ಬೀರವಾರ ಗ್ರಾಮದ ಮುಖ್ಯ ರಸ್ತೆಯಲ್ಲಿ ಪದೇ ಪದೇ ಇಂತಹ ಭೀಕರ ಅಪಘಾತಗಳು ನಡೆಯುತ್ತಲೇ ಇವೆ. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಕೂಡಲೇ ಇಲ್ಲಿ ಸ್ಕೈವಾಕ್ ನಿರ್ಮಿಸಿಕೊಡಬೇಕು ಎಂದು ಆಕ್ರೋಶಗೊಂಡ ಗ್ರಾಮಸ್ಥರು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಪೆನ್ಸಿಲ್ ತರಲು ರಸ್ತೆ ದಾಟುತ್ತಿದ್ದ ಬಾಲಕಿಯು ಕಾರು ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ನೆಲಮಂಗಲ ತಾಲೂಕಿನ ಬೀರವಾರ ಗ್ರಾಮದಲ್ಲಿ ನಡೆದಿದೆ. ಗುಡೇಮಾರನಹಳ್ಳಿ ಸಮೀಪದ ಬೀರವಾರದ ನಿವಾಸಿ ಶ್ರೀಕಾಂತ್, ಲತಾ ದಂಪತಿ ಪುತ್ರಿ ಲಿಖಿತಾ (10) ಅಪಘಾತದಲ್ಲಿ ಮೃತಪಟ್ಟ ಬಾಲಕಿ.
ಮೃತಬಾಲಕಿ ಅದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಶಾಲೆಯಲ್ಲಿ ಪರೀಕ್ಷೆ ಹಿನ್ನೆಲೆ ದೊಡ್ಡಮ್ಮ ವಿಶಾಲಾಕ್ಷಿ ಜೊತೆ ಶಾಲೆಗೆ ತೆರಳುತ್ತಿದ್ದ ವೇಳೆ ಪೆನ್ಸಿಲ್ ತರಲು ರಸ್ತೆ ದಾಟುವ ವೇಳೆ ನೆಲಮಂಗಲದಿಂದ ಕುಣಿಗಲ್ ಕಡೆಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಲಿಖಿತಾ ತನ್ನ ದೊಡ್ಡಮ್ಮ ವಿಶಾಲಾಕ್ಷಿ ಕಣ್ಣೆದುರೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾಳೆ. ಇದೇ ವೇಳೆ ಕಾರು ನಿಲ್ಲಿಸದೆ ಚಾಲಕ ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಸ್ವಲ್ಪ ದೂರ ಮುಂದೆ ಹೋಗಿ ಕಾರು ನಿಲ್ಲಿಸಿದ್ದಾನೆ. ಕಾರು ಚಾಲಕನ ಅಜಾಗರೂಕತೆ ಹಾಗೂ ವೇಗದ ವಾಹನ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಹಾಗೂ ಮೃತಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿ ಮೃತದೇಹ ಮರಣೋತ್ತರ ಪರೀಕ್ಷೆ ನಡೆದಿದ್ದು, ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ರೋಧನೆ ಮುಗಿಲುಮುಟ್ಟಿತ್ತು. ಘಟನೆ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಹಾಗೂ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮೃತ ಲಿಖಿತಾಳ ತಂದೆ ಶ್ರೀಕಾಂತ್ ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಯಾರ ಸಹಾಯವೂ ಇಲ್ಲದೆ, ಒಬ್ಬರ ಹತ್ತಿರ ಒಂದು ರುಪಾಯಿ ಪಡೆಯದೆ ಅವರನ್ನು ಬೆಳೆಸಿದ್ದೇನೆ, ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇನೆ. ನನ್ನ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಅವರ ಆರೈಕೆಯ ಜವಾಬ್ದಾರಿಯೂ ನನ್ನ ಮೇಲಿದೆ. ನಾನು ನನ್ನ ಅಮ್ಮನನ್ನು ನೋಡಿಕೊಳ್ಳಲು ವಾರಕ್ಕೆ ಒಂದೆರಡು ಬಾರಿ ಬರುತ್ತಿದ್ದೆ. ನನ್ನ ಮಕ್ಕಳನ್ನು ನೋಡಲು ಭಾನುವಾರ ಬಂದಿದ್ದೆ ಎಂದು ಹೇಳುತ್ತಾ ಭಾವುಕರಾದರು.
ಸ್ಕೈವಾಕ್ ನಿರ್ಮಿಸಲು ಆಗ್ರಹ:
ಬೀರವಾರ ಗ್ರಾಮದ ಮುಖ್ಯ ರಸ್ತೆಯಲ್ಲಿ ಪದೇ ಪದೇ ಇಂತಹ ಭೀಕರ ಅಪಘಾತಗಳು ನಡೆಯುತ್ತಲೇ ಇವೆ. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಕೂಡಲೇ ಇಲ್ಲಿ ಸ್ಕೈವಾಕ್ ನಿರ್ಮಿಸಿಕೊಡಬೇಕು ಎಂದು ಆಕ್ರೋಶಗೊಂಡ ಗ್ರಾಮಸ್ಥರು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.