಠಾಣೆಯ ಪಿಐ ಟಿ.ಸುಭಾಷ್ ಚಂದ್ರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಹೆಚ್. ದಾಸಪ್ಪನವರ, ಭಾರತೀಯ ವೈದ್ಯ ಸಂಘದ ಅಧ್ಯಕ್ಷ ಶ್ರೀನಿವಾಸುಲು, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಅರವಿಂದ ಪಾಟೀಲ್, ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ನ ಅಧ್ಯಕ್ಷ ಪಲ್ಲೇದ ಪ್ರಭುಲಿಂಗ, ಪ್ರಾಂಶುಪಾಲ ಶ್ರೀಶೈಲ ಗೌಡ ಬಾಣಾಪುರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾರಾಗೃಹ ಇಲಾಖೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಕೀಲರ ಸಂಘ, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜ್ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಇವರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Share this article