ವಿಧಾನಪರಿಷತ್ ಮಾಜಿ ಸದಸ್ಯ ಘೋಟ್ನೇಕರ ಬಿಜೆಪಿ ಸೇರ್ಪಡೆಗೆ ಅಪಸ್ವರ

KannadaprabhaNewsNetwork | Published : Nov 29, 2024 1:05 AM

ಸಾರಾಂಶ

ಈ ಹಿಂದೆಯೂ ಬಿಜೆಪಿ ಸೇರ್ಪಡೆ ಮುಂದಾಗಿದ್ದ ಘೋಟ್ನೇಕರ, ಪಕ್ಷದ ವರಿಷ್ಠರು ನೀಡಿದ ಗಡುವಿನ ಮುನ್ನವೇ ಜೆಡಿಎಸ್ ಸೇರ್ಪಡೆಯಾಗಿ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಈಗ ಬಿಜೆಪಿ ಸೇರ್ಪಡೆಯಾದ ನಂತರ ಅವರು ಹಾಗೆಯೇ ನಡೆದರೆ ಯಾರು ಹೊಣೆ ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದರು.

ಹಳಿಯಾಳ: ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರು ಬಿಜೆಪಿ ಸೇರ್ಪಡೆಯ ಮುನ್ನ ಹಳಿಯಾಳ ವಿಧಾನಸಭಾ ಕ್ಷೇತ್ರದ ಮಂಡಲ ಅಧ್ಯಕ್ಷರು ಹಾಗೂ ಮೋರ್ಚಾ ಪ್ರಮುಖರು, ಮಾಜಿ ಶಾಸಕರ ಜತೆ ಬಗ್ಗೆ ಚರ್ಚಿಸಬೇಕೆಂದು ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ಬಿಜೆಪಿ ಮಂಡಲದವರು ಆಗ್ರಹಿಸಿದ್ದಾರೆ.

ಗುರುವಾರ ಪಟ್ಟಣದಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರ ಮಟ್ಟದ ಬಿಜೆಪಿ ಘಟಕಗಳ ಪದಾಧಿಕಾರಿಗಳು, ಮೋರ್ಚಾ ಪ್ರಮುಖರು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ನಾನು ಸತ್ತರೂ ನನ್ನ ಹೆಣ ಬಿಜೆಪಿಗೆ ಹೋಗಲು ಬಿಡುವುದಿಲ್ಲ ಎಂದು ಹೇಳಿದವರು ಈಗ ಬಿಜೆಪಿ ಸೇರಲು ತುದಿಗಾಲ ಮೇಲೆ ಏಕೆ ನಿಂತಿದ್ದಾರೆ ಎಂದು ಪ್ರಶ್ನಿಸಿದರು.

ಹಳಿಯಾಳ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲು ನಾವು ಮಾಡಿದ ಶ್ರಮ, ಕಷ್ಟ ಅಷ್ಟಿಷ್ಟಲ್ಲ. ಘೋಟ್ನೇಕರ ಆಗಮನದಿಂದ ಪಕ್ಷಕ್ಕೆ ಲಾಭವಾಗುತ್ತದೆಯೋ ಅಥವಾ ಹಾನಿಯೇ ಆಗುತ್ತದೆ ಎಂಬುದನ್ನು ಜಿಲ್ಲಾ ವರಿಷ್ಠರು ಗಮನಿಸಬೇಕು ಎಂದರು.

