ಚನ್ನಪಟ್ಟಣ: ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಹಾಗೂ ಕನ್ನಡ ಹೋರಾಟಗಾರ ಸಿಂ.ಲಿಂ. ನಾಗರಾಜು ಅವರ ಸಂಸ್ಮರಣೆ ಒಂದೇ ವೇದಿಕೆಯಲ್ಲಿ ಹಮ್ಮಿಕೊಂಡಿರುವುದು ಸಮಯೋಚಿತ. ಕುವೆಂಪು ವಿಶ್ವಮಾನವರಾದರೆ, ಸಿಂ.ಲಿಂ.ನಾಗರಾಜು ಸರಳ ಜೀವಿ. ಈ ಇಬ್ಬರೂ ಅವರವರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಾಮಲಿಂಗಯ್ಯ ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ, ಡಾ.ಕೂ.ಗಿ.ಗಿರಿಯಪ್ಪ ಮಾತನಾಡಿ, ಕುವೆಂಪು ಕವಿ ಕಾವ್ಯ, ವಿಶ್ವಮಾನವತೆ ಹಾಗೂ ಕುವೆಂಪು ಏರಿದ ಎತ್ತರ ಕುರಿತು ಸಂಕ್ಷಿಪ್ತವಾಗಿ ತಿಳಿಸಿದರು. ಹಾಗೆಯೇ ಸಿಂ.ಲಿಂ.ನಾಗರಾಜು ಸೇವಾ ರತ್ನ ಪ್ರಶಸ್ತಿಗೆ ಪಾತ್ರರಾದ ಶಿಕ್ಷಕ ದಂಪತಿ ಪ್ರೇಮಾ- ಕೃಷ್ಣ ಅವರನ್ನು ಅಭಿನಂದಿಸಿದರು.
ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಸಂಚಾಲಕ ಆದರ್ಶ ಕುಮಾರ್ ಸಿಂ.ಲಿಂ.ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ಸುಧೀಂದ್ರ, ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ಎಸ್.ರಾಮಣ್ಣ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ನಾಗವಾರ ಎನ್.ಎಂ. ಶಂಭೂಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕ ದಂಪತಿ ಪ್ರೇಮಾ- ಕೃಷ್ಣ ಅವರಿಗೆ ಸಿಂ.ಲಿಂ.ನಾಗರಾಜು ಸೇವಾ ರತ್ನ ಪ್ರಶಸ್ತಿಯನ್ನು ಜಂಟಿಯಾಗಿ ಪ್ರದಾನ ಮಾಡಲಾಯಿತು. ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿರುಪಸಂದ್ರದ ಶ್ವೇತಾ- ಸಿದ್ದರಾಜು ಪುತ್ರಿ ಹೇಮಶ್ರೀ ಅವರಿಗೆ ನಗದು ಬಹುಮಾನ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎಚ್.ಬ್ಯಾಡರಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಬುಕ್, ಟೈ, ಬೆಲ್ಟ್ ಹಾಗೂ ಇತರೆ ಪರಿಕರಗಳನ್ನು ವಿತರಣೆ ಮಾಡಲಾಯಿತು.
ಪೊಟೋ೨೮ಸಿಪಿಟಿ೧: