- ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಲು ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯ
ದೇವದಾಸಿ ಮಹಿಳೆಯರ ಮಕ್ಕಳಿಗೆ ನಿವೇಶನ ಮತ್ತು ಮನೆ ನಿರ್ಮಿಸಿಕೊಳ್ಳಲು ಸರ್ಕಾರ ₹10 ಲಕ್ಷ ನೀಡಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.
ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಜಾತಿಗಳ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಬೇಕು. ವೈಜ್ಞಾನಿಕವಾಗಿ ದೇವದಾಸಿ ಮಹಿಳೆಯರ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸಬೇಕು. ಆದರೆ ಅಧಿಕಾರಿಗಳು ಈ ಕೆಲಸ ಮಾಡುತ್ತಿಲ್ಲ ಎಂದು ಸಿಎಂ ಗಮನ ತಂದರು.ದೇವದಾಸಿ ಮಹಿಳೆಯರ ಮಕ್ಕಳಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಪ್ರಸ್ತುತ ₹2 ಲಕ್ಷ ಹಣ ನೀಡುತ್ತಿದೆ. ಆದರೆ ₹2 ಲಕ್ಷ ವೆಚ್ಚದಲ್ಲಿ ಅಗತ್ಯ ಸಿಮೆಂಟ್, ಮರಳು ಸಹ ತರಲು ಆಗುವುದಿಲ್ಲ. ಇನ್ನು ಮನೆ ಕಟ್ಟಿಕೊಳ್ಳುವುದು ಕನಸಿನ ಮಾತು. ಹೀಗಾಗಿ, ಸರ್ಕಾರ ಕನಿಷ್ಠ ₹10 ಲಕ್ಷ ನೀಡಿದರೆ ಒಂದು ಸೂರು ಕಟ್ಟಿಕೊಳ್ಳಲು ಸಾಧ್ಯವಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದಲ್ಲಿ ಇನ್ನೂ ದೇವದಾಸಿ ಪದ್ಧತಿ ಮುಂದುವರಿದಿದೆ. ಇದನ್ನು ತಡೆಯಲು ಅಧಿಕಾರಿಗಳು ಮುಂದಾಗುತ್ತಿಲ್ಲ. ನರದೌರ್ಬಲ್ಯದಿಂದ ಮಹಿಳೆಯರಿಗೆ ಕೂದಲು ಗಂಟು ಬೀಳುತ್ತವೆ. ಇದು ದೇವರ ಮುಡಿ ಎಂದು ಬಿಟ್ಟುಕೊಳ್ಳುತ್ತಾರೆ. ಈ ಬಗ್ಗೆ ಅಧಿಕಾರಿಗಳು ಅಂತಹ ಮಹಿಳೆಯರಿಗೆ ವೈಜ್ಞಾನಿಕವಾಗಿ ಅರಿವು ಮೂಡಿಸಬೇಕು. ಮೌಢ್ಯಗಳಿಂದ ಹೊರಬರಲು ಜಾಗೃತಿ ಮೂಡಿಸಬೇಕು. ಆದರೆ, ಅಂಥ ಕೆಲಸಗಳು ಮಾಡುತ್ತಿಲ್ಲ. ಜೊತೆಗೆ ನಕಲಿ ಜಾತಿ ಪ್ರಮಾಣ ಸೃಷ್ಟಿ ಮಾಡುವುದು ಹೆಚ್ಚಾಗುತ್ತಿದ್ದರೂ ತಲೆಕಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅವರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದರು.
- - - -28ಕೆಡಿವಿಜಿ34, 35.ಜೆಪಿಜಿ: