ಚಳವಳಿಗಳಲ್ಲಿ‌‌ ತೊಡಗಿಸಿಕೊಳ್ಳುವುದು‌ ತಪ್ಪಲ್ಲ; ವಕೀಲ ವೀರೇಂದ್ರ

KannadaprabhaNewsNetwork |  
Published : Nov 18, 2024, 12:03 AM IST

ಸಾರಾಂಶ

ನಮ್ಮ ವಿದ್ಯಾರ್ಥಿಗಳು ಪ್ರತೀ ಹಂತಗಳಲ್ಲೂ ಯಶಸ್ಸು ಕಾಣಬೇಕು. ಇದಕ್ಕೆ ಬದ್ಧತೆ, ಕಠಿಣ ಪರಿಶ್ರಮ ಹಾಗೂ ಉತ್ಸಾಹ ಅಗತ್ಯವಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಸಾಮಾಜಿಕ ವಾಸ್ತವ ಹಾಗೂ ಅರಿವು ಪಡೆಯಲು ವಿದ್ಯಾರ್ಥಿಗಳು ರೈತ, ಸಮತಾವಾದಿ ಚಳವಳಿಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಇದರಿಂದ ಸೋಷಿಯೋ ಎಕನಾಮಿಕ್ ಅರ್ಥವಾಗುವುದರೊಂದಿಗೆ ವಕೀಲ ವೃತ್ತಿಗೂ ಅನುಕೂಲ‌ವಾಗುತ್ತದೆ ಎಂದು ‍ವಕೀಲ ವೀರೇಂದ್ರ ಪಿ.ಎಂ ತಿಳಿಸಿದರು.

ನಗರದ ಶೆಟ್ಟಿಹಳ್ಳಿ ರಸ್ತೆಯ ಸುಫಿಯ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 2024-25ನೇ ಶೈಕ್ಷಣಿಕ ಸಾಲಿನ ಕ್ರೀಡೆ, ಎನ್‌ ಎಸ್‌ ಎಸ್, ಕಾನೂನು ಸೇವೆಗಳ ಕೇಂದ್ರ, ಯುವ ರೆಡ್ ಕ್ರಾಸ್, ಸಾಂಸ್ಕೃತಿಕ ಹಾಗೂ ಇತರೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಕಾನೂನು ಶಿಕ್ಷಣ: ಅವಕಾಶಗಳು ಮತ್ತು ಸವಾಲುಗಳು ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಕಾರ್ಪೊರೇಟ್ ಕ್ಷೇತ್ರ ದಿನದಿಂದ ದಿನಕ್ಕೆ ವಿಸ್ತರಿಸಿಕೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ತಯಾರಿ ಅಗತ್ಯವಾಗಿದೆ. ವ್ಯವಹಾರಿಕ ಜಗತ್ತಿಗೆ ಹೊಂದಿಕೊಳ್ಳಲು ಸಿನಿಮಾ, ವಾಣಿಜ್ಯ ವಿಷಯಾಂಶಗಳನ್ನೂ ಬಿಡದೆ ಅಧ್ಯಯನ ಮಾಡಬೇಕು. ಭಾಷಾ ಕೌಶಲ್ಯ, ಬರವಣಿಗೆ, ಸಂವಹನ ಕಲೆ ವಕೀಲ ವೃತ್ತಿಯಲ್ಲಿ ಕೈ ಹಿಡಿಯುತ್ತದೆ. ಇಂಗ್ಲೀಷ್ ಜೊತೆಗೆ ಮಾತೃ ಭಾಷೆ ಕನ್ನಡದಲ್ಲಿ ಸುಸ್ಪಷ್ಟವಾಗಿ ವ್ಯವಹರಿಸಲು ಅಭ್ಯಾಸ ಮಾಡಿ ಹಾಗೂ ಮಾತುಗಳಲ್ಲಿ ಲಯ ಇರಲಿ. ಹೀಗೆ ಮಾತನಾಡುವ ಕಲೆಯನ್ನು‌ ಕಲಿಯಲು ಜಾರ್ಜ್ ಫರ್ನಾಂಡೀಸ್, ವಾಜಪೇಯಿಯಂತಹ ರಾಜಕಾರಣಿಗಳ ಭಾಷಣಗಳನ್ನು ಕೇಳಲು‌ ಸಲಹೆ ನೀಡಿದರು.

