ಕನ್ನಡಪ್ರಭ ವಾರ್ತೆ ಆಲೂರು
ಹಿಂದೆ ಭತ್ತ, ಜೋಳಕ್ಕೆ ಬಾಧಿಸುತ್ತಿದ್ದ ಬೆಂಕಿ ರೋಗ (ಎಲೆ ಚುಕ್ಕೆ ರೋಗ) ಈಗ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಶುಂಠಿ ಬೆಳೆಯನ್ನು ಬಾಧಿಸುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿದೆ. ಇದರಿಂದ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಶುಂಠಿಯನ್ನು ಬಿತ್ತನೆ ಮಾಡಿದ್ದ ರೈತರು ಕಂಗಾಲಾಗಿದ್ದಾರೆಪೆರಿಕ್ಯುಲೇರಿಯಾ ಫಂಗಸ್‌ನಿಂದ ಬರುತ್ತದೆ. ಈ ''''''''ಬೆಂಕಿ ರೋಗ ಕಳೆದ ವರ್ಷ ಕುಶಾಲನಗರ ಭಾಗದ ಕೆಲವು ಪ್ರದೇಶಗಳಲ್ಲಿ ಕಾಣಿಸಿಕೊಂಡಿತ್ತು. ಈ ವರ್ಷ ಹಾಸನ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಅನೇಕ ಕಡೆ ವ್ಯಾಪಿಸಿದೆ, ಶುಂಠಿ ಬೆಳೆಯನ್ನು ಬಾಧಿಸುತ್ತಿದೆ. ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಕೃಷಿ ಮಾಡುತ್ತಿರುವ ರೈತರಲ್ಲಿ ಬೆಳೆ ಕಳೆದುಕೊಳ್ಳುವ ಆತಂಕ ಮನೆ ಮಾಡಿದೆ.ರೋಗ ವಿಸ್ತರಣೆ ಸಾಧ್ಯತೆ:ತಾಲೂಕಿನಲ್ಲಿ ಸುಮಾರು ಸಾವಿರ ಎಕರೆ ಪ್ರದೇಶದಲ್ಲಿ ರೈತರು ಶುಂಠಿ ಕೃಷಿ ಮಾಡಿದ್ದಾರೆ. ದಶಕಗಳ ಹಿಂದೆ ಮೈಸೂರು, ಕೊಡಗು ಮತ್ತು ಹಾಸನದ ಕೆಲ ತಾಲೂಕುಗಳಿಗೆ ಸೀಮಿತವಾಗಿದ್ದ ಶುಂಠಿಬೆಳೆ ಪ್ರಸ್ತುತ ರಾಜ್ಯದ ಇತರೆ ಜಿಲ್ಲೆಗಳಿಗೂ ವ್ಯಾಪಿಸಿದೆ. ಈಗ ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಉತ್ತರಕನ್ನಡ ಮತ್ತು ಬೀದರ್ ಜಿಲ್ಲೆಗಳಲ್ಲೂ ಶುಂಠಿ ಕೃಷಿ ವಿಸ್ತರಿಸಿದೆ. ಕಳೆದ ವರ್ಷ ಆರು ತಿಂಗಳ ವಯಸ್ಸಿನ ಶುಂಠಿ ಬೆಳೆಗೆ ರೋಗ ಬಾಧಿಸಿತ್ತು. ಆ ವೇಳೆಗೆ ಗೆಡ್ಡೆಗಳು ಬಲಿತಿದ್ದವು. ಗಿಡಗಳು ಮಾತ್ರ ಒಣಗಿದವು. ಹಾಗಾಗಿ ಗೆಡ್ಡೆಗಳಿಗೆ ಅಷ್ಟಾಗಿ ತೊಂದರೆಯಾಗಲಿಲ್ಲ. ಈ ಬಾರಿ ಎರಡು ತಿಂಗಳ ಬೆಳೆಗೆ ರೋಗ ಬಾಧಿಸುತ್ತಿದೆ. ಹೀಗಾಗಿ ಗಿಡಗಳು ಒಣಗುತ್ತವೆ, ಗೆಡ್ಡೆ ಕೊಳೆಯುತ್ತಿದೆ. ಚಿಕಿತ್ಸೆ ನೀಡದಿದ್ದರೆ, ರೋಗ ತಗುಲಿದ ಎರಡು-ಮೂರು ವಾರಗಳಲ್ಲಿ ಬೆಳೆ ಸಂಪೂರ್ಣ ನಾಶವಾಗುತ್ತದೆ ಎಂದು ರೈತ ಮಂಜೇಗೌಡ ಆತಂಕ ವ್ಯಕ್ತಪಡಿಸುತ್ತಾರೆ.
