ಹಾವೇರಿ: ಬರ ನಿರ್ವಹಣೆ ಕುರಿತಂತೆ ಜನ, ಜಾನುವಾರುಗಳಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸ್ಥಿತಿಗತಿಗಳ ಕುರಿತಂತೆ ಗ್ರಾಮವಾರು ಮಾಹಿತಿ ಸಂಗ್ರಹಿಸಲು ನೇಮಕಗೊಂಡ ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳು ಗ್ರಾಮವಾರು ವಸ್ತುಸ್ಥಿತಿಯ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.
ಕುಡಿಯುವ ನೀರಿನ ಪೂರೈಕೆ ಸ್ಥಿತಿಗತಿ ಕುರಿತು ನೈಜ ಮಾಹಿತಿ ಸಂಗ್ರಹಿಸಿ. ಕುಡಿಯುವ ನೀರು ಪೂರೈಕೆಗೆ ಇರುವ ಮೂಲಗಳು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾವ ಗ್ರಾಮಗಳು ಹಾಗೂ ಪಟ್ಟಣಗಳು ಅಥವಾ ಬಡಾವಣೆಗಳ ಮಾಹಿತಿಯನ್ನು ಸಂಗ್ರಹಿಸಿ ಪ್ರತಿ ಗ್ರಾಮ, ಪಟ್ಟಣಗಳಲ್ಲಿ ಪೈಪ್‌ಲೈನ್, ಕೊಳವೆಬಾವಿ, ಒವರ್‌ಹೆಡ್ ಟ್ಯಾಂಕ್‌ಗಳ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಮಾಹಿತಿಗಳನ್ನು ಸಂಗ್ರಹಿಸಬೇಕು. ಇವುಗಳ ಕಾರ್ಯಕ್ಷಮತೆ, ನಿರುಪಯುಕ್ತ ಹಾಗೂ ದುರಸ್ತಿ ಹಾಗೂ ಪ್ಲಸ್ಸಿಂಗ್ ಮೂಲಕ ಮರು ಬಳಕೆ ಕುರಿತಾಗಿ ಸೂಕ್ಷ್ಮವಾಗಿ ಪರಿಶೀಲನೆ ಮಾಡಿ ವಿವರವಾದ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಸೂಚಿಸಿದರು.
ಸರ್ಕಾರಿ ಮತ್ತು ಖಾಸಗಿ ಕೊಳವೆಬಾವಿಗಳ ಸಂಖ್ಯೆ ಸಂಗ್ರಹಿಸಿ, ಯಾವ ಗ್ರಾಮಗಳಲ್ಲಿ ಯಾವ ದಿನಗಳಿಂದ ನೀರಿನ ಕೊರತೆ ಉಂಟಾಗಬಹುದು? ಒಂದೊಮ್ಮೆ ನೀರಿನ ಕೊರತೆ ಉಂಟಾದರೆ ನೀರು ಪೂರೈಕೆಗೆ ಪರ್ಯಾಯ ಮಾರ್ಗಗಳ ಕುರಿತಂತೆ ವಿವರವಾದ ವರದಿ ನೀಡುವಂತೆ ಸೂಚನೆ ನೀಡಿದರು.ಟ್ಯಾಂಕರ್ ಕೊನೆಯ ಆಯ್ಕೆ: ಎಲ್ಲ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿಕೊಳ್ಳಬೇಕು. ಮಾಲೀಕರೊಂದಿಗೆ ಬಾಡಿಗೆ ಒಪ್ಪಂದ ಮಾಡಿಕೊಂಡು ಈ ಕೊಳವೆಬಾವಿಗಳಿಂದ ನೀರಿನ ಪೂರೈಕೆಗೆ ಕ್ರಮವಹಿಸಬೇಕು. ಟ್ಯಾಂಕರ್ ಬಳಕೆ ಕೊನೆಯ ಆಯ್ಕೆಯಾಗಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಉಪ ವಿಭಾಗಾಧಿಕಾರಿ ಚೆನ್ನಪ್ಪ, ಮಹ್ಮದ ಖಿಜರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ನಾಗರಾಜ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಅಂತರವಳ್ಳಿ, ತೋಟಗಾರಿಕೆ ಉಪನಿರ್ದೇಶಕ ಪ್ರದೀಪ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಎಸ್. ಸಂತಿ ಇತರರು ಇದ್ದರು.