ವಿಶೇಷ ವರದಿ ಗದಗ
ಗದಗ ನಗರಸಭೆಯ ಉಪಾಧ್ಯಕ್ಷೆ ಸುನಂದಾ ಬಾಕಳೆ ಮಗ ಕಾರ್ತಿಕನಿಗೆ ಹುಬ್ಬಳ್ಳಿ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು. ಇದಕ್ಕಾಗಿಯೇ ಏ.17 ರಂದು ಕೊಪ್ಪಳ ಹಾಗೂ ಬೇರೆ ಊರುಗಳಿಂದ ಗದಗಕ್ಕೆ ಸಂಬಂಧಿಕರು ಆಗಮಿಸಿದ್ದರು. ಹಲವಾರು ವಿಷಯಗಳನ್ನು ಚರ್ಚಿಸಿ ಅವರೆಲ್ಲ ತೆರಳಿದ್ದರು. ಇದೇ ವಿಷಯವಾಗಿ ಆ ಕುಟುಂಬದಲ್ಲಿ ಸಂತಸ ಮನೆ ಮಾಡಿತ್ತು. ಸಾಕಷ್ಟು ಸಿದ್ಧತೆಗಳು ಭರದಿಂದ ನಡೆಯುತ್ತಿದ್ದವು, ರಾತ್ರಿ ಖುಷಿಯಿಂದ ಮಲಗಿದವರೆಲ್ಲ ಬೆಳಗ್ಗೆ ಉರಿಸಿರಲ್ಲದಂತಾಗಿದ್ದು ಮಾತ್ರ ಘನ ಘೋರವಾಗಿತ್ತು.
ಜೀವ ಉಳಿಯುತಿತ್ತಾ ?: ಸದ್ಯ ಕೊಲೆಯಾಗಿರುವ ಕೊಪ್ಪಳ ಮೂಲದವರು ಕೂಡಾ ಗುರುವಾರ ಸಂಜೆಯೇ ಕೊಪ್ಪಳಕ್ಕೆ ತೆರಳಬೇಕಾಗಿತ್ತು, ಆದರೆ ರೈಲು ಸರಿಯಾಗಿ ಸಮಯಕ್ಕೆ ಸಿಗದೇ ಇರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಹೋಗುವ ನಿರ್ಧಾರ ಮಾಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮನೆಯಲ್ಲಿ ಹಾಯಾಗಿ ಮಲಗಿದವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದು, ಅವರು ಗುರುವಾರವೇ ಊರಿಗೆ ತೆರಳಿದ್ದರೆ ಆ ಮೂರು ಜೀವಗಳು ಉಳಿಯುತ್ತಿದ್ದಾವಾ ಎನ್ನುವ ಚರ್ಚೆಗಳು ಘಟನೆ ಸ್ಥಳದ ಸುತ್ತಲಿಂದ ಕೇಳಿ ಬರುತ್ತಿವೆ.ಮಗನ ನಿಶ್ಚಿತಾರ್ಥದ ಕನಸು ಕಂಡಿದ್ದ ತಾಯಿ ಸುನಂದಾ ಬಾಕಳೆ ಬೆಳಗಾಗುವುದರಲ್ಲಿ ಮಗನೂ ಇಲ್ಲ, ಅವನೊಟ್ಟಿಗೆ ಸಂಬಂಧಿಕರೂ ಇಲ್ಲ, ಎಲ್ಲರೂ ದುಷ್ಟರ ಕೈಗೆ ಸಿಕ್ಕು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಸಹಿಸಲಾಗದೇ ಅತ್ತು, ಅತ್ತು ಕಣ್ಣೀರೇ ಬತ್ತಿ ಹೋಗಿದ್ದವು, ಯಾರೇ ಎಷ್ಟೇ ಸಂತೈಸಿದರೂ ಹೆತ್ತ ತಾಯಿಯ ಆ ನೋವು, ವಯಸ್ಸಿಗೆ ಬಂದ ಮಗನನ್ನು ಹೀಗೆ ಕಳೆದುಕೊಂಡಿದ್ದನ್ನು ಸ್ಮರಿಸಿಕೊಂಡು ಅಳುತ್ತಿದ್ದ ದೃಶ್ಯ ಅಲ್ಲಿದ್ದವರ ಕರುಳನ್ನು ಹಿಂಡುವಂತಾಯಿತು.