ಪಂಚಮಸಾಲಿಗೆ ಜ.20ರೊಳಗೆ 2 ಎ ಮೀಸಲು ನೀಡಿ

KannadaprabhaNewsNetwork |  
Published : Dec 31, 2023, 01:30 AM IST
30ಕೆಡಿವಿಜಿ1-ದಾವಣಗೆರೆಯಲ್ಲಿ ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.  | Kannada Prabha

ಸಾರಾಂಶ

ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಮ್ಮಿಕೊಂಡಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೊಂದು ವಾರದಲ್ಲಿ ಕಾನೂನು ತಜ್ಞರ ಸಭೆ ಕರೆದು, ತೀರ್ಮಾನಿಸುವ ಭರವಸೆ ನೀಡಿದ್ದರಿಂದ ಹೋರಾಟಕ್ಕೆ ಅಲ್ಪ ವಿರಾಮ ನೀಡಿದ್ದೆವು. ಒಂದು ವಾರ ಕಾಲಾವಕಾಶ ಅಲ್ಲ, ಜ.20ರವರೆಗೆ ಅವಕಾಶ ನೀಡಿದ್ದೇವೆ.

ಕೂಡಲಸಂಗಮದ ಜಯ ಮೃತ್ಯುಂಜಯ ಶ್ರೀ ಗಡುವು । ಸಿಎಂ ಸಿದ್ದರಾಮಯ್ಯ ಭರವಸೆಯಿಂದ ಹೋರಾಟಕ್ಕೆ ವಿರಾಮ ನೀಡಿದ್ದೆವು

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವ ಬಗ್ಗೆ ಜ.20ರೊಳಗಾಗಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ, ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲಿ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಗಡುವು ನೀಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಮ್ಮಿಕೊಂಡಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೊಂದು ವಾರದಲ್ಲಿ ಕಾನೂನು ತಜ್ಞರ ಸಭೆ ಕರೆದು, ತೀರ್ಮಾನಿಸುವ ಭರವಸೆ ನೀಡಿದ್ದರಿಂದ ಹೋರಾಟಕ್ಕೆ ಅಲ್ಪ ವಿರಾಮ ನೀಡಿದ್ದೆವು ಎಂದರು.

ಒಂದು ವಾರ ಕಾಲಾವಕಾಶ ಅಲ್ಲ, ಜ.20ರವರೆಗೆ ಅವಕಾಶ ನೀಡಿದ್ದೇವೆ. ಅಷ್ಟರಲ್ಲೇ ಸರ್ಕಾರ ಸೂಕ್ತ ಕ್ರಮ ಕೈಗೊಂಡು, ಸಮಾಜದ ಬೇಡಿಕೆ ಈಡೇರಿಸಲು ಕೋರಲಾಗಿತ್ತು. ವಾರದ ಕಾಲಾವಕಾಶ ಕೋರಿದ್ದ ಸಿಎಂ ಸಿದ್ದರಾಮಯ್ಯ ಈವರೆಗೆ ಕಾನೂನು ತಜ್ಞರು, ಸಮುದಾಯದ ಪ್ರಮುಖರ ಸಭೆ ಕರೆದಿಲ್ಲ. ಮುಖ್ಯಮಂತ್ರಿಗಳ ಮಾತಿಗೆ ಬೆಲೆ, ಗೌರವ ಕೊಟ್ಟು ಮುತ್ತಿಗೆಯಿಂದ ಹಿಂದೆ ಸರಿದಿದ್ದೆವು. ಈಗ ಮುಖ್ಯಮಂತ್ರಿಯವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ಪಂಚಮಸಾಲಿ 2 ಎ ಮೀಸಲಾತಿ ವಿಚಾರವಾಗಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ, ಸರ್ಕಾರ ತನ್ನ ನಿಲುವು ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಪ್ರತಿ ವರ್ಷ ನಡೆಸುವ ಕೃಷಿ ಸಂಕ್ರಾಂತಿ ಹಾಗೂ ರಾಷ್ಟ್ರೀಯ ಬಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ತೀವ್ರ ಬರಗಾಲ ಹಿನ್ನೆಲೆಯಲ್ಲಿ ಕೂಡಲ ಸಂಗಮದ ಶ್ರೀಮಠದಲ್ಲಿ ಜ.14ರಂದು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ವೇಳೆ ಸಮುದಾಯದ ಪ್ರಮುಖರೊಂದಿಗೆ ಸಭೆ ಮಾಡಿ, ಸರ್ಕಾರದ ನಿಲುವು, ಮೀಸಲಾತಿಗಾಗಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಲಿಂಗಾಯತ ಎಲ್ಲಾ ಒಳ ಪಂಗಡಗಳ ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ವಿಚಾರವಾಗಿ ಲಿಂಗಾಯತದ ಎಲ್ಲಾ ಒಳ ಪಂಗಡಗಳ ರಾಜ್ಯಾಧ್ಯಕ್ಷರ ಸಭೆ ಶೀಘ್ರವೇ ದಾವಣಗೆರೆಯಲ್ಲಿ ಕರೆದು, ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ. ಸಭೆಯ ದಿನಾಂಕ ಸದ್ಯದಲ್ಲೇ ನಿಗದಿಪಡಿಸಲಿದ್ದೇವೆ ಎಂದು ತಿಳಿಸಿದರು.