ಈ ಹಿಂದೆಯೂ ಬಿಜೆಪಿ ಸೇರ್ಪಡೆ ಮುಂದಾಗಿದ್ದ ಘೋಟ್ನೇಕರ, ಪಕ್ಷದ ವರಿಷ್ಠರು ನೀಡಿದ ಗಡುವಿನ ಮುನ್ನವೇ ಜೆಡಿಎಸ್ ಸೇರ್ಪಡೆಯಾಗಿ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಈಗ ಬಿಜೆಪಿ ಸೇರ್ಪಡೆಯಾದ ನಂತರ ಅವರು ಹಾಗೆಯೇ ನಡೆದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಪಕ್ಷ ಸೇರ್ಪಡೆಯ ಮುನ್ನವೇ ಘೋಟ್ನೇಕರ ಬೆಂಬಲಿಗರು ತಾವೇ ಮುಂದಿನ ಜಿಪಂ, ತಾಪಂ, ಸಹಕಾರಿ ಕ್ಷೇತ್ರಗಳ ಅಭ್ಯರ್ಥಿಗಳೆಂದು ಹೇಳುತ್ತಿದ್ದಾರೆ. ಹೀಗಾದರೆ ಹೇಗೆ? ಈ ವರೆಗೆ ಪಕ್ಷದ ಸಂಘಟನೆಯಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಮುಂಬರಲಿರುವ ತಾಪಂ, ಜಿಪಂ ಹಾಗೂ ಸಹಕಾರಿ ಸಂಘಗಳಲ್ಲಿ ಟಿಕೆಟ್‌ ನೀಡಿ, ಅವರನ್ನು ಗೆಲ್ಲಿಸುವ ದೊಡ್ಡ ಸವಾಲು ನಮ್ಮೆದುರು ಇದೆ. ಅದಕ್ಕಾಗಿ ಮುಂಬರಲಿರುವ ಸಹಕಾರಿ ಸಂಘಗಳ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಸ್ಪರ್ಧಿಸಲಿದೆ. ಅದರ ಬಗ್ಗೆ ಯಾವುದೇ ಸಂಶಯ ಬೇಡ ಎಂದರು. ಕಡ್ಡಾಯವಾಗಿ ಬರಲೇಬೇಕು: ಕಾರ್ಯಕರ್ತರ ಅಭಿಪ್ರಾಯ ಆಲಿಸಿದ ನಂದು ಗಾಂವ್ಕರ ಅವರು, ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಗೌರವ ಇದೆ. ಅವರ ಅಭಿಪ್ರಾಯಗಳಿಗೆ ಮಾನ್ಯತೆ ನೀಡಲಾಗುತ್ತದೆ. ಯಾರು, ಎಷ್ಟೇ ಪ್ರಭಾವಿಗಳಿರಲಿ. ಪಕ್ಷವು ಅವರನ್ನು ತಿದ್ದಿ ಸರಿದಾರಿ ತೋರಿಸಲಿದೆ. ನಿಮ್ಮ ಅಭಿಪ್ರಾಯ, ವಿಚಾರವನ್ನು ಜಿಲ್ಲಾ ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು. ನ. 30ರಂದು ಶಿರಸಿಯಲ್ಲಿ ನಡೆಯುವ ಘೋಟ್ನೇಕರ ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಹಳಿಯಾಳ ವಿಧಾನಸಭಾ ಕ್ಷೇತ್ರದ ಮೂರು ಮಂಡಳಗಳ ಅಧ್ಯಕ್ಷರು ಹಾಗೂ ಮೋರ್ಚಾ ಪ್ರಮುಖರು ಮತ್ತು ಮಾಜಿ ಶಾಸಕರು ಕಡ್ಡಾಯವಾಗಿ ಆಗಮಿಸಬೇಕೆಂಬ ಜಿಲ್ಲಾ ಕೈಕಮಾಂಡ್‌ಗೆ ಸಂದೇಶವನ್ನು ರವಾನಿಸಿದರು.ಸಭೆಯಲ್ಲಿ ಸಭೆಗೆ ಬಿಜೆಪಿ ಮಂಡಲ ಪ್ರಮುಖರಾದ ವಿಠ್ಠಲ ಸಿದ್ದಣ್ಣನವರ, ಬುದ್ಧಿವಂತ ಗೌಡ, ಸಂತೋಷ ರೆಡೆಕರ, ಪಾಂಡುರಂಗ ಪಾಟೀಲ, ಅರುಣ ಕಾಂಬ್ರೆಕರ, ಹನುಮಂತ ಚಿಣಗಿನಕೊಪ್ಪ, ರಾಮಚಂದ್ರ, ಮೋಹನ ರೆಡಕರ, ಸಂತೋಷ ಘಟಕಾಂಬ್ಳೆ ಮಾತನಾಡಿದರು.

Share this article