ಸಂವಿಧಾನ ಪೀಠಿಕೆಯನ್ನು ಓದಿಸಿ ಕಾರ್ಯಕ್ರಮ ಯಶಸ್ವಿ

KannadaprabhaNewsNetwork | Published : Sep 16, 2024 1:47 AM

ಸಾರಾಂಶ

ಬೇಲೂರು ಪಟ್ಟಣದ ನೆಹರೂ ನಗರದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ನೆಹರೂ ವೃತ್ತದ ಬಳಿ ಬೃಹತ್ ಮಾನವ ಸರಪಳಿ ನಿರ್ಮಿಸಿ ನಾಡಗೀತೆ ಹಾಡಿ, ಸಂವಿಧಾನ ಪೀಠಿಕೆಯನ್ನು ಓದಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಇದೊಂದು ವಿಶೇಷವಾದ ದಿನ. ನಾಡಿಗೆ ಕೆಆರ್‌ಎಸ್ ಡ್ಯಾಮ್ ಕಟ್ಟುವುದರ ಮೂಲಕ ನಾಡಿಗೆ ನೀರುಣಿಸಿದ ಸರ್ ಎಂ ವಿಶ್ವೇಶ್ವರಯ್ಯ ದಿನಾಚರಣೆಯೂ ಕೂಡ ಆಗಿದ್ದು, ಎಲ್ಲರನ್ನೂ ಗೌರವಿಸುವ ಕೆಲಸ ಈ ರಾಜ್ಯ ಸರ್ಕಾರ ಮಾಡುತ್ತಾ ಇದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಸಂಘಟನೆಗಳು, ಅಧಿಕಾರಿಗಳ ವರ್ಗ, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಪ್ರಗತಿಪರರೆಲ್ಲಾ ಸೇರಿ ಈ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ ಎಂದು ಶಾಸಕ ಎಚ್ ಕೆ ಸುರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ನೆಹರೂ ನಗರದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ನೆಹರೂ ವೃತ್ತದ ಬಳಿ ಬೃಹತ್ ಮಾನವ ಸರಪಳಿ ನಿರ್ಮಿಸಿ ನಾಡಗೀತೆ ಹಾಡಿ, ಸಂವಿಧಾನ ಪೀಠಿಕೆಯನ್ನು ಓದಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ನಂತರ ಮಾತನಾಡಿದ ಶಾಸಕ ಎಚ್ ಕೆ ಸುರೇಶ್, ನಾಡಿನಾದ್ಯಂತ ಸಂವಿಧಾನ ದಿನಾಚರಣೆಯನ್ನು ಆಚರಿಸುವ ಮೂಲಕ ಸಂವಿಧಾನವನ್ನು ಓದುವ ಮೂಲಕ ತಾಲೂಕು ಕಲ್ಕೆರೆ ಗಡಿಯಿಂದ ಮಾಗಡಿ ಗಡಿಯವರೆಗೂ ಸಂಪೂರ್ಣವಾಗಿ ಮಾನವ ಸರಪಳಿ ಮಾಡುವ ಇತಿಹಾಸ ನಿರ್ಮಿಸಲಾಗಿದೆ. ಇದೊಂದು ವಿಶೇಷವಾದ ದಿನ. ನಾಡಿಗೆ ಕೆಆರ್‌ಎಸ್ ಡ್ಯಾಮ್ ಕಟ್ಟುವುದರ ಮೂಲಕ ನಾಡಿಗೆ ನೀರುಣಿಸಿದ ಸರ್ ಎಂ ವಿಶ್ವೇಶ್ವರಯ್ಯ ದಿನಾಚರಣೆಯೂ ಕೂಡ ಆಗಿದ್ದು, ಎಲ್ಲರನ್ನೂ ಗೌರವಿಸುವ ಕೆಲಸ ಈ ರಾಜ್ಯ ಸರ್ಕಾರ ಮಾಡುತ್ತಾ ಇದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಸಂಘಟನೆಗಳು, ಅಧಿಕಾರಿಗಳ ವರ್ಗ, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಪ್ರಗತಿಪರರೆಲ್ಲಾ ಸೇರಿ ಈ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ ಎಂದು ತಿಳಿಸಿದರು.

ತಹಸೀಲ್ದಾರ್‌ ಎಂ ಮಮತಾ ಮಾತನಾಡಿ, ಸರ್ಕಾರದ ಆದೇಶದಂತೆ ತಾಲೂಕಿನಾದ್ಯಂತ ಎಲ್ಲರೂ ಸೇರಿ ಒಟ್ಟಾಗಿ ಸೇರಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಪ್ರಜಾಪ್ರಭುತ್ವದ ಮಹತ್ವವನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಕೇವಲ ಒಂದು ದಿನ ಆಚರಣೆ ಮಾಡಿದರೆ ಸಾಲದು ಪ್ರತಿ ದಿನ ಆಚರಿಸಬೇಕು. ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸುವಂತಹ ಕೆಲಸ ಆಗಬೇಕು. ತಾಲೂಕಿನಲ್ಲಿ ಒಟ್ಟು ೩೫ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ೨೫ ಸಾವಿರ ವಿದ್ಯಾರ್ಥಿಗಳು ಸಾರ್ವಜನಿಕರು ಸಂಘಸಂಸ್ಥೆಗಳು, ಮಹಿಳೆ, ನಾಗರಿಕರು, ಸಂಘಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಎ.ಆರ್‌ ಅಶೋಕ್ ಮಾತನಾಡಿ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಆಚರಿಸಲು ರಾಜ್ಯ ಸರ್ಕಾರದ ಆದೇಶದಂತೆ ಒಟ್ಟು ೨೫೦೦ ಕಿ.ಮೀ. ಮಾನವ ಸರಪಳಿ ನಿರ್ಮಿಸಿ ಕಾರ್ಯಕ್ರಮ ಮಾಡಿ ಪ್ರತೀ ರಾಜ್ಯದಲ್ಲೂ ಸಹ ಈ ದಿನಾಚರಣೆ ನೆರವೇರುತ್ತಿದೆ. ಮಾನವ ಸರಪಳಿ ನಿರ್ಮಿಸಿ ಆ ತಾಲೂಕಿನಲ್ಲಿ ಎಲ್ಲಾ ಅಧಿಕಾರಿಗಳೊಂದಿಗೆ ಶಾಲಾ ಮಕ್ಕಳೊಂದಿಗೆ ಸೇರಿ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದೆ. ಪುರಸಭೆ ವತಿಯಿಂದ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಸ್ವಚ್ಛತೆ ಕೂಡ ನಮ್ಮ ಪುರಸಭೆ ವತಿಯಿಂದ ಮಾಡಲಾಗುವುದು ಎಂದರು.

ಈ ವೇಳೆ ಡೊಳ್ಳು ಕುಣಿತಕ್ಕೆ ಶಾಸಕ ಎಚ್ ಕೆ ಸುರೇಶ್ ಹೆಜ್ಜೆ ಹಾಕಿ ಎಲ್ಲರೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್, ಸದಸ್ಯರಾದ ಜಮಾಲ್, ಪ್ರಭಾಕರ್, ಅಕ್ರಂ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಮೇಶ್, ಕರವೇ ಅಧ್ಯಕ್ಷ ಚಂದ್ರಶೇಖರ್, ರೋಟರಿ ಕ್ಲಬ್ ಅಧ್ಯಕ್ಷ ಶಂಭುಗೌಡ, ಕಾರ್ಯದರ್ಶಿ ಬಿ.ಬಿ. ಶಿವರಾಜ್, ಶಿವಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.

Share this article