ಲಸಿಕೆ ಪಡೆಯುವುದು ಮಗುವಿನ ಹಕ್ಕು

KannadaprabhaNewsNetwork |  
Published : Apr 25, 2025, 11:48 PM IST
25ಕೆಪಿಎಲ್22 ಕೊಪ್ಪಳ ನಗರದ 3 ನೇ ವಾರ್ಡಿನ ನಿರ್ಮಿತಿ ಕೇಂದ್ರದ ಅಂಗನವಾಡಿ ಕೇಂದ್ರದಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರ ಆರೋಗ್ಯ ಕೇಂದ್ರ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ “ವಿಶ್ವ ಲಸಿಕಾ ಸಪ್ತಾಹ-2025'' ಕಾರ್ಯಕ್ರಮ | Kannada Prabha

ಸಾರಾಂಶ

ಏ. 24ರಿಂದ ಏ. 30ರ ವರೆಗೆ ವಿಶ್ವ ಲಸಿಕಾ ಸಪ್ತಾಹ ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಶಿಶುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಶಿಶುಗಳಿಗೆ 12 ಮಾರಕ ರೋಗಗಳು ಬಾರದಂತೆ ಸಕಾಲಕ್ಕೆ ಲಸಿಕೆ ಹಾಕಿಸಬೇಕು.

ಕೊಪ್ಪಳ:

ಲಸಿಕೆ ಪಡೆಯುವುದು ಪ್ರತಿ ಮಗುವಿನ ಹಕ್ಕಾಗಿದ್ದು ಪಾಲಿಕರು ತಪ್ಪದೇ ಮಕ್ಕಳಿಗೆ ಲಸಿಕೆ ಹಾಕಿಸಬೇಕೆಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹೇಶ ಹೇಳಿದರು.

ನಗರದ 3ನೇ ವಾರ್ಡಿನ ನಿರ್ಮಿತಿ ಕೇಂದ್ರದ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಲಸಿಕಾ ಸಪ್ತಾಹ-2025ರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಏ. 24ರಿಂದ ಏ. 30ರ ವರೆಗೆ ವಿಶ್ವ ಲಸಿಕಾ ಸಪ್ತಾಹ ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಶಿಶುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಶಿಶುಗಳಿಗೆ 12 ಮಾರಕ ರೋಗಗಳು ಬಾರದಂತೆ ಸಕಾಲಕ್ಕೆ ಲಸಿಕೆ ಹಾಕಿಸಬೇಕು. ಈ ಮೂಲಕ ಮರಣ ತಡೆಗಟ್ಟಬೇಕು ಎಂದ ಅವರು, ಎಲ್ಲರಿಗೂ ರೋಗನಿರೋಧಕ ಶಕ್ತಿ ನೀಡುವುದು ಮಾನವರಿಂದ ಸಾಧ್ಯಎಂಬ ಘೋಷ್ಯವಾಕ್ಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಗರ್ಭಿಣಿಯರಿಗೆ ಧನುರ್ವಾಯ ವಿರುದ್ಧ ಲಸಿಕೆ ಹಾಕಿಸಬೇಕು. ಶಿಶುಗಳಿಗೆ ಗಂಟಲು ಮಾರಿ, ನಾಯಿ ಕೆಮ್ಮು, ಧನುರ್ವಾಯ, ಬಾಲಕ್ಷಯ, ಫೋಲಿಯೋ, ಕಾಮಾಲೆ, ನಿಮೋನಿಯಾ, ದಡಾರ, ರುಬೇಲ್ಲಾ, ರೋಟಾ ವೈರಸ್, ನಿಮೋಕಾಕಲ್ ರೋಗಗಳ ವಿರುದ್ಧ ಸಕಾಲಕ್ಕೆ ಲಸಿಗೆ ಹಾಕಿಸಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಮಾತನಾಡಿ, ಮಕ್ಕಳು ಈ ದೇಶದ ಸಂಪತ್ತು, ಆ ಮಕ್ಕಳ ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಮಗುವಿಗೆ 6 ತಿಂಗಳ ವರೆಗೆ ತಾಯಿಯ ಎದೆಹಾಲು, ಬಳಿಕ ಪೌಷ್ಟಿಕ ಆಹಾರ ನೀಡಬೇಕು ಎಂದರು.

ಲಿಂಕ್‌ವರ್ಕರ ಉದಯ ಕುಮಾರ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಅನಿತಾ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಕುಮಾರ, ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ, ಆಶಾ ಕಾರ್ಯಕರ್ತೆಯರಾದ ಪೂರ್ಣಿಮಾ, ಮಂಜುಳಾ ಹಾಗೂ ಗರ್ಭಿಣಿ, ಬಾಣಂತಿಯರು, ತಾಯಂದಿರು ಸೇರಿದಂತೆ ಆರೋಗ್ಯ ಇಲಾಖೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ಪೋಲಿಯೊ ಹನಿ ಮಕ್ಕಳಿಗೆ ಜೀವಾಮೃತ: ಶಾಸಕ ಪ್ರಸಾದ್ ಅಬ್ಬಯ್ಯ
₹22267 ಕೋಟಿ ವೆಚ್ಚದಲ್ಲಿ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಅದಾನಿ ಗ್ರೂಪ್ ಬಿಡ್‌ ಸಲ್ಲಿಕೆ