ಶಿರಸಿ:
ಹುಕ್ಕೇರಿ ಹಿರೇಮಠದ ಬೆಳಗಾವಿ ಶಾಖೆಯಲ್ಲಿ ಮಂಗಳವಾರ ಹಿರೇಮಠದ ವತಿಯಂದ ಸ್ವರ್ಣವಲ್ಲೀ ಶ್ರೀಗಳನ್ನು ಸತ್ಕರಿಸಿ, ಗೀತಾಭಿಯಾನಾರ್ಣವ ಬಿರುದು ಪ್ರದಾನ ಮಾಡಿ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯರು, ಜಗದ್ಗುರು ರೇಣುಕಾಚಾರ್ಯರು ಮತ್ತು ಜಗದ್ಗುರು ಶಂಕರಾಚಾರ್ಯರು ಹಿಂದೆ ಒಟ್ಟಾಗಿ ಕೆಲಸ ಮಾಡಿದ್ದರೇನೋ ಎನ್ನುವ ಭಾವನೆ ನಮಗೆ ಬರುತ್ತಿದೆ. ಜಾತಿ ಮೀರಿ ಎರಡೂ ಮಠಗಳು ಕೆಲಸ ಮಾಡುತ್ತಿವೆ. ಮಠಗಳ ಮಧ್ಯೆ ಸಾಮರಸ್ಯ ಮೂಡಬೇಕು ಎನ್ನುವುದು ನಮ್ಮ ಭಾವನೆ. ಸ್ವರ್ಣವಲ್ಲೀ ಮಠ ಪೂರ್ಣ ಸುಖ ನೀಡುವ ಮಠವಾಗಿದೆ ಎಂದರು.
ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಭಗವದ್ಗೀತೆಯ ಅಭಿಯಾನವನ್ನು ಕರ್ನಾಟಕದ ತುಂಬ ಮಾಡುವ ಮೂಲಕ ಮನೆ ಮಾತಾಗಿದ್ದಾರೆ. ಶ್ರೀಗಳು ನಮ್ಮ ಸನಾತನ ಧರ್ಮದ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. 2007ರಿಂದಲೂ ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಹಿಂದೂ ಧರ್ಮದಲ್ಲಿರುವ ಎಲ್ಲ ಸಂಪ್ರದಾಯ ಮಠ, ಮಾನ್ಯಗಳು ಒಂದಾಗಿ ಸನಾತನ ಸಂಸ್ಕೃತಿ ಎತ್ತಿ ಹಿಡಿದಾಗ ಮಾತ್ರ ಭಾರತಕ್ಕೆ ಭವಿಷ್ಯ ಇದೆ. ಈ ನಿಟ್ಟಿನಲ್ಲಿ ನಮ್ಮದ್ದು ವೀರಶೈವ ಮಠ, ರೇಣುಕಾಚಾರ್ಯರ ಪರಂಪರೆಯ ಮಠ, ಸ್ವರ್ಣವಲ್ಲಿ ಜಗದ್ಗುರುಗಳದ್ದು ಶಂಕರಾಚಾರ್ಯರ ಪರಂಪರೆಯ ಮಠವಾಗಿದೆ. ಇತಿಹಾಸದಲ್ಲಿ ಜಗದ್ಗುರು ರೇಣುಕಾಚಾರ್ಯರು ಮತ್ತು ಶಂಕರಾಚಾರ್ಯರು ಒಂದಾಗಿದ್ದರು ಎನ್ನುವ ಮಾತು ಇದೆ ಎಂದರು.ಆಶೀರ್ವಚನ ನೀಡಿದ ಸ್ವರ್ಣವಲ್ಲೀ ಶ್ರೀ, ಎಲ್ಲ ಸಂಪ್ರದಾಯದ ಮಠಗಳು ಒಂದಾಗಬೇಕು, ಅದೇ ಸಮನ್ವಯ. ಧರ್ಮಗಳು, ಆಧ್ಯಾತ್ಮಿಕ ಚಿಂತನೆಗಳು ಭಾರತದಲ್ಲಿ ಹುಟ್ಟಿದಷ್ಟು ಬೇರೆಲ್ಲೂ ಹುಟ್ಟಿಲ್ಲ. ಭಾರತ ಅಖಂಡವಾಗಲು, ಇಲ್ಲಿನ ಸಮಸ್ಯೆ ನಿವಾರಣೆ ಆಗಲು ಎಲ್ಲ ಧಾರ್ಮಿಕ ಸಂಪ್ರದಾಯಗಳು ಒಂದಾಗಬೇಕು ಎಂದು ಹೇಳಿದರು.
ಭಗವದ್ಗೀತೆಯನ್ನು ಜನರ ಬಾಯಿಂದ ಹೇಳಿಸಬೇಕು. ಅವರಿಗೆ ತಿಳಿಸಬೇಕು ಎನ್ನುವುದೇ ಭಗವದ್ಗೀತೆ ಅಭಿಯಾನದ ಉದ್ದೇಶವಾಗಿದೆ. ಇದೇ 23ರಂದು ಬೆಳಗಾವಿಯಲ್ಲಿ ನಡೆಯಲಿರುವ ಭಗವದ್ಗೀತೆ ಅಭಿಯಾನದ ಮಹಾಸಮರ್ಪಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸ್ವರ್ಣವಲ್ಲೀ ಶ್ರೀಗಳು ಕರೆ ನೀಡಿದರು.