ಸಿನೆಮಾ ಕೇವಲ‌ ಮನರಂಜನೆ ಮಾತ್ರವಲ್ಲ. ವಕೀಲರಿಗೆ‌ ಆದಾಯ ತಂದು ಕೊಡುವ ಕ್ಷೇತ್ರವೂ ಹೌದು. ಕೃತಿಚೌರ‍್ಯ, ರಾಜದ್ರೋಹ, ಧರ್ಮನಿಂದನೆಯಂತಹ ಅಂಶಗಳು ಇದರಲ್ಲಿವೆ. ಇಲ್ಲಿ ಕಕ್ಷಿದಾರರೂ ಸಿಗುತ್ತಾರೆ. ಕಾನೂನು ಕ್ಷೇತ್ರಕ್ಕೆ ಯಾವುದೇ ಮಿತಿ‌ಇಲ್ಲ.‌ ಆದ್ದರಿಂದ ಅಧ್ಯಯನದಲ್ಲಿ ಉದಾಸೀನತೆ ಬೇಡ ಎಂದು‌ ಕಿವಿ ಮಾತು ಹೇಳಿದರು.

ವಿದ್ಯಾರ್ಥಿಗಳು ಹಿಂಜರಿಕೆ ಹಾಗೂ ಭಯ ಮುಕ್ತರಾಗಬೇಕು. ಮುಖ್ಯವಾಗಿ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ತಮ್ಮಲ್ಲಿರುವ ದೌರ್ಬಲ್ಯಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಿ. ಇಂಗ್ಲೀಷ್ ಕಷ್ಟ ಎನಿಸಿದರೂ ಪ್ರತಿದಿನ ಇಂಗ್ಲೀಷ್ ಓದಲು ಶುರು ಮಾಡಿ ಎಂದರು.

ಯಾವುದೇ ಕೆಲಸ, ಅಧ್ಯಯನಕ್ಕೂ ಮುನ್ನ ಯೋಜನೆ ರೂಪಿಸಿಕೊಂಡು ಆ ನಿಟ್ಟಿನಲ್ಲಿ‌ ಕಾರ್ಯಪ್ರವೃತ್ತರಾಗಬೇಕು. ಸಮಯ ನಿರ್ವಹಣೆ ಜೊತೆಗೆ ಡೈರಿ ಬರೆಯುವುದನ್ನು ರೂಢಿಸಿಕೊಳ್ಳಿ. ಇದರಿಂದ ನಮ್ಮಲ್ಲಿರುವ ಮೂಲಭೂತ, ಅಸ್ತಿತ್ವವಾದಿ ಪ್ರಶ್ನೆಗಳಿಗೆ ಮುಖಾಮುಖಿಯಾಗಲು ಸಾಧ್ಯವಾಗುತ್ತದೆ. ವಕೀಲರೆಂದರೆ ಕಲ್ಲನ್ನೂ ತಟ್ಟಿ ಮಾತನಾಡಿಸುವ ವಾಕ್‌ ಚಾತರ‍್ಯ ಹೊಂದಿರಬೇಕು, ವಾಚಾಳಿತನವಲ್ಲ ಎಂದರು.

ಪ್ರಾಂಶುಪಾಲ ಡಾ.ರಮೇಶ್ ಎಸ್. ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಪ್ರತೀ ಹಂತಗಳಲ್ಲೂ ಯಶಸ್ಸು ಕಾಣಬೇಕು. ಇದಕ್ಕೆ ಬದ್ಧತೆ, ಕಠಿಣ ಪರಿಶ್ರಮ ಹಾಗೂ ಉತ್ಸಾಹ ಅಗತ್ಯವಾಗಿದೆ ಎಂದರು.

ವಸಂತನರಸಾಪುರ ಬಗಾಡಿಯಾ ಚೈತ್ರ ಇಂಡಸ್ಟ್ರೀಸ್ ಪ್ರೈ.ಲಿ., ವಿಭಾಗದ ಮುಖ್ಯಸ್ಥ ರವಿಕುಮಾರ್ ಮಾತನಾಡಿದರುವಿಚಾರ ಸಂಕಿರಣದಲ್ಲಿ ಸುಫಿಯ ಕಾನೂನು ಕಾಲೇಜಿನ ಲೀಗಲ್ ಸರ‍್ವಿಸಸ್ ಕ್ಲಿನಿಕ್‌ನ ಸಂಯೋಜನಾಧಿಕಾರಿ ಟಿ.ಓಬಯ್ಯ, ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕ ಖಾಷೀಪ್ ಅಹಮದ್, ರಾ.ಸೇ.ಯೋ ಘಟಕದ ಸಂಚಾಲಕಿ ಮಮತಾ ಪಿ.ಎಲ್., ಯುವ ರೆಡ್ ಕ್ರಾಸ್ ಘಟಕದ ಸಂಚಾಲಕಿ ರೇಣುಕಾ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’