ಮಹಾ ಅಧಿವೇಶನದಿಂದ ತಪ್ಪು ಸಂದೇಶ:

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ 24ನೇ ಮಹಾ ಅಧಿವೇಶನದಲ್ಲಿ ಉಪ ಜಾತಿ ಕಾಲಂನಲ್ಲಿ ಒಳ ಪಂಗಡದ ಹೆಸರು ಬರೆಸಬಾರದೆಂಬ ನಿರ್ಣಯ ಕೈಗೊಂಡಿರುವುದ ಸಮಾಜಕ್ಕೆ ತಪ್ಪು ಸಂದೇಶ ಹೋಗಿದೆ. ಗೊಂದಲವೂ ಉಂಟಾಗಿದೆ. ಸಮುದಾಯಗಳು ತಮ್ಮ ಒಳ ಪಂಗಡದ ಹೆಸರು ಬರೆಸುವುದು ಆ ಪಂಗಡದ ಅಸ್ಮಿತೆ, ಆ ಜನರ ಹಕ್ಕಾಗಿದೆ. ಮಹಾ ಅಧಿವೇಶನದ ವೇದಿಕೆಯಲ್ಲಿದ್ದ ಬಹುತೇಕ ಸ್ವಾಮೀಜಿಗಳೆಲ್ಲರೂ ಒಳ ಪಂಗಡಗಳ ಹೆಸರು ಬರೆಸಲು ಹೇಳಿದವರೇ ಆಗಿದ್ದಾರೆ. ಆದರೆ, ನಮ್ಮ ಯಾವುದೇ ನಿರ್ಧಾರಗಳು ಸಮುದಾಯದ ಒಳ ಪಂಗಡಗಳ ಸಾಮಾಜಿಕ ನ್ಯಾಯಕ್ಕೆ ತೊಡಕಾಗಬಾರದು ಎಂದು ಸೂಚ್ಯವಾಗಿ ಹೇಳಿದರು.

ಮೀಸಲಾತಿ ಹೋರಾಟ ಸಮಿತಿ ಪ್ರಮುಖರಾದ ಮಾಜಿ ಶಾಸಕ ಎಚ್.ಎಸ್‌.ಶಿವಶಂಕರ, ಪರಮೇಶ್ವರ ಗೌಡ, ವಕೀಲ ಯೋಗೇಶ, ಅಶೋಕ ಗೋಪನಾಳ, ಮಂಜುನಾಥ ಪೈಲ್ವಾನ್ ಇತರರಿದ್ದರು.

2 ಎ ಮೀಸಲಾತಿ ಕೊಡಿಸುವುದೇ ಗುರಿ

ಮಹಾಸಭಾ ತನ್ನ ನಿರ್ಣಯದ ಬಗ್ಗೆ ಪುನರ್ ಪರಿಶೀಲಿಸಬೇಕು. ವೀರಶೈವ ಲಿಂಗಾಯತರು ಹಿಂದೂಗಳು ಹೌದೋ ಅಥವಾ ಅಲ್ಲವೋ ಎಂಬ ಬಗ್ಗೆ ಮಹಾಸಭಾ ಎಲ್ಲರನ್ನೂ ಸೇರಿಸಿ, ಚರ್ಚಿಸಬೇಕು. ಜಾತಿ ಸಮೀಕ್ಷೆ ವಿಚಾರವಾಗಿ ರಾಜ್ಯದಲ್ಲಿ ಮತ್ತೊಮ್ಮೆ ವೈಜ್ಞಾನಿಕ ಸಮೀಕ್ಷೆಯಾಗಬೇಕು. ಹಿಂದಿನ ಸರ್ಕಾರ ಲಿಂಗಾಯತ ಎಲ್ಲಾ ಒಳ ಪಂಗಡಗಳನ್ನು ಸೇರಿಸಿ, 2 ಡಿ ಮೀಸಲಾತಿ ಕಲ್ಪಿಸಿತ್ತು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಹಿನ್ನೆಲೆಯಲ್ಲಿ ನಮಗೆ 2 ಡಿ ವಿಚಾರ ಬೇಡ. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಡಿಸುವುದೊಂದೇ ನಮ್ಮ ಗುರಿ ಎಂದು ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಗುರಿ ಇಟ್ಟ ಹಕ್ಕಿಯ ಕಣ್ಣು ಮಾತ್ರ ಅರ್ಜುನನಿಗೆ ಕಾಣುವಂತೆ ನಮಗೆ ಮೀಸಲಾತಿ ಕಣ್ಣು ಮಾತ್ರ ಕಾಣುತ್ತಿದೆ. ನನಗೆ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಮಾತ್ರ ಕಾಣುತ್ತದೆ. ವೀರಶೈವ ಮಹಾಸಭಾದವರು ಯಾವ ಸಮಾವೇಶ ಮಾಡಿದರೆಂಬುದೇ ಗೊತ್ತಿಲ್ಲ. ಮಹಾಸಭಾದ ಕೆಲ ನಿರ್ಣಯಗಳು ಹತ್ತಾರು ಗೊಂದಲಕ್ಕೆ ಕಾರಣವಾಗಿವೆ. ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠ

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