ಅಂಗವಿಕಲರಿಗೆ 10 ಸಾವಿರ ಮಾಸಾಶನ ನೀಡಿ

KannadaprabhaNewsNetwork |  
Published : Oct 09, 2025, 02:01 AM IST
4654 | Kannada Prabha

ಸಾರಾಂಶ

ವರ್ಷದಿಂದ ವರ್ಷಕ್ಕೆ ಬೆಲೆ ಏರಿಕೆಯ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಆದರೆ, ಅಂಗವಿಕಲರಿಗೆ ಅಗತ್ಯ ಪ್ರಮಾಣದಲ್ಲಿ ಮಾಸಾಶನ ನೀಡದೇ ಸರ್ಕಾರಗಳು ಅನ್ಯಾಯ ಮಾಡುತ್ತಿವೆ.

ಹುಬ್ಬಳ್ಳಿ:

ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಕಲಚೇತನರ ಮಾಸಾಶನವನ್ನು ₹10 ಸಾವಿರಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹು-ಧಾ ಪರಿಶ್ರಮ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಅಂಗವಿಕಲರು ತಮ್ಮ ತ್ರಿಚಕ್ರ ವಾಹನದಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ಲ್ಯಾಮಿಂಗ್ಟನ್ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಮಾರ್ಗವಾಗಿ ತಹಸೀಲ್ದಾರ್‌ ಕಚೇರಿಗೆ ಆಗಮಿಸಿದರು. ಪ್ರತಿಭಟನೆಯ ಉದ್ದಕ್ಕೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವರ್ಷದಿಂದ ವರ್ಷಕ್ಕೆ ಬೆಲೆ ಏರಿಕೆಯ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಆದರೆ, ಅಂಗವಿಕಲರಿಗೆ ಅಗತ್ಯ ಪ್ರಮಾಣದಲ್ಲಿ ಮಾಸಾಶನ ನೀಡದೇ ಸರ್ಕಾರಗಳು ಅನ್ಯಾಯ ಮಾಡುತ್ತಿವೆ. ಸದ್ಯ ಕೇಂದ್ರ ಸರ್ಕಾರ ಮಾತ್ರ ₹ 3 ಸಾವಿರ ನೀಡುತ್ತಿದ್ದು, ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಹೆಸರಿನಲ್ಲಿ ವಿಕಲಚೇತನರನ್ನು ಮರೆತಂತೆ ಕಾಣುತ್ತದೆ. ಸರ್ಕಾರದ ಈ ನಡೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ಪಂಚಾಯಿತಿ ಮತ್ತು ಪೌರಾಡಳಿತ ಸಂಸ್ಥೆಗಳು ಶೇ. 5ರಷ್ಟು ಹಣವನ್ನು ಅಂಗವಿಕಲರಿಗೆ ಖರ್ಚು ಮಾಡಬೇಕು. ಈಗಿರುವ ಸಾಮೂಹಿಕ ಪದ ತೆಗೆದು ಹಾಕಿ, ಅಂಗವಿಕಲರ ಕಲ್ಯಾಣ ಎಂದು ನಮೂದಿಸಬೇಕು. ಅಂಗವಿಕಲರಿಗೆ ಶಿಕ್ಷಣ, ವೃದ್ಧಾಪ್ಯದ ವರೆಗೂ ಮಾಸಾಶನ ಹಾಗೂ ಉಚಿತ ಆರೋಗ್ಯ ಸೇವೆ ಒದಗಿಸಬೇಕು. ಎಲ್ಲ ಖಾಸಗಿ ವಲಯದಲ್ಲಿಯೂ ಮೀಸಲಾತಿ ನೀಡಬೇಕು. ರಾಜ್ಯಾದ್ಯಂತ ಪ್ರಯಾಣಿಸಲು ಉಚಿತ ಬಸ್‌ಪಾಸ್ ನೀಡಬೇಕು. ವರ್ಷದ ಪ್ರಾರಂಭದಲ್ಲಿ ಉದ್ಯೋಗಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನೋಂದಾಯಿಸಿದ ಅಂಗವಿಕಲರಿಗೆ 100 ದಿನ ಕೆಲಸವನ್ನು ಖಾತ್ರಿಯಾಗಿ ನೀಡಬೇಕು. ಆರೈಕೆದಾರರಿಗೆ ನೀಡುವ ಸಹಾಯ ಧನವನ್ನು ₹3 ಸಾವಿರಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಪ್ರತಿಭಟನಾಕಾರರು ಮಂಡಿಸಿದರು.

ನಂತರ ಸಂಘದ ಅಧ್ಯಕ್ಷ ಅಜಯ ವಾಲ್ಮಿಕಿ ನೇತೃತ್ವದಲ್ಲಿ ತಹಸೀಲ್ದಾರ್‌ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ಕಾರ್ಯದರ್ಶಿ ಇಮಾಮಸಾಬ್‌ ಬಂಕಾಪೂರ, ದೇವೇಂದ್ರ ಬಿಂಕದಕಟ್ಟಿ, ಅಬ್ಬಾಸ, ರಫೀಕ್ ಕುಂದಗೋಳ, ದೇವರಾಜ, ಹನುಮಂತ, ಸಿದ್ಧಪ್ಪ, ಮಹ್ಮದ್ ಶಫಿ, ಇಬ್ರಾಹಿಂ ಮಕಾಂದರ, ಖಾದರ ಸವಣೂರ ಸೇರಿದಂತೆ ಹಲವರಿದ್ದರು.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