ಬಾಲಕಿ ಆತ್ಮಹತ್ಯೆ, ಆರೋಪಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹ

KannadaprabhaNewsNetwork | Published : May 5, 2025 12:48 AM

ಸಾರಾಂಶ

ತಾಲೂಕಿನ ತಾಳೂರು ಗ್ರಾಮದಲ್ಲಿ ಇತ್ತೀಚೆಗೆ ಲೈಂಗಿಕ ದೌರ್ಜನ್ಯದಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಬಾಲಕಿಯ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಹಾಗೂ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಶನಿವಾರ ವಿವಿಧ ಸಂಘಟನೆಗಳ ಮುಖಂಡರು ತೋರಣಗಲ್ಲಿನಲ್ಲಿ ಡಿವೈಎಸ್‌ಪಿ ಪ್ರಸಾದ್ ಗೋಖಲೆ ಅವರಿಗೆ ಮನವಿ ಸಲ್ಲಿಸಿದರು.

ವಿವಿಧ ಸಂಘಟನೆ ಮುಖಂಡರಿಂದ ತೋರಣಗಲ್ಲಿನಲ್ಲಿ ಡಿವೈಎಸ್‌ಪಿಗೆ ಮನವಿ

ಕನ್ನಡಪ್ರಭ ವಾರ್ತೆ ಸಂಡೂರು

ತಾಲೂಕಿನ ತಾಳೂರು ಗ್ರಾಮದಲ್ಲಿ ಇತ್ತೀಚೆಗೆ ಲೈಂಗಿಕ ದೌರ್ಜನ್ಯದಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಬಾಲಕಿಯ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಹಾಗೂ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಶನಿವಾರ ವಿವಿಧ ಸಂಘಟನೆಗಳ ಮುಖಂಡರು ತೋರಣಗಲ್ಲಿನಲ್ಲಿ ಡಿವೈಎಸ್‌ಪಿ ಪ್ರಸಾದ್ ಗೋಖಲೆ ಅವರಿಗೆ ಮನವಿ ಸಲ್ಲಿಸಿದರು.

ಎಸ್‌ಎಫ್‌ಐ ತಾಲೂಕು ಸಂಚಾಲಕ ಶಿವರೆಡ್ಡಿ ಮನವಿ ಸಲ್ಲಿಸಿ, ಏ. ೩೦ರಂದು ಗ್ರಾಮದಲ್ಲಿ ೧೪ ವರ್ಷದ ಬಾಲಕಿಯ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೂ ಮುಂಚಿತವಾಗಿ ಗ್ರಾಮದಲ್ಲಿ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ನಡೆದಿವೆ. ಮಾನಕ್ಕೆ ಅಂಜಿ ಕೆಲವು ಪ್ರಕರಣಗಳು ಬೆಳಕಿಗೆ ಬಾರದೆ ಮುಚ್ಚಿಹೋಗಿವೆ. ಆತಂಕಗೊಂಡ ಗ್ರಾಮದ ಜನತೆ ತಮ್ಮ ಮಕ್ಕಳನ್ನು ಶಾಲಾ, ಕಾಲೇಜುಗಳಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ತಾಲೂಕಿನಲ್ಲಿ ಬಹುತೇಕ ಶಾಲಾ, ಕಾಲೇಜುಗಳು ವಾಸಸ್ಥಳಗಳ ಹೊರ ವಲಯದಲ್ಲಿವೆ. ಶಾಲಾ ಮಕ್ಕಳಿಗೆ ಸುರಕ್ಷತೆಯ ಕೊರತೆ ಇದೆ ಎಂದರು.

ತಾಳೂರು ಹಾಗೂ ವಡ್ಡು ಗ್ರಾಮಗಳಲ್ಲಿನ ಶಾಲೆಗಳು ಊರ ಹೊರವಲಯದಲ್ಲಿದ್ದು, ಶಾಲೆಗಳಿಗೆ ಹೋಗಿ ಬರುವ ಬಾಲಕಿಯರಿಗೆ ಕಿರುಕುಳ ನೀಡುವ ಪುಂಡ-ಪೋಕರಿಗಳನ್ನು ನಿಗ್ರಹಿಸಬೇಕು. ಪ್ರತಿಯೊಂದು ಶಾಲಾ, ಕಾಲೇಜು, ಗ್ರಾಮಗಳಲ್ಲಿ ಮಹಿಳಾ ರಕ್ಷಣೆಯ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ತಾಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯ ಮನೆಯಲ್ಲಿನ ಕೆಲವು ಒಡವೆಗಳು ಕಳುವಾಗಿದ್ದು, ಅವುಗಳನ್ನು ಪತ್ತೆ ಹಚ್ಚಿ ಸಂತ್ರಸ್ತ ಕುಟುಂಬಕ್ಕೆ ನೀಡಬೇಕು. ಬಾಲಕಿಯ ಮೇಲೆ ಲೈಂಗಿಕ ಕಿರುಕುಳಕ್ಕೆ ಪ್ರಚೋದನೆ ನೀಡಿದ ಇನ್ನುಳಿದ ಆರೋಪಿಗಳ ಕುರಿತು ತನಿಖೆ ನಡೆಸಿ ಬಂಧಿಸಬೇಕು ಎಂದು ಮನವಿ ಮಾಡಿದರು.

ಎಸ್.ಎಫ್.ಐ. ತಾಲೂಕು ಸಮಿತಿ ಸದಸ್ಯರಾದ ಅಕ್ಷಯ್‌ಕುಮಾರ್, ಶಂಕರ, ಸಿಐಟಿಯು ಬಿಸಿಯೂಟ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ಡಿವೈಎಫ್‌ಐ ತಾಲೂಕು ಅಧ್ಯಕ್ಷ ಶರೀಫ್, ಜಿಲ್ಲಾ ಘಟಕದ ಮುಖಂಡ ಎಸ್. ಕಾಲುಬಾ ಉಪಸ್ಥಿತರಿದ್ದರು.

Share this article