ರೋಗಕ್ಕೆ ಪ್ರಮುಖ ಕಾರಣ:ಈ ವರ್ಷ ವಾಡಿಕೆಗಿಂತ ಮುನ್ನವೇ( ಮೇನಿಂದ) ಆರಂಭವಾದ ಮಳೆ ಎಡಬಿಡದೇ ಸುರಿಯುತ್ತಲೇ ಇದೆ. ಜೊತೆಗೆ, ತಗ್ಗಿದ ಉಷ್ಣಾಂಶ, ತುಂತುರು ಮಳೆ, ಮೋಡ ಮುಸುಕಿದ ವಾತಾವರಣ, ಕಡಿಮೆ ಬಿಸಿಲು, ಮಣ್ಣಿನಲ್ಲಿ ಹೆಚ್ಚಿರುವ ತೇವಾಂಶ, ವೇಗವಾಗಿ ಬೀಸುವ ಗಾಳಿ, ಸೂಕ್ತ ಬಸಿಗಾಲುವೆ ಇಲ್ಲದಿರುವುದು- ಇವೆಲ್ಲ ರೋಗ ಉಲ್ಬಣಗೊಳ್ಳಲು ಕಾರಣವಾಗಿದೆ.ಎಲೆಚುಕ್ಕೆ ರೋಗಕ್ಕೆ ಕಾರಣ:ಮಣ್ಣು ಪರೀಕ್ಷೆ ಮಾಡಿಸದೆಯೇ ರಸಗೊಬ್ಬರ ನೀಡುತ್ತಿರುವುದು, ಅತಿಯಾದ ಸಾರಜನಕ ರಸಗೊಬ್ಬರಗಳ ಬಳಕೆ, ಕಡಿಮೆ ಪ್ರಮಾಣದ ಪೊಟ್ಯಾಷ್ ಬಳಕೆ, ಗೊಬ್ಬರಗಳನ್ನು ಬೆಳೆಯ ಬೇಡಿಕೆಗೆ ತಕ್ಕಂತೆ ನೀಡದಿರುವುದು, ಲಘುಪೋಷಕಾಂಶಗಳ ಅಸಮರ್ಪಕ ಬಳಕೆ, ಔಷಧಗಳೊಂದಿಗೆ ಪೋಷಕಾಂಶಗಳನ್ನು ಮಿಶ್ರಣ ಮಾಡಿ ಸಿಂಪಡಿಸುತ್ತಿರುವುದು. ಸೂಕ್ತ ಪೋಷಣೆ ದೊರೆಯದೆ ಶುಂಠಿ ಬೆಳೆ ರೋಗಕ್ಕೆ ಸುಲಭವಾಗಿ ತುತ್ತಾಗುತ್ತಿರುವುದು ಕಂಡುಬಂದಿದೆ. ತೋ ವಿವಿಯ ಸರ್ವೇಕ್ಷಣೆ ಸಮಯದಲ್ಲಿ ಪೊಟ್ಯಾಷ್ ಸರಿಯಾದ ಪ್ರಮಾಣದಲ್ಲಿ ಕೊಡದಿರುವ ಅಥವಾ ತೀರಾ ಕಡಿಮೆ ಕೊಟ್ಟಿರುವ ತಾಕುಗಳಲ್ಲಿ ಎಲೆಚುಕ್ಕೆ ರೋಗ ಮೇಲ್ನೋಟಕ್ಕೆ ಹೆಚ್ಚಾಗಿರುವುದು ಕಂಡುಬಂದಿದೆ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿರುತ್ತಾರೆ ಪ್ರಸ್ತುತ ವರ್ಷ ಪರಿಸ್ಥಿತಿ ಈ ರೀತಿ ಆದರೆ ಕಳೆದ ವರ್ಷ ಶುಂಠಿ ಬೆಳಗೆ ಬೆಲೆ ಇಲ್ಲದೆ ಕಳೆದ ವರ್ಷದ ಶುಂಠಿಯನ್ನು ಕೆಲವು ರೈತರು ಈ ವರ್ಷವೂ ಕೂಡ ಕಟಾವು ಮಾಡದೆ ಭೂಮಿಯಲ್ಲಿಯೇ ಬಿಟ್ಟಿದ್ದಾರೆ ಅದು ಒಂದು ಕಡೆಯಾದರೆ, ಪ್ರಸ್ತುತ ಹೊಸ ಶುಂಠಿ ಬೆಳೆಗೂ ಕೂಡ ಕೇವಲ 1000 ರುಪಾಯಿ ಬೆಲೆ ಇದ್ದು ಇತ್ತ ಬೆಂಕಿ ರೋಗದಿಂದ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡಬೇಕಾದ ಸ್ಥಿತಿ ಬಂದೊದಗಿದೆ.