ರೈತರ ಕೈ ಸುಡುವ ಬೆಳೆಯಾಗಿ ಮಾರ್ಪಟ್ಟ ಶುಂಠಿ!

KannadaprabhaNewsNetwork |  
Published : Nov 23, 2026, 02:00 AM IST
ಶುಂಠಿ | Kannada Prabha

ಸಾರಾಂಶ

ಒಂದು ಕಾಲದಲ್ಲಿ ರೈತರ ಕೈಹಿಡಿದಿದ್ದ ಶುಂಠಿ ಈಗ ಕೈ ಸುಡುವ ಬೆಳೆಯಾಗಿ ಪರಿಣಮಿಸಿದೆ. ಎಕರೆಗೆ ಲಕ್ಷಾಂತರ ರುಪಾಯಿ ಬಂಡವಾಳ ಹೂಡಿದರೂ ರೋಗಬಾಧೆ, ಕೀಟಗಳ ಕಾಟ, ಇಳುವರಿ ಕುಸಿತ ಹಾಗೂ ಮಾರುಕಟ್ಟೆಯ ಬೆಲೆ ಏರಿಳಿತದಿಂದ ಬೆಳೆಗಾರರು ನಷ್ಟದ ಸುಳಿಗೆ ಸಿಲುಕಿದ್ದಾರೆ.

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಒಂದು ಕಾಲದಲ್ಲಿ ರೈತರ ಕೈಹಿಡಿದಿದ್ದ ಶುಂಠಿ ಈಗ ಕೈ ಸುಡುವ ಬೆಳೆಯಾಗಿ ಪರಿಣಮಿಸಿದೆ. ಎಕರೆಗೆ ಲಕ್ಷಾಂತರ ರುಪಾಯಿ ಬಂಡವಾಳ ಹೂಡಿದರೂ ರೋಗಬಾಧೆ, ಕೀಟಗಳ ಕಾಟ, ಇಳುವರಿ ಕುಸಿತ ಹಾಗೂ ಮಾರುಕಟ್ಟೆಯ ಬೆಲೆ ಏರಿಳಿತದಿಂದ ಬೆಳೆಗಾರರು ನಷ್ಟದ ಸುಳಿಗೆ ಸಿಲುಕಿದ್ದಾರೆ.

ರಾಜ್ಯಾದ್ಯಂತ ಕೊಳೆ ರೋಗ (ಸಾಫ್ಟ್ ರಾಟ್), ಬ್ಯಾಕ್ಟೀರಿಯಾ ಸೊರಗು ಹಾಗೂ ಎಲೆ ಚುಕ್ಕೆ ರೋಗದ ಬಾಧೆ ಶುಂಠಿ ಕೃಷಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಿರಂತರ ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುವ ಆತಂಕವೂ ಬೆಳೆಗಾರರನ್ನು ಪರ್ಯಾಯ ಬೆಳೆಗಳತ್ತ ಮುಖ ಮಾಡುವಂತೆ ಮಾಡಿದೆ.

ರಾಜ್ಯದ ಹಾವೇರಿ, ಚಾಮರಾಜನಗರ, ಮೈಸೂರು, ಶಿವಮೊಗ್ಗ, ಉತ್ತರ ಕನ್ನಡ, ಬೀದರ್‌, ಮಂಡ್ಯ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶುಂಠಿ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಆದರೆ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ರೋಗ ನಿಯಂತ್ರಣದ ಸವಾಲು ಮತ್ತು ಮಾರುಕಟ್ಟೆಯ ಅನಿಶ್ಚಿತತೆ ಕೃಷಿ ವಿಸ್ತರಣೆಗೆ ಕಡಿವಾಣ ಹಾಕಿವೆ.

ಅರ್ಧಕ್ಕಿಂತ ಹೆಚ್ಚು ಪ್ರದೇಶಕ್ಕೆ ಕತ್ತರಿ:

ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿಯ ಅಂಕಿ-ಅಂಶಗಳು ಶುಂಠಿ ಕೃಷಿಯ ಹಿನ್ನಡೆಯನ್ನು ಸ್ಪಷ್ಟಪಡಿಸುತ್ತವೆ. 2021-22ನೇ ಸಾಲಿನಲ್ಲಿ ರಾಜ್ಯದ 45,859 ಹೆಕ್ಟೇರ್‌ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗಿದ್ದು, 4,94,853 ಟನ್ ಉತ್ಪಾದನೆಯಾಗಿತ್ತು. 2025-26ನೇ ಸಾಲಿನಲ್ಲಿ ಕೃಷಿ ಪ್ರದೇಶ 27,961 ಹೆಕ್ಟೇರ್‌ಗೆ ಇಳಿದಿದ್ದು, ಉತ್ಪಾದನೆಯೂ 3,29,012 ಟನ್‌ಗೆ ಕುಸಿದಿದೆ. 2026-27ನೇ ಸಾಲಿಗೆ ಕೇವಲ 19 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮಾಡುವ ಅಂದಾಜಿದೆ. ಐದು ವರ್ಷಗಳ ಅಂತರದಲ್ಲಿ ಕೃಷಿ ಪ್ರದೇಶ ಶೇ.58.6ರಷ್ಟು ಕುಸಿದಿರುವುದು ಈ ಬೆಳೆಯ ಬಿಕ್ಕಟ್ಟಿನ ತೀವ್ರತೆಗೆ ಸಾಕ್ಷಿಯಾಗಿದೆ.

