ಗೆಜ್ಜಲಗೆರೆ ಗ್ರಾಮಸ್ಥರ ಪ್ರತಿಭಟನೆ ರಾಜಕೀಯ ಪ್ರೇರಿತ: ಸತೀಶ್ ಆರೋಪ

KannadaprabhaNewsNetwork |  
Published : Dec 29, 2025, 02:00 AM IST
28ಕೆಎಂಎನ್ ಡಿ25 | Kannada Prabha

ಸಾರಾಂಶ

ಗೆಜ್ಜಲಗೆರೆಯು ಈಗಾಗಲೇ ನಗರದ ಸ್ವರೂಪ ಪಡೆದುಕೊಂಡಿದೆ. ಕೆ.ಎಂ.ಎಫ್ ಡೈರಿ ಮತ್ತು ವಿವಿಧ ಕೈಗಾರಿಕೆಗಳಿಂದಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ. ಇದನ್ನು ನಗರಸಭೆಗೆ ಸೇರಿಸುವುದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ಲಭ್ಯವಾಗಿ ಮೂಲಸೌಕರ್ಯಗಳು ಮತ್ತಷ್ಟು ಅಭಿವೃದ್ಧಿಯಾಗಲಿವೆ.

ಕನ್ನಡಪ್ರಭ ವಾರ್ತೆ ಮದ್ದೂರು

ಗೆಜ್ಜಲಗೆರೆ ಗ್ರಾಪಂ ಸೇರಿ ಗ್ರಾಮ ಪಂಚಾಯ್ತಿಗಳನ್ನು ನಗರಸಭೆಗೆ ಸೇರಿಸಿರುವ ವಿಚಾರವಾಗಿ ಕೆಲವು ನಿವಾಸಿಗಳು ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ. ಅಭಿವೃದ್ಧಿಯನ್ನು ಸಹಿಸದ ಕೆಲವರು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಎಲ್.ಸತೀಶ್ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಗೆಜ್ಜಲಗೆರೆ ಗ್ರಾಮ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿಯಾಗುವ ಮೊದಲೇ ಅಲ್ಲಿ ಭೂಮಿಯ ಬೆಲೆ ಏರಿಕೆಯಾಗಿತ್ತು. ಇದು ಸ್ವಾಭಾವಿಕ ಪ್ರಕ್ರಿಯೆಯೇ ಹೊರತು ಯಾವುದೇ ವ್ಯಕ್ತಿಯ ಲಾಭಕ್ಕಾಗಿ ಅಲ್ಲ. ಶಾಸಕರು ರಿಯಲ್ ಎಸ್ಟೇಟ್ ಲಾಭಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಆರೋಪಗಳನ್ನು ತಳ್ಳಿ ಹಾಕಿದರು.

ಗೆಜ್ಜಲಗೆರೆಯು ಈಗಾಗಲೇ ನಗರದ ಸ್ವರೂಪ ಪಡೆದುಕೊಂಡಿದೆ. ಕೆ.ಎಂ.ಎಫ್ ಡೈರಿ ಮತ್ತು ವಿವಿಧ ಕೈಗಾರಿಕೆಗಳಿಂದಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ. ಇದನ್ನು ನಗರಸಭೆಗೆ ಸೇರಿಸುವುದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ಲಭ್ಯವಾಗಿ ಮೂಲಸೌಕರ್ಯಗಳು ಮತ್ತಷ್ಟು ಅಭಿವೃದ್ಧಿಯಾಗಲಿವೆ ಎಂದು ವಾದಿಸಿದರು.

ಒಂದು ಪ್ರದೇಶದಲ್ಲಿ ಇರುವ ಜನಸಂಖ್ಯೆ ಮತ್ತು ಆದಾಯದ ಆಧಾರದ ಮೇಲೆ ಅದನ್ನು ನಗರಸಭೆಗೆ ಸೇರಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಗೆಜ್ಜಲಗೆರೆಯು ಈ ಎಲ್ಲಾ ಮಾನದಂಡಗಳನ್ನು ಪೂರೈಸಿದೆ ಎಂದದರು.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳನ್ನು ಸ್ಮರಿಸಿದ ಮುಖಂಡರು, ಮದ್ದೂರನ್ನು ದೊಡ್ಡ ಮಟ್ಟದ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ಸೇರ್ಪಡೆ ಅತಿ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರವಿಶಂಕರ್ ಚಾಮನಹಳ್ಳಿ, ಎಸ್‌ಸಿ ಎಸ್‌ಟಿ ಅಧ್ಯಕ್ಷ ಮಹಾದೇವಯ್ಯ, ಪ್ರಧಾನ ಕಾರ್ಯದರ್ಶಿ ತಿಪ್ಪೂರು ಮನು, ಪ್ರಚಾರ ಸಮಿತಿ ಅಧ್ಯಕ್ಷ ನಿತಿನ್‌ಗೌಡ, ಹುಲಿಗೆರೆಪುರ ರವಿ, ರಾಜೇಗೌಡ ಅಪ್ಪಾಜಿ, ಬಸವರಾಜ ಅಜ್ಜಹಳ್ಳಿ, ಮನು ಅಜ್ಜಹಳ್ಳಿ, ನಗರಕೆರೆ ಪುಟ್ಟೇಗೌಡ, ಯಡಗನಹಳ್ಳಿ ಮಹಾಲಿಂಗ, ಹರವನಳ್ಳಿ ಸಿದ್ದರಾಜು, ವಕೀಲರಾದ ಕೊಪ್ಪ ದೇವರಾಜು, ಅಲೋಕ್ ವಳಗೆರೆಹಳ್ಳಿ, ಅಶೋಕ್ ಚಾಮನಹಳ್ಳಿ, ಶಿವರಾಜ್ ಮದ್ದೂರು, ಪಣ್ಣೆದೊಡ್ಡಿ ರಾಜೇಶ್, ಆಲೂರ್ ಕುಮಾರ್ ಇನ್ನೂ ಮುಂತಾದ ಯುವ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೃಹಲಕ್ಷ್ಮಿ ಹಣ ಮುಂದಿನ ವಾರ ಖಾತೆಗೆ ಜಮೆ: ಎಂ.ಎಲ್.ದಿನೇಶ್
ಗ್ರಾಪಂಗಳು ನಗರಸಭೆಗೆ ಸೇರ್ಪಡೆ; ರದ್ದು ಪಡಿಸುವಂತೆ ಸಚಿವರಿಗೆ ಮನವಿ