ವರ್ಷದೊಳಗೆ ೧೩,೫೦೦ಕ್ಕೂ ಅಧಿಕ ಕುಟುಂಬಗಳಿಗೆ ಪಟ್ಟಾ

KannadaprabhaNewsNetwork | Updated : Dec 15 2023, 01:31 AM IST

ಸಾರಾಂಶ

ಹಾನಗಲ್ಲ ತಾಲೂಕಿನಲ್ಲಿ ಹಲವು ಸಮಸ್ಯೆಗಳು ಬಹಳ ವರ್ಷಗಳಿಂದ ಪರಿಹಾರ ಕಾಣದೇ ಸಮಸ್ಯೆಗಳಾಗಿಯೇ ಉಳಿದಿವೆ. ಅಂಥ ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸಲಾಗಿದೆ. ಹೊಸ ಕಂದಾಯ ಗ್ರಾಮ, ಉಪ ಗ್ರಾಮಗಳನ್ನು ರಚಿಸಿ ವರ್ಷದೊಳಗೆ ೧೩,೫೦೦ಕ್ಕೂ ಅಧಿಕ ಕುಟುಂಬಗಳಿಗೆ ಪಟ್ಟಾ ಕೊಡುವ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ಹಾನಗಲ್ಲದ ಜನಸಂಪರ್ಕ ಕಚೇರಿಯಲ್ಲಿ ನಡೆದ ಅಕ್ಕಿಆಲೂರು ಬ್ಲಾಕ್ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಾನಗಲ್ಲ: ತಾಲೂಕಿನಲ್ಲಿ ಹಲವು ಸಮಸ್ಯೆಗಳು ಬಹಳ ವರ್ಷಗಳಿಂದ ಪರಿಹಾರ ಕಾಣದೇ ಸಮಸ್ಯೆಗಳಾಗಿಯೇ ಉಳಿದಿವೆ. ಅಂಥ ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸಲಾಗಿದೆ. ಹೊಸ ಕಂದಾಯ ಗ್ರಾಮ, ಉಪ ಗ್ರಾಮಗಳನ್ನು ರಚಿಸಿ ವರ್ಷದೊಳಗೆ ೧೩,೫೦೦ಕ್ಕೂ ಅಧಿಕ ಕುಟುಂಬಗಳಿಗೆ ಪಟ್ಟಾ ಕೊಡುವ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಇಲ್ಲಿನ ಜನಸಂಪರ್ಕ ಕಚೇರಿಯಲ್ಲಿ ನಡೆದ ಅಕ್ಕಿಆಲೂರು ಬ್ಲಾಕ್ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹೊಲಗಳಿಗೆ ತೆರಳುವ ದಾರಿ ಸಮಸ್ಯೆ ಬಗೆಹರಿಸಲು ಕಳೆದ ಹಲವು ವರ್ಷಗಳಿಂದ ಸರ್ಕಾರದ ಹಂತದಲ್ಲಿ ಪ್ರಯತ್ನ ನಡೆಸಿದ್ದೇನೆ. ಆ ಪ್ರಯತ್ನವೀಗ ಫಲ ಸಿಗುವ ಹಂತ ತಲುಪಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗಟ್ಟಿ ಹೆಜ್ಜೆ ಇಟ್ಟಿದ್ದಾರೆ. ಸೆಟ್‌ಲೈಟ್ ಚಿತ್ರ ತರಿಸಿಕೊಂಡು ದಾರಿ ಸಮಸ್ಯೆಗೆ ಮುಕ್ತಿ ನೀಡಲು ನಿರ್ಧರಿಸಿದ್ದಾರೆ. ತಾಲೂಕಿನಲ್ಲಿಯೂ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಿಡಿಒ ಒಳಗೊಂಡ ಜಂಟಿ ಕಾರ್ಯಪಡೆಯ ಮೂಲಕ ಹೊಲಗಳಿಗೆ ತೆರಳುವ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಗಮನ ನೀಡಲಾಗಿದೆ ಎಂದರು.