ಹೂಡಿಕೆ ಹೆಚ್ಚು, ಆದಾಯ ಅನಿಶ್ಚಿತ:

ಒಂದು ಎಕರೆ ಶುಂಠಿ ಬೆಳೆಯಲು ಬಿತ್ತನೆ ಬೀಜ, ಕೂಲಿ, ಗೊಬ್ಬರ, ಔಷಧ ಸೇರಿದಂತೆ ₹5ರಿಂದ ₹6 ಲಕ್ಷದವರೆಗೆ ವೆಚ್ಚವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಅಜ್ಜಳ್ಳಿಯ ಮಹಾಂತೇಶ ಲಿಂಗಪ್ಪ ತಂಡೂರ ಎಂಬುವರು ಎಕರೆಗೆ ₹5 ಲಕ್ಷಕ್ಕೂ ಅಧಿಕ ಹಣ ಹೂಡಿಕೆ ಮಾಡಿದ್ದಾರೆ. ಕಳೆದ ವರ್ಷ ಉತ್ತಮ ಇಳುವರಿ ಬಂದಿದ್ದರೂ ಈ ಬಾರಿ ಮಳೆ ಕೊರತೆ ಹಾಗೂ ರೋಗಬಾಧೆಯಿಂದ 50ರಿಂದ 100 ಚೀಲದಷ್ಟು ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ.

ಹಾವೇರಿ ಜಿಲ್ಲೆಯ ಕಂಚಿನೆಗಳೂರಿನ ದೇವೇಂದ್ರಪ್ಪ ಬೈರಕ್ಕನವರ ಅವರು 3.5 ಎಕರೆಯಲ್ಲಿ ಶುಂಠಿ ಬೆಳೆದಿದ್ದಾರೆ. ಬೆಳೆ ಉಳಿಸಿಕೊಳ್ಳುವುದಕ್ಕಾಗಿಯೇ ಔಷಧ ಸಿಂಪಡಣೆಗೆ ಹೆಚ್ಚಿನ ಹಣ ವ್ಯಯಿಸಬೇಕಾಗಿದೆ. ನಿರಂತರ ಮಳೆ, ತೇವಾಂಶದ ಏರುಪೇರು ಹಾಗೂ ರೋಗಬಾಧೆ ಕಾಣಿಸಿಕೊಂಡರೆ ನಿಯಂತ್ರಣ ಕಷ್ಟ. ರೋಗ ಅಥವಾ ಕೀಟಬಾಧೆ ಆರಂಭವಾದರೆ ತ್ವರಿತವಾಗಿ ಬೆಳೆ ಹಾನಿಯಾಗುವ ಆತಂಕವಿದೆ ಎನ್ನುತ್ತಾರೆ.

ಕೀಟನಾಶಕದಿಂದ ಮಣ್ಣು ನಾಶ:

ಅಧಿಕ ಇಳುವರಿಯ ನಿರೀಕ್ಷೆಯಲ್ಲಿ ನಿರಂತರ ರಾಸಾಯನಿಕ ಗೊಬ್ಬರ ಹಾಗೂ ಔಷಧ ಬಳಕೆ ಮಣ್ಣಿನ ಫಲವತ್ತತೆ ಮತ್ತು ಉತ್ಪಾದನಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಆತಂಕ ಮೂಡಿಸಿದೆ. ಮಣ್ಣಿನ ತೇವಾಂಶ ನಿರ್ವಹಣೆಯೂ ಸವಾಲಾಗಿದೆ. ಹೀಗಾಗಿ ಕೆಲವು ರೈತರು ಶುಂಠಿ ಕೃಷಿಯಿಂದ ಹಿಂದೆ ಸರಿದು ಕಡಿಮೆ ವೆಚ್ಚದ ಪರ್ಯಾಯ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ.

----

(ಟೇಬಲ್‌...)

ಶುಂಠಿ ಕೃಷಿ: ಐದು ವರ್ಷಗಳ ಅಂಕಿ-ಅಂಶ

ವರ್ಷ ವಿಸ್ತೀರ್ಣ (ಹೆಕ್ಟೇರ್‌)ಉತ್ಪಾದನೆ (ಟನ್)

2021-22 45,8594,94,853

2022-2324,8402,66,532

2023-2421,8312,36,706

2024-2533,6313,79,151

2025-2627,9613,29,012

2026-2719,000---

----

ಕೋಟ್‌...

ಶುಂಠಿಗೆ ಕೊಳೆ ರೋಗ ಪ್ರಮುಖ ಸವಾಲಾಗಿದೆ. ರೋಗಮುಕ್ತ ಬಿತ್ತನೆ ಶುಂಠಿ ಬಳಕೆ, ಮಣ್ಣು ಮತ್ತು ನೀರಿನ ಪರೀಕ್ಷೆ ಹಾಗೂ ಸಮರ್ಪಕ ಪೋಷಕಾಂಶ ನಿರ್ವಹಣೆ ಅತ್ಯಗತ್ಯ. ತಜ್ಞರ ಸಲಹೆಯಂತೆ ಔಷಧ ಹಾಗೂ ಗೊಬ್ಬರ ಬಳಸುವುದರಿಂದ ಅನಗತ್ಯ ವೆಚ್ಚ ತಗ್ಗಿಸಿ ಇಳುವರಿ ಹೆಚ್ಚಿಸಬಹುದು.

- ರಾಮಚಂದ್ರ ಕೆ.ಎಂ., ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿ
ಸರ್ಕಾರದ ಅನುದಾನದ ಜೊತೆಗೆ ದಾನಿಗಳ ನೆರವು ಪಡೆಯಿರಿ: ವಿಜಯ ಮಾನೆ