ವಿಜಯಪುರ: ಶಿಕ್ಷಣದಿಂದ ಮಾತ್ರವೇ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ. ಆದ್ದರಿಂದ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆ, ಕ್ರೀಡೆಗಳಿಗೂ ಆದ್ಯತೆ ನೀಡಬೇಕು ಎಂದು ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಪ್ರೇಮಾ ನಾಗರಾಜಪ್ಪ ಹೇಳಿದರು.ಪಟ್ಟಣದ ರೋಟರಿ ಶಾಲೆಗೆ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಟಿಟಿ ಟೆನಿಸ್ ಟೇಬಲ್ ಕೊಡುಗೆ ನೀಡಿ ಮಾತನಾಡಿದ ಅವರು, ಕ್ರೀಡೆಗಳು ಮಕ್ಕಳ ಮಾನಸಿಕ ವಿಕಸನಕ್ಕೆ ಪೂರಕ. ಹೆಣ್ಣು ಮಕ್ಕಳು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಶಿಕ್ಷಕರು ಹೆಣ್ಣು ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳ ಜೊತೆಯಲ್ಲೇ ವೈಯಕ್ತಿಕ ಸ್ವಚ್ಛತೆ ಹಾಗೂ ಸ್ವಯಂ ರಕ್ಷಣೆ ಕುರಿತು ತರಬೇತಿ ನೀಡಬೇಕು ಎಂದು ಹೇಳಿದರು.ಸರ್ಕಾರಿ ಬಾಲಕಿಯರ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮನೋಹರ್ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ವಿವಿಧ ಸಂಘ, ಸಂಸ್ಥೆಗಳು, ಹಾಗೂ ಸಮುದಾಯ ಕೈ ಜೋಡಿಸಿದಾಗ ಶಿಕ್ಷಣದ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಪಡಿಸುವುದಕ್ಕೆ ಸಹಕಾರಿಯಾಗುತ್ತದೆ. ಟೇಬಲ್ ಟೆನ್ನಿಸ್ ಕೋರ್ಟ್ ನೀಡಿರುವುದರಿಂದ ಮಕ್ಕಳಿಗೆ ಮತ್ತಷ್ಟು ಉಪಯೋಗವಾಗಲಿದೆ ಎಂದು ಹೇಳಿದರು.
ರೋಟರಿ ಶಾಲೆ ಮುಖ್ಯಶಿಕ್ಷಕಿ ಮಂಜುಳಾ ಮಾತನಾಡಿ, ಮಕ್ಕಳು ಶಾಲೆಯಲ್ಲಿ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿ ಹಂತದಲ್ಲಿ ಸಿಗುವಂತಹ ಅವಕಾಶಗಳು ಜೀವನದಲ್ಲಿ ಮುಂದೆಂದೂ ಸಿಗುವುದಿಲ್ಲ. ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಪ್ರೋತ್ಸಾಹವನ್ನು ಸದುಪಯೋಗಪಡಿಸಿಕೊಂಡು, ಸಂಘ, ಸಂಸ್ಥೆಗಳು ನೀಡಿದ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಉತ್ತಮ ಸಾಧಕರಾಗಬೇಕು ಎಂದು ಹೇಳಿದರು.ಇನ್ನರ್ ವೀಲ್ ಸಂಸ್ಥೆಯ ಮಾಜಿ ಡಿಸ್ಟ್ರಿಕ್ಟ್ ಪ್ರೆಸಿಡೆಂಟ್ ಆಶಾಶೈಲೇಂದ್ರ, ಕಾರ್ಯದರ್ಶಿ ಮಾಲತಿಆನಂದ್ ಹಾಗೂ ಸದಸ್ಯರು ರೋಟರಿ ಶಾಲಾ ಮಕ್ಕಳು ಪಾಳ್ಗೊಂಡಿದ್ದರು.
ವಿಜೆಪಿ ೧೩ವಿಜಯಪುರ ರೋಟರಿ ಶಾಲೆಗೆ ಇನ್ನರ್ ವೀಲ್ ಸಂಸ್ಥೆಯಿಂದ ಟೇಬಲ್ ಟೆನ್ನಿಸ್ ಟೇಬಲ್ ಅನ್ನು ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಪ್ರೇಮಾನಾಗರಾಜಪ್ಪ ಕೊಡುಗೆಯಾಗಿ ನೀಡಿದರು.