ರೈತರ ಪಹಣಿ ದುರಸ್ತಿಗೆ ಆದ್ಯತೆ ನೀಡಲಾಗಿದ್ದು, ಪ್ರತಿ ತಿಂಗಳು ಕನಿಷ್ಠ ೬೦-೭೦ ಪ್ರಕರಣಗಳನ್ನು ಉಪ ವಿಭಾಗಾಧಿಕಾರಿಗಳು ಇತ್ಯರ್ಥ ಪಡಿಸುತ್ತಿದ್ದಾರೆ. ಹಣಕಾಸಿನ ಹೊರೆ ಇದ್ದರೂ ದಾನಿಗಳು ಹಾಗೂ ವೈಯಕ್ತಿಕ ನೆರವಿನಿಂದ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ಡೆಸ್ಕ್ ಸೇರಿದಂತೆ ಇತರ ಪೀಠೋಪಕರಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಹೊಲಿಗೆ ಯಂತ್ರ ವಿತರಿಸಲಾಗುತ್ತಿದೆ. ಕಳೆದ ೫ ವರ್ಷಗಳಲ್ಲಿ ಹಿಂದಿನ ಸರ್ಕಾರ ಹೊಸ ಬಸ್ ಖರೀದಿಸದಿರುವುದರಿಂದ ಸಮಸ್ಯೆ ಉಂಟಾಗಿದೆ. ಹಾನಗಲ್ ಡಿಪೋಕ್ಕೆ ಕನಿಷ್ಠ ೩೦-೩೫ ಬಸ್ ಬೇಕಿವೆ. ಇದಕ್ಕಾಗಿ ಪ್ರಯತ್ನಿಸುತ್ತಿದ್ದು, ಹಲವು ವರ್ಷಗಳ ಈ ಸಮಸ್ಯೆ ರಾತ್ರೋರಾತ್ರಿ ಬಗೆಹರಿಯುವುದು ಕಷ್ಟ ಎಂದು ಹೇಳಿದ ಅವರು, ಚುನಾವಣೆ ಭರದಲ್ಲಿ ಹಿಂದಿನ ಸರ್ಕಾರ ಹಣಕಾಸಿನ ಲಭ್ಯತೆ ಗಮನದಲ್ಲಿಟ್ಟುಕೊಳ್ಳದೇ ₹೨೦ ಸಾವಿರ ಕೋಟಿಗೂ ಅಧಿಕ ಕಾಮಗಾರಿಗಳಿಗೆ ಅನುಮೋದನೆ ನೀಡಿ ಕೈತೊಳೆದುಕೊಂಡಿದೆ. ಇದರಿಂದ ಸಮಸ್ಯೆ ಉದ್ಭವಿಸಿದೆ. ಹಾಗಾಗಿ ಹೊಸ ಕಾಮಗಾರಿ, ಯೋಜನೆಗಳ ಅನುಷ್ಠಾನಕ್ಕೆ ವಿಳಂಬ ಉಂಟಾಗಿದೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬಳಿ ಹಣ ಇಲ್ಲ ಎನ್ನುವ ವಾದದಲ್ಲಿ ಹುರುಳಿಲ್ಲ ಎಂದರು.

ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಕೊಟ್ರಪ್ಪ ಕುದರಿಸಿದ್ದನವರ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್ ಇನ್ನಿತರ ಮುಖಂಡರು ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮಾಜಿ ಉಪಾಧ್ಯಕ್ಷೆ ಅನಿತಾ ಶಿವೂರ, ಮುಖಂಡರಾದ ಯಾಸೀರಅರಾಫತ್ ಮಕಾನದಾರ, ಮೆಹಬೂಬ್ ಬ್ಯಾಡಗಿ, ಸತ್ತಾರಸಾಬ್‌ ಅರಳೇಶ್ವರ, ಮಧು ಪಾಣಿಗಟ್ಟಿ, ರಜಿಯಾ ಹಿತ್ತಲಮನಿ ಈ ಸಂದರ್ಭದಲ್ಲಿದ್ದರು. ರಾಮಚಂದ್ರ ಕಲ್ಲೇರ ಕಾರ್ಯಕ್ರಮ ನಿರೂಪಿಸಿದರು.

Share this article